ನವದೆಹಲಿ: ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಮುಂದುವರಿಯುವ ಸಾಧ್ಯತೆಯಿದೆ. ಸದ್ಯ ಈ ಹುದ್ದೆಗೆ ಬೇರೆಯವರನ್ನು ಆಯ್ಕೆ ಮಾಡಿಲ್ಲ. ಖರ್ಗೆಯವರೇ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಮುಂದುವರಿದದ್ದೇ ಆದರೆ, “ಒಬ್ಬರಿಗೆ ಒಂದೇ ಹುದ್ದೆ’ ಎಂಬ ನಿಯಮವನ್ನು ಮುರಿದಂತೆ ಆಗುತ್ತದೆ. ಉದಯಪುರದಲ್ಲಿ ನಡೆದಿದ್ದ ಚಿಂತನ ಶಿಬಿರದಲ್ಲಿ ಈ ಬಗ್ಗೆ ಕಾಂಗ್ರೆಸ್ ನಿರ್ಣಯ ಕೈಗೊಂಡಿತ್ತು.
ಖರ್ಗೆ ಅವರಿಗೂ ಮೊದಲು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಕುರಿತು ಯೋಚಿಸಲಾಗಿತ್ತು. ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ಸ್ಥಾನ ಎರಡರಲ್ಲೂ ಮುಂದುವರಿಯಲು ಗೆಹ್ಲೋಟ್ ಬಯಸಿದ್ದರು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದಕ್ಕೆ ಒಪ್ಪದೇ, “ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗೆಹ್ಲೋಟ್ ಚುನಾವಣೆಯಿಂದ ಹಿಂದಕ್ಕೆ ಸರಿದಿದ್ದರು.
ಇಂದು ಸೋನಿಯಾ ನೇತೃತ್ವದಲ್ಲಿ ಸಭೆ
ಡಿ.3ರಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ “ವ್ಯೂಹರಚನೆ ಗುಂಪಿನ’ ಸಭೆ ಕರೆದಿದ್ದಾರೆ. ಸಭೆಗೆ ಖರ್ಗೆ, ಜೈರಾಮ್ ರಮೇಶ್ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಮಾತ್ರ ಆಹ್ವಾನಿಸಲಾಗಿದೆ.
ದಿಗ್ವಿಜಯ್ ಸಿಂಗ್ ಹಾಗೂ ಪಿ.ಚಿದಂಬರಂ ಅವರನ್ನು ಸಭೆಗೆ ಕರೆದಿಲ್ಲ. ಸಭೆಯಲ್ಲಿ ಮುಂದಿನ ರಾಜ್ಯಸಭೆ ಪ್ರತಿಪಕ್ಷ ನಾಯಕನ ಆಯ್ಕೆ, ಡಿ.7ರಂದು ಶುರುವಾಗಲಿರುವ ಚಳಿಗಾಲ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.