ಮಲ್ಪೆ: ರವಿವಾರ ಮಲ್ಪೆ ಬೀಚ್‌ನಲ್ಲಿ ಸಮುದ್ರದಲ್ಲಿ ಇಬ್ಬರ ರಕ್ಷಣೆ ಮಾಡಿದ ಬೆನ್ನಲ್ಲೆ ಸೋಮವಾರ ಬೆಳಗ್ಗೆ ಸಮುದ್ರ ಪಾಲಾಗುತ್ತಿದ್ದ ನಾಲ್ವರನ್ನು ರಕ್ಷಿಸಿದ ಘಟನೆ ಸಂಭವಿಸಿದೆ.
ಸಮುದ್ರ ಪಾಲಾಗುತ್ತಿದ್ದ ಬಿಜಾಪುರ ಜಿಲ್ಲೆಯ ಯುವಕರಾದ ಮೊಬಿನೊ, ಸೋಫಿಯಾ ಅಹಮ್ಮದ್, ಮೊಹಮ್ಮದ್ ಮತ್ತು ನಬೀಲ್‌ಅವರನ್ನು ಇಲ್ಲಿನ ಜೀವರಕ್ಷಕ ತಂಡ ರಕ್ಷಿಸಿದೆ.
ಈ ನಾಲ್ವರು ಇತರರೊಂದಿಗೆ ಟೆಂಪೋ ಟ್ರಾವೆಲರ್ ಮೂಲಕ ಬಿಜಾಪುರದಿಂದ ಉಡುಪಿಗೆ ಪ್ರವಾಸಕ್ಕೆಂದು ರವಿವಾರ ಬಂದಿದ್ದರು. ಸೋಮವಾರ ಬೆಳಗ್ಗೆ ಮಲ್ಪೆ ಬೀಚ್‌ಗೆ ಬಂದಿದ್ದು, ಇವರಲ್ಲಿ ಈ ನಾಲ್ವರು ನೀರಿಗಿಳಿದು ಆಟವಾಡುತ್ತಿದ್ದರು. ಕಡಲು ಪ್ರಕ್ಷುಬ್ದವಾಗಿರುವುರಿಂದ ಅಲೆಯ ಅಬ್ಬರವೂ ಜೋರಾಗಿತ್ತು.
ಮಧ್ಯೆ ಹೊಂಡ ಇರುವುದನ್ನು ಆರಿಯದ ಇವರು ಸುಳಿಯ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದರು. ಪ್ರಾಣ ರಕ್ಷಣೆಗಾಗಿ ಇವರು ಕೂಗಿದ್ದಾರೆನ್ನಲಾಗಿದೆ. ತತ್‌ಕ್ಷಣ ಇಲ್ಲಿನ ಜೀವರಕ್ಷಕ ತಂಡದ ಭರತ್, ವಿನೋದ್, ಮಧುಕರ, ಜನಾರ್ದನ್, ವಷದ್, ರವಿ, ಸೂರಿ, ಸಚಿನ್ ಕೂಡಲೇ ಧಾವಿಸಿ ಬಂದು ಸಮುದ್ರ ಪಾಲಾಗುತ್ತಿದ್ದ ನಾಲ್ವರನ್ನೂ ರಕ್ಷಿಸಿದ್ದಾರೆ. ಮಲ್ಪೆ ಬೀಚ್ ನೋಡಿ ಚಿಕ್ಕಮಗಳೂರು ಸುತ್ತಾಡಿ ಮತ್ತೆ ಬಿಜಾಪುರಕ್ಕೆ ಹೋಗುವುದೆಂದು ಅವರೆಲ್ಲ ತೀರ್ಮಾನಿಸಿದ್ದರು ಎಂದು ತಿಳಿದು ಬಂದಿದೆ.
ಸದ್ಯ ಸಮುದ್ರದಲ್ಲಿ ಈಜಾಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಜೀವ ರಕ್ಷಕ ತಂಡದ ಮಾತನ್ನು ಲೆಕ್ಕಿಸದೇ ಈಜಾಡುವುದು, ಆಟವಾಡುವುದು ಕಂಡು ಬಂದಿದೆ. ಆದ್ದರಿಂದ ಸೋಮವಾರದಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ತಡೆಬೇಲಿ ಹಾಕಲಾಗುವುದು ಎಂದು ಬೀಚ್ ಅಭಿವೃದ್ದಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.