Advertisement

Malpe Beach parking problem: ಬಹು ಅಂತಸ್ತು ಪಾರ್ಕಿಂಗ್‌ ವ್ಯವಸ್ಥೆ ರೂಪುಗೊಳ್ಳಲಿ

04:06 PM May 22, 2023 | Team Udayavani |

ಮಲ್ಪೆ: ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಪ್ರವಾಸಿ ಕೇಂದ್ರವಾದ ಮಲ್ಪೆ ಬೀಚ್‌ಗೆ ಅದಕ್ಕೆ ತಕ್ಕಂತೆ ಆಗಮಿಸುವ ಪ್ರವಾಸಿಗಳ ವಾಹನಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಪ್ರವಾಸಿ ವಾಹನಗಳ ಸಂಖ್ಯೆ ಹೆಚ್ಚಳವಾದಂತೆ ಇಲ್ಲಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಇಲ್ಲದಿರುವುದರಿಂದ ಜನರು ರಸ್ತೆ ಬದಿಯಲ್ಲೇ ಪಾರ್ಕ್‌ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಸ್ಥಳೀಯರಿಗೂ ಇಲ್ಲಿ ನಡೆದಾಡಲು, ವಾಹನ ಚಲಾಯಿಸಲು ಕಷ್ಟಸಾಧ್ಯವಾಗಿದೆ. ಹಾಗಾಗಿ ಬಹು ಅಂತಸ್ತು ಪಾರ್ಕಿಂಗ್‌ ವ್ಯವಸ್ಥೆ ಇಲ್ಲಿ ರೂಪುಗೊಳ್ಳಲು ನಮ್ಮ ನೂತನ ಶಾಸಕರು ಮನ ಮಾಡಬೇಕೆಂಬ ಆಶಯ ಇಲ್ಲಿನ ನಾಗರಿಕರದ್ದಾಗಿದೆ.

Advertisement

ಇಲ್ಲಿ ಬಹುತೇಕ ಘನ ವಾಹನಗಳನ್ನು ರಸ್ತೆ ಬದಿಯಲ್ಲೇ ಪಾರ್ಕ್‌ ಮಾಡಲಾಗುತ್ತಿದೆ. ಮೊದಲೇ ಫ‌ುಟ್‌ಪಾತ್‌ ವ್ಯವಸ್ಥೆ ಇಲ್ಲದಿರುವುದರಿಂದ ಒಂದೆಡೆ ವಾಹನ ಸಂಚಾರ, ಇನ್ನೊಂದೆಡೆ ರಸ್ತೆಯಲ್ಲೇ ನಿಂತಿರುವ ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದು ನಡೆದಾಡಬೇಕಾದ ಪರಿಸ್ಥಿತಿ ಪಾದಚಾರಿಗಳದ್ದಾಗಿದೆ.

ಪ್ರಸ್ತುತ ಬೀಚ್‌ ಪಾರ್ಕಿಂಗ್‌ ಏರಿಯಾಗಳು ಅಲ್ಲದೆ ಶಿವಪಂಚಾಕ್ಷರಿ ಭಜನ ಮಂದಿರದವರೆಗೂ, ಇತ್ತ ಬೀಚ್‌ ದಕ್ಷಿಣ ಭಾಗದ ಹನುಮಾನ್‌ನಗರದ ವರೆಗೆ ಇಂಟರ್‌ಲಾಕ್‌ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಬೀಚ್‌ನಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ ಶುಲ್ಕ ಇಲ್ಲ. ದ್ವಿಚಕ್ರ ವಾಹನಗಳನ್ನು ಬೀಚ್‌ ರಸ್ತೆ ಬದಿ, ಪ್ಯಾರಡೈಸ್‌ ಹೊಟೇಲಿನ ಮುಂಭಾಗದಲ್ಲಿ ನಿಲ್ಲಿಸುತ್ತಾರೆ. ಬಹುತೇಕ ಪ್ರವಾಸಿ ವಾಹನಗಳು ಇಲ್ಲಿನ ಪಾರ್ಕಿಂಗ್‌ ಸಮಸ್ಯೆಯನ್ನು ನೋಡಿ “ಸಾಕಪ್ಪ ಸಾಕು ಮಲ್ಪೆ ಬೀಚ್‌ ಸಹವಾಸ’ ಎಂದು ಗೋಗರೆ ಯುತ್ತಿರುವುದು ಸಾಮಾನ್ಯವಾಗಿದೆ.
ಬೀಚ್‌ನಲ್ಲಿ ಸ್ಥಳಾವಕಾಶದ ಕೊರತೆ ತೀವ್ರವಾಗಿದೆ. ಇದರಿಂದ ಪಾರ್ಕಿಂಗ್‌ಗೆ ವಿಶಾಲವಾದ ಜಾಗ ಹೊಂದಿ ಕೊಳ್ಳುವುದು ಕಷ್ಟ ಸಾಧ್ಯ.

ಲಭ್ಯ ಜಾಗಗಳಲ್ಲಿ ಅತೀ ಹೆಚ್ಚು ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಳ್ಳುವುದು ಆನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ನೂತನ ಶಾಸಕರು ಮುತುವರ್ಜಿ ವಹಿಸಬೇಕೆಂಬುದು ಜನರ ಅಭಿಪ್ರಾಯವಾಗಿದೆ.

ಬಹು ಅಂತಸ್ತು ಪಾರ್ಕಿಂಗ್‌ ಶೀಘ್ರ ಆಗಲಿ
ಇತರ ಮಹಾನಗರಗಳಲ್ಲಿ ಇರುವ ಹಾಗೆ ಬಹು ಅಂತಸ್ತು ವಾಹನ ಪಾರ್ಕಿಂಗ್‌ ವ್ಯವಸ್ಥೆಯನ್ನು ಬೀಚ್‌ನಲ್ಲೂ ಅಳವಡಿಸಿಕೊಳ್ಳ‌ಬೇಕು, ಖಾಸಗಿ ಜಾಗವನ್ನು ಪಡೆದುಕೊಂಡು, ಸರಕಾರಿ ಖಾಸಗಿ ಸಹಭಾಗಿತ್ವದಲ್ಲಿ ಬಹುಅಂತಸ್ತು ಪಾರ್ಕಿಂಗ್‌ಗಳನ್ನು ರೂಪಿಸಿಕೊಳ್ಳಬಹುದೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
-ಪಾಂಡುರಂಗ ಮಲ್ಪೆ, ಅಧ್ಯಕ್ಷರು, ಬೀಚ್‌ ಅಭಿವೃದ್ಧಿ ಸಮಿತಿ

Advertisement

ಅಲ್ಲಲ್ಲಿ ವಾಹನಗಳ ಪಾರ್ಕಿಂಗ್‌ನಿಂದ ಸಮಸ್ಯೆ
ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ, ವಾಹನಗಳ ಸಂಖ್ಯೆಯು ಹೆಚ್ಚಾಗಿದೆ. ಈಗಿರುವ ಪಾರ್ಕಿಂಗ್‌ ಸ್ಥಳಗಳು ಇಲ್ಲಿಗೆ ಬರುವ ವಾಹನಗಳಿಗೆ ಏನೇನು ಸಾಲದು. ಹಾಗಾಗಿ ವಾಹನಗಳನ್ನು ಸಿಕ್ಕಸಿಕ್ಕ ಜಾಗಗಳಲ್ಲಿ ಪಾರ್ಕ್‌ ಮಾಡಲಾಗುತ್ತದೆ.
-ಸುರೇಶ್‌ ಕುಂದರ್‌, ಸ್ಥಳೀಯರು

 

Advertisement

Udayavani is now on Telegram. Click here to join our channel and stay updated with the latest news.

Next