ಮಲ್ಪೆ: ಆಕರ್ಷಣೀಯ ವಿಹಾರ ತಾಣ ಮಲ್ಪೆ ಬೀಚ್ ಇದೀಗ ಪ್ರವಾಸಿಗರಿಗೆ ತೆರೆದುಕೊಂಡಿದೆ. ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯದಂತೆ ಹಾಕಲಾಗಿದ್ದ ತಡೆಬೇಲಿಯನ್ನು ರವಿವಾರ ತೆರವುಗೊಳಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮ:
ಸಾಮಾನ್ಯವಾಗಿ ಮಳೆಗಾಲದಲ್ಲಿ ಕಡಲಬ್ಬರ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಪ್ರತೀ ವರ್ಷ ಮಳೆಗಾಲದಲ್ಲಿ ಬೀಚ್‌ನ ಉದ್ದಕ್ಕೂ ರಿಫ್ಲೆಕ್ಟೆಡ್ ಪಟ್ಟಿ ಮತ್ತು ಫಿಶ್‌ನೆಟ್ ತಡೆಬೇಲಿಯನ್ನು ಕಟ್ಟಿ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನೂ ಅಳವಡಿಸಲಾಗುತ್ತದೆ. ಅದಾಗಿಯೂ ನಿಯಮ ಉಲ್ಲಂಘಿಸಿ ನೀರಿಗಿಳಿದವರಿಗೆ ದಂಡವನ್ನು ವಿಧಿಸಲಾಗುತ್ತಿತ್ತು. ಇದೀಗ ಬೀಚ್ ಬಯಲು ರಂಗ ಮಂದಿರದ ನೇರ ಸಮುದ್ರಕ್ಕಿಳಿಯುವಲ್ಲಿ ಅಪಾ ಕಾರಿ ಸುಳಿಗಳಿರುವುದರಿಂದ ಆ ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲಡೆ ತಡೆಬೇಲಿಯನ್ನು ತೆರವು ಮಾಡಲಾಗಿದೆ.
ಪ್ರವಾಸಿಗರ ಕಲರವ:
ರಾಜ್ಯಾದ್ಯಂತ ಅನ್‌ಲಾಕ್ ಆದ ಬೆನ್ನಲ್ಲೆ ಕರಾವಳಿಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಚೌತಿ ಹಬ್ಬದ ಬಳಿಕ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಅಗಮಿಸುತ್ತಿದ್ದಾರೆ. ವೀಕೆಂಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು, ಸಂಜೆ ವೇಳೆಗೆ ಸ್ಥಳೀಯರು ವಿಹಾರಕ್ಕೆ ಬರುವುದರಿಂದ ಜನಸಂದಣಿ ಹೆಚ್ಚಾಗುವುದರೊಂದಿಗೆ ಪಾರ್ಕಿಂಗ್ ಏರಿಯಾಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗುತ್ತಿದೆ.
ವಾರದೊಳಗೆ ಎಲ್ಲ ಸಾಹಸ ಕ್ರೀಡೆಗಳು ಆರಂಭ :
ಲಾಕ್‌ಡೌನ್‌ನಿಂದಾಗಿ ಮಳೆಗಾಲಕ್ಕೆ ಮೊದಲೇ ಸ್ಥಗಿತಗೊಂಡಿದ್ದ ಬೀಚ್ ವಾಟರ್ ನ್ಪೋರ್ಟ್ಸ್ ರವಿವಾರದಿಂದ ಮತ್ತೆ ಆರಂಭಗೊಂಡಿದೆ. ಪ್ಯಾರಾ ಸೈಲಿಂಗ್, ಬನಾನಾ ರ್ಯಾಪ್ಟಿಂಗ್, ಬಂಪಿ ರೈಡ್, ಝೋರ್ಬಿಂಗ್, ಪವರ್ ಬೈಕ್, ಕ್ರಿಕೆಟ್, ಶೂಟಿಂಗ್, ಗಾಳಿಪಟ ಮೊದಲಾದವುಗಳೂ ಆರಂಭಗೊಂಡಿದೆ. ಉಳಿದ ಸಾಹಸ ಕ್ರೀಡೆಗಳು ಒಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ ಎನ್ನಲಾಗಿದೆ.
ಸ್ವಚ್ಛತ ಕಾರ್ಯ :
ಸುರಕ್ಷತೆಯ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ವರು ಜೀವರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೀಚ್‌ನ ಮುಖ್ಯ ಭಾಗದ ಸ್ವಚ್ಛತ ಕಾರ್ಯ ನಡೆಸಲಾಗಿದೆ. ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಕ್ಲೀನಿಂಗ್ ಮಾಡಲಾಗುತ್ತಿದೆ. ಕೆಲವೊಂದು ದೀಪಗಳು ಕೆಟ್ಟು ಹೋಗಿದ್ದು ಅದನ್ನು ದುರಸ್ತಿಗೊಳಿಸಲಾಗುತ್ತದೆ. ಒಟ್ಟಿನಲ್ಲಿ ಅಕ್ಟೋಬರ್ 1ರಿಂದ ಬೀಚ್ ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳಲಿದೆ.