Advertisement
ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನ ನೇಮಕದ ಪ್ರಹಸನಕ್ಕೆ ಗಣರಾಜ್ಯೋತ್ಸವದ ದಿನ ಕಾಂಗ್ರೆಸ್ ಇಬ್ಬರು ನಾಯಕರು ಕಾಫಿ ಕುಡಿಯುವ ನೆಪದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಚರ್ಚಿಸಿದ್ದು, ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆಯವರ ಎದುರು ಹೊಸ ಲೆಕ್ಕಾಚಾರ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Related Articles
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಖರ್ಗೆಯವರಿಗೆ ಜವಾಬ್ದಾರಿ ವಹಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದರೊಂದಿಗೆ ಹೊಸ ಸೂತ್ರವನ್ನು ಅವರ ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.
Advertisement
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಮಲ್ಲಿಕಾರ್ಜುನ ಖರ್ಗೆಯವರು ವಹಿಸಿಕೊಂಡರೆ, ತಾವು ಪ್ರತಿಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಎರಡೂ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ಕಲ್ಪಿಸಬೇಕು. ಎರಡೂ ಹುದ್ದೆ ವಿಭಜನೆ ಮಾಡುವುದಾದರೆ ತಾವು ಯಾವುದೇ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೆ, ಲಿಂಗಾಯತ ಸಮುದಾಯದವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿದರೆ, ಆ ಸಮುದಾಯದ ವಿಶ್ವಾಸವನ್ನು ಉಳಿಸಿಕೊಂಡಂತಾಗುತ್ತದೆ. ಡಿ.ಕೆ.ಶಿವಕುಮಾರ್ ಹಾಗೂ ಡಾ.ಜಿ.ಪರಮೇಶ್ವರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸಬಹುದು ಎಂದು ಹೊಸ ಸೂತ್ರ ನೀಡಿದ್ದಾರೆ ಎನ್ನಲಾಗುತ್ತಿದೆ.
ಇದೇ ವೇಳೆ, ಖರ್ಗೆಯವರಿಗೆ ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡರೆ, ಅಹಿಂದ ವರ್ಗವನ್ನು ಮತ್ತೆ ಕಾಂಗ್ರೆಸ್ ಕಡೆಗೆ ಸೆಳೆಯಲು ಅನುಕೂಲವಾಗುತ್ತದೆ. ತಮ್ಮ ಹಿರಿತನಕ್ಕೆ ಪಕ್ಷದಲ್ಲಿ ಉತ್ತಮ ಅವಕಾಶ ದೊರೆಯುವುದಾದರೆ ತಮ್ಮ ಬೆಂಬಲವಿದೆ ಎಂದು ಖರ್ಗೆಯವರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಕೆಶಿ ಸಮರ್ಥನೆ ಕಷ್ಟ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುವುದು ಕಷ್ಟ ಎಂದು ಸಿದ್ದರಾಮಯ್ಯ ಖರ್ಗೆ ಎದುರು ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಜೈಲಿಗೆ ಹೋಗಿದ್ದಾಗ ಅವರ ವಿರುದ್ಧ ಜೈಲಿಗೆ ಹೋದವರು ಎಂದು ಆರೋಪ ಮಾಡಿದ್ದು, ಈಗ ನಮ್ಮ ಪಕ್ಷದಲ್ಲಿ ಜೈಲಿಗೆ ಹೋಗಿ ಬಂದವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ, ಅವರನ್ನು ಬಹಿರಂಗವಾಗಿ ಸಮರ್ಥನೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿದ್ದರಾಮಯ್ಯ ಅವರ ಷರತ್ತು ಬದ್ದ ಸಲಹೆಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರು ಯಾವದೇ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದ್ದು, ಅವರ ಅಭಿಪ್ರಾಯವನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೈಕಮಾಂಡ್ ಸೂಚನೆ ಮೇರೆಗೆ ರಾಜ್ಯದ ಎರಡೂ ಬಣಗಳ ಹಿರಿಯ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಗೊಂದಲ ನಿವಾರಣೆಗೆ ಪ್ರಯತ್ನಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರು ಶನಿವಾರ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಖರ್ಗೆಗೆ ಶಾಮನೂರು ಬೆಂಬಲ:
ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದ ಸಾರಥ್ಯ ವಹಿಸಿಕೊಳ್ಳುವಂತೆ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪಕ್ಷದಲ್ಲಿ ಬಣ ರಾಜಕೀಯ ಜೋರಾಗಿರುವುದರಿಂದ ಅದನ್ನು ಕಡಿಮೆ ಮಾಡಲು ಖರ್ಗೆಯವರು ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ. ಒಂದು ವೇಳೆ, ಮಲ್ಲಿಕಾರ್ಜುನ ಖರ್ಗೆಯವರು ಕೆಪಿಸಿಸಿ ಅಧ್ಯಕ್ಷದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಶಾಮನೂರು ಶಿವ ಶಂಕರಪ್ಪ ಅವರ ಪುತ್ರ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ನೀಡುವ ಬಗ್ಗೆಯೂ ಪಕ್ಷದ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ದಿನೇಶ್ ಗುಂಡೂರಾವ್‌ಗೆ ಬುಲಾವ್ ಸಾಧ್ಯತೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮೇಲೆ ಪಕ್ಷದ ಹೈಕಮಾಂಡ್ ತಮ್ಮನ್ನು ಕರೆದು ಮಾತನಾಡಿಸದಿರುವ ಬಗ್ಗೆ ದಿನೇಶ್ ಗುಂಡೂರಾವ್ ಖರ್ಗೆಯವರ ಹತ್ತಿರ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಮೇಲೆ ಅವರನ್ನು ಕರೆಯಿಸಿಕೊಂಡು ಮಾತನಾಡಿರುವ ಹೈಕಮಾಂಡ್ ತಮ್ಮನ್ನು ಸೌಜನ್ಯಕ್ಕೂ ಕರೆಯದಿರುವ ಬಗ್ಗೆ ದಿನೇಶ್ ಗುಂಡೂರಾವ್ ಆಳಲು ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ದಿನೇಶ್ ಗುಂಡೂರಾವ್‌ಗೆ ಹೈಕಮಾಂಡ್ ಭೇಟಿಗೆ ಬುಲಾವ್ ಬರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.