ಮಲ್ಪೆ: ಮಲ್ಪೆ ಬೀಚ್‌ನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ ಕಾರುಗಳಲ್ಲಿ ಕಳ್ಳತನದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕಳ್ಳರು ಚಾಲಾಕಿತನದಲ್ಲಿ ಕಾರಿನ ಗಾಜನ್ನು ಒಡೆದು ಕಾರಿನೊಳಗಿದ್ದ ಹಣ, ಒಡವೆ, ಮೊಬೈಲ್ ಇನ್ನಿತರ ವಸ್ತುಗಳನ್ನು ದೋಚಿದ ಘಟನೆಗಳು ನಡೆದಿವೆ.
ಇದೀಗ ಮಕ್ಕಳಿಗೆ ರಜೆ, ಐಟಿ ಬಿಟಿ ಕಂಪೆನಿಯ ಮಂದಿ ರಜೆ ಹಾಕಿ ಪ್ರವಾಸಕ್ಕೆ ತೆರಳುವುದು ಸಾಮಾನ್ಯ. ಕಳೆದ ಎರಡು ವಾರಗಳಿಂದ ಪ್ರವಾಸಿ ತಾಣಗಳಿಗೆ ಜನರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವಿಕೇಂಡ್‌ಗಳಲ್ಲಿ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು,ವಾಹನಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಪಾರ್ಕಿಂಗ್ ಏರಿಯಾಗಳು ಭರ್ತಿಯಾಗಿದ್ದು, ಇದನ್ನೇ ಅನುಕೂಲವೆಂದು ಕಂಡುಕೊಂಡ ಕಳ್ಳರು ನಿತ್ಯವೂ ಕಳ್ಳತನ ನಡೆಸುತ್ತಿದ್ದು ವಾಹನಗಳ ಮಾಲಿಕರಿಗೆ ನಿದ್ದೆಗೆಡಿಸಿದೆ.
ಈ ಕುರಿತು ಕೆಲವರು ಪೊಲೀಸರಿಗೆ ದೂರು ನೀಡಿದರೆ ಇನ್ನು ಕೆಲವರು ನೀಡುವುದಿಲ್ಲ. ಇತ್ತೀಚೆಗೆ ಪೊಲೀಸರ ಎದುರಲ್ಲೇ ಕಳ್ಳನೋರ್ವ ಕಾರಿನಿಂದ ಪರ್ಸ್ ಎಗರಿಸಿರುವ ಘಟನೆ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ಎರಡು ವಾರಗಳಿಂದ ಕಳ್ಳರ ಹಾವಳಿ ಮಿತಿ ಮೀರುತ್ತಿದೆ. ಇರುವ ಪಾರ್ಕಿಂಗ್ ಏರಿಯಾದಲ್ಲಿ ಕಾರುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ನಡೆಸುತ್ತಿದ್ದಾರೆ. ಕಳ್ಳತನ ಕೇಸ್‌ಗಳು ಹೆಚ್ಚುತ್ತಿರುವು ಜನರಲ್ಲಿ ಆತಂಕ ಉಂಟಾಗಿದೆ.
ಪೊಲೀಸ್ ನಿಯೋಜನೆ
ಮಧ್ಯಾಹ್ನ 2 ಗಂಟೆಯಿಂದ 6ಗಂಟೆಯವರೆಗೆ ಕಳ್ಳರ ಈ ಕೃತ್ಯ ನಡೆಯುತ್ತಿದೆ. ಪಾರ್ಕಿಂಗ್ ಏರಿಯಾ ಮತ್ತು ಕಡಲತೀರಕ್ಕೆ ಪುರುಷ ಮತ್ತು ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರವಾಸಿಗರು ಸಮುದ್ರವನ್ನು ನೋಡಿ ಮೈರೆತು ತಮ್ಮ ವಸ್ತುಗಳ ಬಗ್ಗೆ ಕಾಳಜಿ ವಹಿಸುವುದು ಕಡಿಮೆ. ಈ ಬಗ್ಗೆ ಆಗಾಗ ಮೈಕ್ ಮೂಲಕ (ವಾಚ್ ಟವರ್) ಪ್ರವಾಸಿಗರಿಗೆ ಎಚ್ಚರಿಕೆಯನ್ನು ನೀಡಲಾಗುತ್ತದೆ.
– ಶಕ್ತಿವೇಲು, ಸಬ್ ಇನ್ಸ್‌ಪೆಕ್ಟರ್, ಮಲ್ಪೆ ಆರಕ್ಷಕ ಠಾಣೆ