Advertisement
ರಜಾದಿನ ಫುಲ್ ರಶ್ಸೀ-ವಾಕ್ ಆರಂಭಗೊಂಡ ದಿನದಿಂದಲೂ ನೋಡಲು ಜನಸಾಗರವೇ ಇಲ್ಲಿಗೆ ಹರಿದು ಬರುತ್ತಿತ್ತು. ಇದೀಗ ಎಪ್ರಿಲ್ ಮೇ ತಿಂಗಳ ರಜಾ ದಿನದಲ್ಲಿ ಮತ್ತಷ್ಟು ಹೆಚ್ಚಾಗಿದೆ. ರಜಾ ದಿನಗಳಲ್ಲಿ ಸಂಜೆ ವೇಳೆ ನೂಕು ನುಗ್ಗಲು ಶುರುವಾಗಿದೆ. ಇದೀಗ ಸೈಂಟ್‌ಮೇರೀಸ್‌ಗೆ ಬೋಟಿನ ಯಾನ ನಿಷೇಧವಾದ ಬಳಿಕ ಸೀವಾಕ್ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಿದೆ. ಸೈಂಟ್‌ಮೇರೀಸ್‌ಗೆಂದು ಬಂದವರು ಈಗ ಸೀವಾಕ್ ನೋಡಿ ಹೋಗುತ್ತಾರೆ.
ಜನ ಸಾಮಾನ್ಯರು ನಡೆದಾಡಲು ಭಯಪಡುತ್ತಿದ್ದ ತಾಣವನ್ನು ವ್ಯವಸ್ಥಿತವಾಗಿ ಅಭಿವೃದ್ದಿ ಪಡಿಸಿದ್ದರಿಂದ ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು ವಾಯು ವಿಹಾರದೊಂದಿಗೆ ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸುವಂತಾಗಿದೆ. ಅಪಾಯಕಾರಿ ಪ್ರದೇಶವನ್ನು ಹೇಗೆ ಅಭಿವೃದ್ದಿ ಪಡಿಸಿ ಪ್ರವಾಸಿಕೇಂದ್ರವನ್ನಾಗಿ ರೂಪಿಸಬಹುದು ಎಂಬುವುದಕ್ಕೆ ಸೀವಾಕ್ ಒಂದು ಸ್ಪಷ್ಟ ನಿದರ್ಶನವಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಸುಮಾರು 480 ಮೀ. ಉದ್ದ, 8.5 ಅಡಿ ಅಗಲದಲ್ಲಿ ಸಮುದ್ರಕ್ಕೆ ವಿಸ್ತರಿಸಿರುವ ಈ ವಾಕ್‌ವೇಯನ್ನು ಬ್ರೇಕ್‌ವಾಟರ್ ಮೇಲೆ ಪ್ರವಾಸೋದ್ಯಮ ಇಲಾಖೆ ನಿರ್ಮಿತಿ ಕೇಂದ್ರ ನೇತೃತ್ವದಲ್ಲಿ 53.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಾತ್ರಿ ವೇಳೆಯಲ್ಲಿ ಇಲ್ಲಿನ ನಡೆದಾಡಲು ಹಾದಿ ಉದ್ದಕ್ಕೂ ಅಲಂಕಾರಿಕಾ ದೀಪಗಳನ್ನು ಅಳವಡಿಸಲಾಗಿದೆ.
Related Articles
ಸುಮಾರು 380 ಮೀಟರ್ ಹಾದಿಯ ಮಧ್ಯೆ ಮೀನುಗಾರ ಮೀನುಗಾರಿಕೆಗೆ ತೆರಳಲೆಂದು ಕಡಲಿನತ್ತ ಮುಖ ಮಾಡಿದರೆ, ಮಡದಿ ಬುಟ್ಟಿಯಲ್ಲಿ ಮೀನುಹೋತ್ತು ಮಾರಾಟ ಮಾಡಲು ನಗರದತ್ತ ಮುಖ ಮಾಡಿದ್ದಾಳೆ ಅವಳ ಹಿಂದೆ ಪಾಠಿಯ ಚೀಲವನ್ನು ಹೆಗಲಿಗೇರಿಕೊಂಡು ಅಮ್ಮನ ಸೆರಗು ಹಿಡಿದು ಶಾಲೆಯತ್ತ ಹೊರಟ ಮಗ ಗಚ್ಚುಗಾರೆಯಿಂದ ತಯಾರಿಸಿದ ಆಕರ್ಷಣೀಯ ಶಿಲ್ಪ ಕಲಾಕೃತಿಯನ್ನು ಇಲ್ಲಿನ ಕಾಣಬಹುದಾಗಿದ್ದು, ಸೆಲ್ಫಿ ತೆಗಿಸಿಕೊಳ್ಳುವ ದೃಶ್ಯಗಳು ಇಲ್ಲಿ ಮಾಮೂಲಾಗಿದೆ.
Advertisement
ಮೂರು ದ್ವೀಪಗಳ ವೀಕ್ಷಣೆವಾಕ್ ವೇ ನಲ್ಲಿ ಸಂಚರಿಸುವ ಪ್ರವಾಸಿಗರಿಗೆ ಸಮುದ್ರದ ವಿಹಂಗಮ ನೋಟ ಕಾಣಸಿಗುತ್ತದೆ. ಇಲ್ಲಿನ ತುತ್ತ ತುದಿಯಲ್ಲಿ ನಿಂತರೆ ಸೈಂಟ್‌ಮೇರಿ, ದರಿಯಗಡ್ ಮತ್ತು ಲೈಟ್‌ಹೌಸ್ ಈ ಮೂರು ದ್ವೀಪವನ್ನು ಏಕಕಾಲದಲ್ಲಿ ವೀಕ್ಷಿಸಬಹುದಾಗಿದೆ. ಮೀನುಗಾರಿಕಾ ದೋಣಿಗಳ ಸಂಚಾರ, ಸಮುದ್ರದ ಅಲೆಗಳ ಅಪ್ಪಳಿಸುವಿಕೆ, ಸಂಜೆಯ ಸೂರ್ಯಾಸ್ತ, ಬಾನಿನಲ್ಲಿ ಮೂಡುವ ಬಣ್ಣದ ಚಿತ್ತಾರಗಳನ್ನು ಸವಿಯಬಹುದು. ಮಲ್ಪೆ ಕಡಲತೀರ ಭಾರತದಲ್ಲೇ ಹೆಚ್ಚು ಸುರಕ್ಷಿತ ಎನ್ನಲಾಗಿದ್ದು, ಇಲ್ಲಿನ ಸೌಂದರ್ಯವನ್ನು ಸವಿಯಲು ದೇಶದ ಉದ್ದಗಲದ ಜನ ಇಲ್ಲಿಗೆ ಬರುತ್ತಿದ್ದಾರೆ. – ನಟರಾಜ ಮಲ್ಪೆ
ಚಿತ್ರ: ಪ್ರೇಮ್ ಕಲ್ಮಾಡಿ