Advertisement

ಕ್ಷೇತ್ರದಲ್ಲೇ ಸ್ಟಾರ್‌ ಪ್ರಚಾರಕ ಠಿಕಾಣಿ

09:04 AM Apr 22, 2019 | Team Udayavani |

ಕಲಬುರಗಿ: ಸತತ 9 ಸಲ ವಿಧಾನಸಭೆ ಹಾಗೂ ತದನಂತರ ಸತತ ಎರಡು ಸಲ ಲೋಕಸಭೆಗೆ ಪ್ರವೇಶಿಸಿ ‘ಸೋಲಿಲ್ಲದ ಸರದಾರ’ ಎನಿಸಿಕೊಂಡಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಕ್ಷೇತ್ರ ಬಿಟ್ಟು ಒಂದಿಷ್ಟೂ ಆಚೀಚೆ ಹೋಗಿಲ್ಲ. ಕಾಂಗ್ರೆಸ್‌ನ ತಾರಾ ಪ್ರಚಾರಕರಾಗಿದ್ದರೂ ಬೇರೆ ಕ್ಷೇತ್ರಕ್ಕೆ ತೆರಳದ ಖರ್ಗೆ, ಮಹಾರಾಷ್ಟ್ರ ಉಸ್ತುವಾರಿ ವಹಿಸಿಕೊಂಡಿದ್ದರೂ ಅತ್ತ ತಲೆ ಹಾಕಿಲ್ಲ.

Advertisement

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಮೂಲಕ ಐತಿಹಾಸಿಕ ಗೆಲುವಿಗೆ ಮುಂದಾಗಿರುವ ನಾಯಕನಿಗೆ ಈ ಚುನಾವಣೆ ಸಾಕಷ್ಟು ಬೆವರಿಳಿಸುತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಚಲನ ಮೂಡಿಸಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಉಮೇಶ ಜಾಧವ್‌ ಸ್ಪರ್ಧೆಯಿಂದ ಕಲಬುರಗಿ ಲೋಕಸಭಾ ಕ್ಷೇತ್ರ ಹೈವೋಲ್ಟೇಜ್‌ ಕ್ಷೇತ್ರವಾಗಿದ್ದರಿಂದ ಉಭಯ ಅಭ್ಯರ್ಥಿಗಳು ತಮ್ಮ ಪ್ರತಿಷ್ಠೆ ಹಾಗೂ ಅಗ್ನಿಪರೀಕ್ಷೆ ಪಣಕ್ಕಿಟ್ಟಿರುವುದರಿಂದ ಚುನಾವಣೆಯು ‘ನನ್ನನ್ನು ನೋಡು’ ಎನ್ನುವಂತಾಗಿದೆ.

ಸ್ಟಾರ್‌ ಪ್ರಚಾರಕರು: ಲೋಕಸಭೆಯಲ್ಲಿನ ಕಾಂಗ್ರೆಸ್‌ ಪಕ್ಷದ ಸಂಸದೀಯ ನಾಯಕರಾಗಿರುವ ಮಲ್ಲಿಕಾರ್ಜುನ ಕಾಂಗ್ರೆಸ್‌ ಪಕ್ಷದ ಸ್ಟಾರ್‌ ಪ್ರಚಾರಕರು. ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ನಾಯಕರು. ಬಹು ಮುಖ್ಯವಾಗಿ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್‌ ಉಸ್ತುವಾರಿಗಳಾಗಿದ್ದಾರೆ. ಹೀಗಾಗಿ ಖರ್ಗೆ ಅವರು ತವರು ಕ್ಷೇತ್ರವಲ್ಲದೇ ಇತರ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡಬೇಕು. ಆದರೆ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಸಂಘಟನೆ ಮೂಲಕ ನಿದ್ದೆಗೆಡಿಸಿರುವ ಪರಿಣಾಮ ಖರ್ಗೆ ಕ್ಷೇತ್ರ ಬಿಟ್ಟು ಹೋಗುತ್ತಿಲ್ಲ.

ಅಷ್ಟೇ ಏಕೆ ರಾಜ್ಯದ ಇತರ ಕ್ಷೇತ್ರಗಳಿಗೂ ಹೋಗಿಲ್ಲ. ಶುಕ್ರವಾರ ಕಲಬುರಗಿ ಕ್ಷೇತ್ರದ ಪಕ್ಕದ ರಾಯಚೂರು ಜಿಲ್ಲೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದರೂ ಅವರೊಂದಿಗೆ ಪಾಲ್ಗೊಳ್ಳಲು ಹೋಗದಿರುವುದನ್ನು ನೋಡಿದರೆ ಖರ್ಗೆ ಕೋಟೆ ಅಲುಗಾಡುತ್ತಿರುವುದನ್ನು ನಿರೂಪಿಸುತ್ತದೆ. ಬಹುಮುಖ್ಯವಾಗಿ ಲೋಕಸಭಾ ಚುನಾವಣೆಯಲ್ಲಿ ಈ ಹಿಂದೆ ಹಳ್ಳಿಗಳಿಗೆ ಹೋಗಿ ಪ್ರಚಾರಗೈದ ಉದಾಹರಣೆಗಳಿಲ್ಲ. ಆದರೆ ಖರ್ಗೆ ಅವರಿಂದು ಹಳ್ಳಿ-ಹಳ್ಳಿಗೂ ಮತಯಾಚಿಸುತ್ತಿದ್ದಾರೆ.

ಎಲ್ಲ ಸಮುದಾಯ ನಾಯಕರು: ಈ ಸಲ ಮಲ್ಲಿಕಾರ್ಜುನ ಖರ್ಗೆ ಪರ ಕಾಂಗ್ರೆಸ್‌ ಪಕ್ಷದಲ್ಲಿರುವ ಎಲ್ಲ ಸಮುದಾಯಗಳ ನಾಯಕರು ಕಲಬುರಗಿಗೆ ಬಂದು ಪ್ರಚಾರಗೈಯುತ್ತಿರುವುದನ್ನು ಪ್ರಮುಖ ಕಾಣಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಹಿಡಿದು ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್, ಸಿ.ಎಂ. ಇಬ್ರಾಹಿಂ, ಯು.ಟಿ,.ಖಾದರ್‌, ವೀರಣ್ಣ ಮತ್ತಿಕಟ್ಟೆ, ಯು.ಬಿ.ವೆಂಕಟೇಶ, ಅಲ್ಲಮ ವೀರಭದ್ರಪ್ಪ, ಚಿತ್ರನಟಿ ವಿಜಯಶಾಂತಿ ಒಂದೆರಡು ದಿನ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಮತಯಾಚಿಸಿದ್ದರಲ್ಲದೇ ಸಚಿವೆ ಜಯಮಾಲಾ ಸೇರಿದಂತೆ ಇತರರು ಮತಯಾಚನೆಗೆ ಬರುತ್ತಿದ್ದಾರೆ.

Advertisement

ಇದನ್ನೆಲ್ಲ ನೋಡಿದರೆ ಚುನಾವಣೆ ಕಬ್ಬಿಣದ ಕಡಲೆಯಾಗಿರುವುದು ನಿರೂಪಿಸುತ್ತದೆ. ನಾಲ್ಕು ದಶಕಗಳ ಕಾಲ ರಾಜಕೀಯ ಎದುರಾಳಿಯಾಗಿದ್ದ ಕ್ಷೇತ್ರ ವ್ಯಾಪ್ತಿಯ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್‌ ಪಕ್ಷದ ಶಾಸಕ ನಾಗನಗೌಡ ಕಂದಕೂರ ಅವರ ಮನೆಗೆ ಗುರುವಾರ ತಡರಾತ್ರಿ ಹೋಗಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಕೋರಿದ್ದಾರೆ. ಒಟ್ಟಾರೆ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿನ ಈ ಎಲ್ಲ ಬೆಳವಣಿಗೆಗಳು ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಚುನಾವಣೆ ಬಿಸಿ ಮುಟ್ಟಿರುವಲ್ಲಿ ಎರಡು ಮಾತಿಲ್ಲ.

ಸಮುದಾಯಗಳ ಸಮಾವೇಶ
ಕಲಬುರಗಿ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇಷ್ಟೊಂದು ನಿಟ್ಟಿನಲ್ಲಿ ಸಮುದಾಯಗಳ ಸಮಾವೇಶ ನಡೆದಿರಲಿಲ್ಲ. ಆದರೆ ಈ ಸಲ ವೀರಶೈವ ಲಿಂಗಾಯತ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಕೋಲಿ ಸಮಾಜ ಹೀಗೆ ಎಲ್ಲ ಸಮುದಾಯಗಳ ಸಮಾವೇಶ ನಡೆದು ಅವರ ನೆಚ್ಚಿನವರಿಗೆ ಬೆಂಬಲದ ನಿರ್ಣಯ ಕೈಗೊಂಡು ಸಮುದಾಯಗಳ ಸಂಘರ್ಷಕ್ಕೆ ಈ ಚುನಾವಣೆ ಎಡೆ ಮಾಡಿಕೊಟ್ಟಿದೆ.

ಹಣಮಂತರಾವ ಬೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next