ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ತನ್ನನ್ನು ಆಯ್ಕೆ ಮಾಡುವ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದರು.
ಸಿಎಎ ಮತ್ತು ಎನ್‌ಆರ್‌ಸಿ ವಿಚಾರದಲ್ಲಿ ಕೇಂದ್ರ ಸರಕಾರ ದೇಶದ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಜೆಎನ್‌ಯು ವಿಶ್ವವಿದ್ಯಾನಿಲಯವನ್ನು ಎಬಿವಿಪಿ ಕಾರ್ಯಕರ್ತರು ಭಯೋತ್ಪಾದಕರ ತಾಣವನ್ನಾಗಿ ಸೃಷ್ಟಿ ಮಾಡಿದ್ದಾರೆ.
ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಆರೋಪಿಗಳ ವಿರುದ್ಧ ದಿಲ್ಲಿ ಪೊಲೀಸರು ಕ್ರಮ ಕೈಗೊಳ್ಳದೇ ಇದ್ದರೆ ದಾಳಿಗೆ ಪೊಲೀಸರ ಬೆಂಬಲ ಇದೆ ಎಂದು ಭಾವಿಸಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಬಗ್ಗೆ ಇದ್ದ ಭಾವನೆ ಈಗ ಬದಲಾಗುತ್ತಿದೆ.ಧಾರ್ಮಿಕ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಮನಸಿನಲ್ಲಿ ಮೋದಿ ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರಕಾರ ಪ್ರವಾಹ ಪರಿಹಾರವಾಗಿ ರಾಜ್ಯಕ್ಕೆ 1,800 ಕೋ.ರೂ. ನೀಡಿದೆ ಎಂದು ಬಿಂಬಿಸುತ್ತಿದೆ. ಆದರೆ ಅಸಲಿಗೆ ಬಂದಿದ್ದು ಕೇವಲ 660 ಕೋ.ರೂ. ಮಾತ್ರ. ಕೇಂದ್ರ ಸರಕಾರ 30 ಸಾವಿರ ಕೋಟಿ ಕೊಡಲು ಸಾಧ್ಯ ಇಲ್ಲ ಎನ್ನುವುದನ್ನು ಒಪ್ಪುತ್ತೇವೆ. ಆದರೆ ನೂರು ರೂಪಾಯಿ ಕೇಳಿದಾಗ ಒಂದು ರೂಪಾಯಿ ಮಾತ್ರ ಕೊಟ್ಟರೆ ಹೇಗೆ? ಎಂದು ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ಧ ಕಿಡಿಕಾರಿದರು.