Advertisement
ಮೂರ್‍ನಾಲ್ಕು ಕಿ.ಮೀ. ಉದ್ದದ ಬೀಚ್‌ನಲ್ಲಿ ಕೆಲವರು ಎಲ್ಲೆಂದರಲ್ಲಿ ಈಜಾಡಲು ಮುಂದಾಗುತ್ತಾರೆ. ಕೆಲವೊಂದು ಭಾಗ ಹೆಚ್ಚು ಅಪಾಯಕಾರಿಯಾಗಿದೆ. ಸಮುದ್ರದಡಿ ಹೊಂಡಗಳಿದ್ದು ಅಲ್ಲಿ ಸುಳಿಯಾಕಾರದ ಆಲೆಗಳು ಏಳುತ್ತವೆ. ಅಂಥ ಸ್ಥಳಗಳು ಈಜು ಬಲ್ಲವರಿಗೂ ಅಪಾಯಕಾರಿಯೇ. ಜೀವರಕ್ಷಕರ ಎಚ್ಚರಿಕೆಯನ್ನು ಧಿಕ್ಕರಿಸುವ ಕೆಲವು ಪ್ರವಾಸಿಗರು ಅಂತಹ ಅಪಾಯಕಾರಿ ಸ್ಥಳಗಳಲ್ಲೂ ನೀರಿಗಿಳಿದು ಅಪಾಯಕ್ಕೆ ಸಿಲುಕುವುದು ಸಾಮಾನ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಬೀಚ್ ಅಭಿವೃದ್ಧಿ ಸಮಿತಿಯು ಈಜು ವಲಯ ನಿರ್ಮಿಸಲು ಮುಂದಾಗಿದ್ದು ಅಪಾಯಕಾರಿ ಸ್ಥಳವನ್ನು ಗುರುತಿಸಿ ಕೆಂಪು ಬಾವುಟಗಳನ್ನು ಹಾಕಿ ಎಚ್ಚರಿಕೆ ಫಲಕ ಅಳವಡಿಸಲಾಗಿದೆ.
ಬೀಚ್‌ನಲ್ಲಿ ದಕ್ಷಿಣ ದಿಕ್ಕಿನ ಬಯಲು ರಂಗಮಂಟಪದ ಬಳಿ ಮತ್ತು ಸೈಂಟ್ ಮೇರೀಸ್ ದ್ವೀಪದ ಪೂರ್ವ ದಿಕ್ಕಿನಲ್ಲಿ ಈಜು ವಲಯ ರಚಿಸಲಾಗಿದೆ. ಇದನ್ನು 80 ಫ್ಲೋಟ್, 12 ಆ್ಯಂಕರ್ ಬಳಸಿ 200 ಮೀಟರ್ ಉದ್ದ ಮತ್ತು 180 ಮೀಟರ್ ಅಗಲದಲ್ಲಿ ನಿರ್ಮಿಸ ಲಾಗಿದೆ. ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ 100 ಮೀಟರ್ ಉದ್ದ, 70 ಮೀ. ಅಗಲದಲ್ಲಿ ನಿರ್ಮಿಸಲಾಗಿದ್ದು, ಪ್ರಸ್ತುತ ಇಲ್ಲಿ 300 ಫಿಶಿಂಗ್ ಫ್ಲೋಟ್‌ಗಳನ್ನು ಹಾಕಲಾಗಿದ್ದು, 10 ಆ್ಯಂಕರ್ ಮತ್ತು ರೋಪ್‌ಗ್ಳನ್ನು ಆಳವಡಿಸಲಾಗಿದೆ. ನಿಯಮ ಮೀರಿ ಕಡಲಿಗಿಳಿಯುವ ಪ್ರವಾಸಿಗರು ದಂಡ ತೆರಬೇಕಾಗುತ್ತದೆ ಎಂದು ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ ಮತ್ತು ಬೀಚ್ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಮಲ್ಪೆ ತಿಳಿಸಿದ್ದಾರೆ.