Advertisement

“ಮಲೆನಾಡಿನ ತಿರುಪತಿ’ಅರುಣಗಿರಿ

02:53 PM Sep 07, 2019 | Suhan S |

ಸುತ್ತಲೂ ಹಸಿರಿನ ಗದ್ದೆ, ದಟ್ಟ ಕಾಡು, ಜುಳು ಜುಳು ಹರಿಯುವ ಹೊಳೆ, ಅದರ ನಡುವೆಯೊಂದು ಬೆಟ್ಟ. ಆ ಬೆಟ್ಟದ ಮೇಲೆ ಶ್ರೀ ಲಕ್ಷ್ಮಿವೆಂಕಟೇಶ್ವರನ ಸನ್ನಿಧಾನ. ತೀರ್ಥಹಳ್ಳಿ ತಾಲೂಕಿನ ಆರಗದ ಅರುಣಗಿರಿಯ ಈ ದೇಗುಲ “ಮಲೆನಾಡಿನ ತಿರುಪತಿ’ ಅಂತಲೇ ಪ್ರಸಿದ್ಧಿ. ವಿಜಯನಗರದ ಅರಸರು ಮತ್ತು ನಂತರ ಆಳ್ವಿಕೆ ಮಾಡಿದ, ಕೆಳದಿ ಅರಸರ ದೈವಿಕ ಶಕ್ತಿಕೇಂದ್ರ ಅಂತಲೇ ಇದು ಬಿಂಬಿತವಾಗಿತ್ತು.

Advertisement

ಅರುಣ ಮಹರ್ಷಿಗಳು ಇಲ್ಲಿನ ಗುಡ್ಡದಲ್ಲಿ ಬಹುಕಾಲ ತಪಸ್ಸನ್ನಾಚರಿಸಿ, ಶ್ರೀಮನ್ನಾರಾಯಣನ ದರ್ಶನ ಪಡೆದಿದ್ದರು ಎಂಬ ಪ್ರತೀತಿ ಇದೆ. ಅರುಣ ಮಹರ್ಷಿಗಳ ತಪೋ ಭೂಮಿಯಾದ ಕಾರಣ ಈ ಕ್ಷೇತ್ರ “ಅರುಣಗಿರಿ’ ಅಂತಲೇ ಪ್ರಸಿದ್ಧಿ ಪಡೆಯಿತು. “ಅಣ್ಣಿಗಿರಿ’, “ಹಣ್ಣಿಗಿರಿ’, “ಅಣ್ಣಯ್ಯನಗಿರಿ’ ಅಂತಲೂ ಈ ಬೆಟ್ಟಕ್ಕೆ ಕರೆಯುತ್ತಾರೆ.

ವಿಜಯನಗರದ ಅರಸರು ಇಲ್ಲಿ ವಿಶೇಷ ಪೂಜೆ ನಡೆಸಿ, ದಾನ ದತ್ತಿ ನೀಡಿದ ಉಲ್ಲೇಖಗಳಿವೆ. ಕೆಳದಿ ಅರಸರು, ಬಿದನೂರು ಮತ್ತು ಕವಲೇದುರ್ಗವನ್ನು ಆಳುವಾಗ, ದಿಗ್ವಿಜಯ ಪ್ರಾಪ್ತಿಯ ನಂತರ ಇಲ್ಲಿಗೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದರಂತೆ. ದೇವರ ಸೇವೆ ಭೂದಾನ, ಗೋದಾನ, ಅರ್ಚಕರ ನಿವಾಸ ನಿರ್ಮಾಣ, ಧ್ವಜಸ್ತಂಭ ಸ್ಥಾಪನೆ ಇತ್ಯಾದಿ ಹರಕೆ ಸೇವೆ ಸಲ್ಲಿಸಿದ್ದರು ಎಂಬ ಪ್ರತೀತಿ ಇದೆ.

ದೇಗುಲದ ಬಲಭಾಗದ ಬಂಡೆಯಲ್ಲಿ ಪಾದಗಳ ಗುರುತಿದ್ದು, ಇದನ್ನು “ದೇವರು ದಂಡ ಊರಿದ ಸ್ಥಳ’ ಎಂದು ನಂಬಿ, ಭಕ್ತರು ಪೂಜಿಸುತ್ತಾರೆ. ದೇಗುಲ ತಲುಪಲು ತಿರುಪತಿಯಂತೆ ಇಲ್ಲಿಯೂ 960 ಮೆಟ್ಟಿಲುಗಳಿವೆ. ಈ ಬೆಟ್ಟದ ಕೆಳಭಾಗದಲ್ಲಿ ಸಿದ್ಧರ ಗುಹೆಯಿದೆ. ಇಲ್ಲಿ ಹಲವಾರು ಋಷಿ- ಮುನಿಗಳು ತಪಸ್ಸುಗೈದಿದ್ದಾರೆ ಎನ್ನಲಾಗುತ್ತದೆ. ಬಂಡೆಗಳ ಮೇಲಿರುವ ಋಷಿ-ಮುನಿಗಳ, ದೇವತೆಗಳ ಮತ್ತು ಶಾಸನದ ಕುರುಹುಗಳು ಶಿಥಿಲಾವಸ್ಥೆ ತಲುಪಿವೆ.

ಶ್ರಾವಣ, ಇಲ್ಲಿ ವಿಶೇಷ ಮಾಸ. ಪ್ರತಿ ಶನಿವಾರ ದೇವರಿಗೆ ಸರ್ವಾಲಂಕಾರ ಪೂಜೆ ನಡೆಯುತ್ತದೆ. ದಸರಾ, ದೀಪಾವಳಿ, ಯುಗಾದಿಗಳಂದು ವಿಶೇಷ ಅಭಿಷೇಕ, ಪೂಜೆ ಮತ್ತು ಮಹಾ ನೈವೇದ್ಯ ಸಮರ್ಪಣೆ ನಡೆಯುತ್ತದೆ. ವಿವಾಹ, ಪುತ್ರ ಸಂತಾನ, ವಿದ್ಯೆ, ಉದ್ಯೋಗ, ಸರ್ವದುರಿತ ನಿವಾರಣೆ- ಇತ್ಯಾದಿಗಳ ಸಂಬಂಧ ಇಲ್ಲಿ ಪ್ರಾರ್ಥಿಸಲು, ಬಹಳ ದೂರದಿಂದ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ಅಕ್ಷಯ ತದಿಗೆಯಂದು ಮಹಾ ರಥೋತ್ಸವ ವೈಭವದಿಂದ ನಡೆಯುತ್ತದೆ.

Advertisement

ದರುಶನಕೆ ದಾರಿ…

ತೀರ್ಥಹಳ್ಳಿ ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರದ ಅರಗದ ಬಳಿ ಈ ದೇವಾಲಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next