ನವದೆಹಲಿ: ಹೊಸದಾಗಿ ಜಾತಿ ಗಣತಿ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
“ನವೀಕೃತ ಜಾತಿ ಗಣತಿಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬೇಡಿಕೆ ಕುರಿತು ಮತ್ತೂಮ್ಮೆ ಪತ್ರ ಬರೆಯುತ್ತಿದ್ದೇನೆ. ಸಂಸತ್‌ನ ಎರಡೂ ಸದನಗಳಲ್ಲಿ ನನ್ನ ಸಹೋದ್ಯೋಗಿಗಳು ಮತ್ತು ನಾನು ಜಾತಿ ಗಣತಿಗೆ ಒತ್ತಾಯಿಸಿ ಅನೇಕ ಸಂದರ್ಭದಲ್ಲಿ ಬೇಡಿಕೆ ಇರಿಸಿದ್ದೇವೆ. ಇತರೆ ಪ್ರತಿಪಕ್ಷಗಳು ಕೂಡ ಈ ಬಗ್ಗೆ ಧ್ವನಿ ಎತ್ತಿವೆ. ಇಂತಹ ಮಾಹಿತಿಯ ಅನುಪಸ್ಥಿತಿಯಲ್ಲಿ ಅರ್ಥಪೂರ್ಣ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯಕ್ರಮಗಳು ಅಪೂರ್ಣವಾಗಿರುತ್ತವೆ, ಎಂದು ಏ.16ರಂದು ಬರೆದ ಪತ್ರದಲ್ಲಿ ಖರ್ಗೆ ಹೇಳಿದ್ದಾರೆ. ಜತೆಗೆ ಯುಪಿಎ ಸರ್ಕಾರ ನಡೆಸಿದ್ದ ಆರ್ಥಿಕ, ಸಾಮಾಜಿಕ ಗಣತಿಯ ವಿವರ ಬಹಿರಂಗಪಡಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ಇನ್ನೊಂದೆಡೆ, ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಪ್ರಧಾನಿ ಜೀ, ಹಿಂದುಳಿದವರಿಗೆ ರಾಜಕೀಯ ಮತ್ತು ಆರ್ಥಿಕ ಶಕ್ತಿ ಬೇಕು. ಖಾಲಿ ಮಾತುಗಳಲ್ಲ. ಈ ಮೂರು ಕ್ರಮಗಳನ್ನು ತೆಗೆದುಕೊಳ್ಳಿ: 2011ರ ಜಾತಿ ಗಣತಿಯನ್ನು ಬಹಿರಂಗಪಡಿಸಿ. ದೇಶದಲ್ಲಿ ಇತರೆ ಹಿಂದುಳಿದ ವರ್ಗದವರು(ಒಬಿಸಿ) ಎಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂಬ ಮಾಹಿತಿ ನೀಡಿ. ಮೀಸಲಾತಿ ಮೇಲಿನ ಶೇ.50ರಷ್ಟು ಮಿತಿಯನ್ನು ತೆಗೆದುಹಾಕಿ. ದಲಿತರಿಗೆ ಮತ್ತು ಬುಡಕಟ್ಟು ಜನಾಂಗಕ್ಕೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ,’ ಎಂದು ಆಗ್ರಹಿಸಿದ್ದಾರೆ.
“ಒಬಿಸಿಗಳ ಬಗ್ಗೆ ಸರ್ಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದರೆ, ಜಾತಿ ಮತ್ತು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗೆ ಸಂಬಂಧಿಸಿದ ದತ್ತಾಂಶವನ್ನು ಏಕೆ ಬಹಿಂಗಪಡಿಸುತ್ತಿಲ್ಲ? ಕೇಂದ್ರ ಸರ್ಕಾರ ಹೊಸದಾಗಿ ಜಾತಿ ಗಣತಿ ನಡೆಸಬೇಕು’ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಒತ್ತಾಯಿಸಿದ್ದಾರೆ.