ದಾವಣಗೆರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು “ಇಂಡಿಯಾ’ ಮೈತ್ರಿಕೂಟ ಪ್ರಧಾನಿ ಅಭ್ಯರ್ಥಿಯಾಗಿಸಿದ್ದು ಸರಿಯಾಗಿದೆ ಎಂದು ಗಣಿ, ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ಇಂಡಿಯಾ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಸರಿಯಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಒಳ್ಳೆಯ ಹಿರಿಯ ಅನುಭವಿ ನಾಯಕರು. ಪ್ರತಿಯೊಂದು ವಿಚಾರದಲ್ಲೂ ಅಪಾರ ಜ್ಞಾನವಿದೆ. ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಪಕ್ಷದ ತತ್ವ, ಸಿದ್ಧಾಂತದೊಂದಿಗೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೂ ಒಳ್ಳೆಯ, ಗೆಲ್ಲುವಂತಹ ಅಭ್ಯರ್ಥಿಯನ್ನು ನೋಡುತ್ತೇವೆ. ಲೋಕಸಭೆ ಟಿಕೆಟ್ ವಿಚಾರದಲ್ಲೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಈವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಶಾಸಕರು, ಕಾರ್ಯಕರ್ತರ ಸಭೆ ನಡೆಸಿ ಮಾಡುತ್ತೇವೆ ಎಂದರು.
ಗುರುವಾರ ಅಥವಾ ಶುಕ್ರವಾರ ಪಕ್ಷದ ಸಭೆಯಲ್ಲಿ ನಿರ್ಧಾರ ತಿಳಿಸಲಾಗುವುದು. ಪತ್ನಿ ಪ್ರಭಾ ಮಲ್ಲಿಕಾರ್ಜುನ್‌ಗೆ ಟಿಕೆಟ್ ಕೇಳಿಲ್ಲ. ಟಿಕೆಟ್ ಕೇಳುವುದಕ್ಕೂ, ಹೇಳುವುದಕ್ಕೂ ಹೋಗಿಲ್ಲ ಎಂದರು.