Advertisement

ಅಪೌಷ್ಟಿ ಕತೆ: ಪೋಷಕರಿಗೆ ಸಿಗುತ್ತೆ ದಿನದ ಭತ್ಯೆ

03:07 PM Jul 04, 2021 | Team Udayavani |

ಕಲಬುರಗಿ: ಕೊರೊನಾ ಸೋಂಕಿನ ಸಂಭವನೀಯ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪ್ರಮಾಣ ಬೀರುತ್ತದೆ ಎನ್ನುವ ತಜ್ಞರ ಹೇಳಿಕೆ ಹಿನ್ನೆಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ.

Advertisement

ಗಂಭೀರ ಪರಿಸ್ಥಿತಿಯಲ್ಲಿ ಸರ್ಕಾರದ ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರ (ಎನ್‌ಆರ್‌ಸಿ) ಕ್ಕೆ ಮಕ್ಕಳು ದಾಖಲಾದರೆ, ಮಗುವಿನೊಂದಿಗೆ ಇರುವ ತಾಯಿ ಅಥವಾ ತಂದೆಗೆ ದಿನದ ಭತ್ಯೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಸರಾಸರಿ ಎರಡೂವರೆ ಲಕ್ಷ ಮಕ್ಕಳು ಆರು ವರ್ಷದೊಳಗಿನವರು ಇದ್ದಾರೆ. ಇದರಲ್ಲಿ 26,571 ಮಕ್ಕಳು ಸಾಧಾರಣ ಅಪೌಷ್ಟಿಕ ಮತ್ತು 607 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ತೀವ್ರವಾಗಿ ನರಳುತ್ತಿರುವ ಮಕ್ಕಳಿಗಾಗಿ ನಾಲ್ಕು ಪುನಶ್ಚೇತನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ನಗರದ ಹಳೆ ಜಿಲ್ಲಾಸ್ಪತ್ರೆ (ಜಿಮ್ಸ್‌ ಆವರಣ)ಯಲ್ಲಿ 10 ಬೆಡ್‌ ಹಾಗೂ ಚಿಂಚೋಳಿ, ಚಿತ್ತಾಪುರ, ಸೇಡಂನಲ್ಲಿ ತಲಾ ಐದು ಬೆಡ್‌ಗಳ ಶಾಶ್ವತ ಪುನಶ್ಚೇತನ ಕೇಂದ್ರಗಳು ಇವೆ. ಈ ನಾಲ್ಕು ಕೇಂದ್ರಗಳಲ್ಲಿ ಈಗಾಗಲೇ 79 ಜನ ಅಪೌಷ್ಟಿಕ ಮಕ್ಕಳನ್ನು ದಾಖಲಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶರಣಬಸಪ್ಪ ಗಣಜಲಖೇಡ್‌. ಚಿಂಚೋಳಿಯಲ್ಲಿ ಪ್ರತ್ಯೇಕವಾದ ಹಾಸ್ಟೆಲ್‌ ನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ 48 ಮಕ್ಕಳನ್ನು ದಾಖಲಿಸಲಾಗಿದೆ.

ಕೊರೊನಾ ಭೀತಿಯಿಂದ ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಬರಲು ಪೋಷಕರು ಹಿಂದೇಟು ಹಾಕುತ್ತಿರುವ ಕಾರಣಕ್ಕೆ ಹಾಸ್ಟೆಲ್‌ ವ್ಯವಸ್ಥೆ ಮಾಡಲಾಗಿದೆ. ಇತ್ತ, ಸೇಡಂ-13, ಕಲಬುರಗಿ-12 ಮತ್ತು ಚಿತ್ತಾಪುರದಲ್ಲಿ ಆರು ಮಕ್ಕಳು ದಾಖಲಾಗಿದ್ದಾರೆ. ಉಳಿದ ತಾಲೂಕು ಆಸ್ಪತ್ರೆಗಳಲ್ಲೂ ಇಂತಹ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪೌಷ್ಟಿಕ ಆಹಾರ: ಪುನಶ್ಚೇತನ ಕೇಂದ್ರಗಳಿಗೆ ದಾಖಲಾಗುವ ಮಕ್ಕಳಿಗೆ ಮುಖ್ಯವಾಗಿ ಅವರ ಆರೈಕೆ ಮತ್ತು ಅವರಿಗೆ ಪೂರಕವಾದ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಮಕ್ಕಳ ತಜ್ಞರು ಮತ್ತು ಆಹಾರ ಪದ್ಧತಿ ತಜ್ಞರು ಪರೀಕ್ಷಿಸಿ ಮಕ್ಕಳಿಗೆ ಅಗತ್ಯವಾದ ಆಹಾರ ಪೂರೈಸಲಾಗುತ್ತದೆ. ಮಕ್ಕಳ ತೂಕದ ಆಧಾರ ಮೇಲೆ ಪೌಷ್ಟಿಕ ಆಹಾರ ಕೊಡಲಾಗುತ್ತದೆ ಎಂದು ಜಿಲ್ಲಾ ಶಸ್ತ್ರಜ್ಞ ಡಾ| ಎ.ಎಸ್‌. ರುದ್ರವಾಡಿ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಅಪೌಷ್ಟಿಕ ಮಕ್ಕಳಿಗಾಗಿ ಯೇ ಪ್ರತ್ಯೇಕ ಅಡುಗೆ ಕೋಣೆ ಇದೆ. ಆಹಾರ ಪದ್ಧತಿ ತಜ್ಞರು ಸಲಹೆಯಂತೆ ಆಹಾರ ಪೂರೈಸುವ ಉದ್ದೇಶದಿಂದಲೇ ಈ ವ್ಯವಸ್ಥೆ ಮಾಡಲಾಗಿದೆ.

ಮಕ್ಕಳಿಗೆ ಹಾಲು, ಮೊಟ್ಟೆ, ಶೇಂಗಾ ಉಂಡೆ, ಮೊಳಕೆ ಕಾಳು, ಅಗತ್ಯವಾದಲ್ಲಿ ಗಂಜಿ ವಿತರಿಸಲಾಗುತ್ತದೆ. ಪ್ರತಿ ಮಗುವಿನೊಂದಿಗೆ ಒಬ್ಬ ಪೋಷಕರು ಇರಲು ಅವಕಾಶವಿದೆ ಎನ್ನುತ್ತಾರೆ ಅವರು.

Advertisement

ಪಾಲಕರಿಗೆ ದಿನದ ಭ್ಯತೆ: ಅಪೌಷ್ಟಿಕತೆಯು ಕಲ್ಯಾಣ ಕರ್ನಾಟಕ ಭಾಗಕ್ಕೆ ಪೆಡಂಭೂತವಾಗಿ ಕಾಡುತ್ತಿದೆ. ಬಡತನ, ಅನಕ್ಷರತೆ, ಬಾಲ್ಯ ವಿವಾಹದಂತ ಪದ್ಧತಿಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಮಕ್ಕಳು ಹುಟ್ಟುತ್ತಲೇ ಕಡಿಮೆ ತೂಕ ಹೊಂದಿ, ಮಾನಸಿಕ ಮತ್ತು ದೈಹಿಕವಾಗಿ ಬಳಲುವಂತೆ ಆಗುತ್ತದೆ. ಇಂತಹ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಾದ ತಂದೆ-ತಾಯಿ ದುಡಿಯುವುದರಲ್ಲೇ ಕಳೆದು ಹೋಗುತ್ತಾರೆ. ಹೀಗಾಗಿ ವೈದ್ಯರ ಸೂಚನೆಯಂತೆ ಪುನಶ್ಚೇತನ ಕೇಂದ್ರಗಳಿಗೆ ಗಂಭೀರ ಅಪೌಷ್ಟಿಕ ಮಕ್ಕಳನ್ನು ದಾಖಲಿಸಿದರೆ, ಅವರ ಜತೆಗೆ ಇರುವ ಪಾಲಕರಿಗೆ ದಿನ ಭತ್ಯೆಯನ್ನು ಸರ್ಕಾರ ಒದಗಿಸುತ್ತಿದೆ. ಸಾಕಷ್ಟು ಪೋಷಕರು ಅಪೌಷ್ಟಿಕ ಮಕ್ಕಳು ಕಾಳಜಿ ವಹಿಸುವುದು ಕಂಡು ಬರುತ್ತಿಲ್ಲ. ಅವರು ತಮ್ಮ ನಿತ್ಯದ ಕೂಲಿ ಬಗ್ಗೆಯೇ ಗಮನ ಕೊಡುತ್ತಾರೆ. ತೀವ್ರ ಅಪೌಷ್ಟಿಕ ಮಕ್ಕಳನ್ನು ಕನಿಷ್ಟ 14 ದಿನಗಳ ಕಾಲ ಆರೈಕೆ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಪೋಷಕರು ಮಕ್ಕಳೊಂದಿಗೆ ಇರಬೇಕಾಗುತ್ತದೆ. ಮಕ್ಕಳ ಕಾಳಜಿಯೊಂದಿಗೆ ಅವರ ಕೂಲಿ ಹಣವೂ ಸಿಗುವಂತೆ ಆಗಬೇಕೆಂಬ ನಿಟ್ಟಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಒಬ್ಬ ಪೋಷಕರಿಗೆ 275ರೂ. ನೀಡಲಾಗುತ್ತದೆ ಎಂದು ಜಿಲ್ಲಾ ಶಸ್ತ್ರಜ್ಞ ಡಾ| ರುದ್ರವಾಡಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next