ಬೆಂಗಳೂರು: ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಅಭ್ಯರ್ಥಿಗಳು ಜಾಸ್ತಿ ಗೆದ್ದಿದ್ದಾರೆ. ಬಿಜೆಪಿಯ ವಿರೋಧಿಗಳೆಲ್ಲ ಮುಂದಿನ ಚುನಾವಣೆಯಲ್ಲಿ ಒಂದಾದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬಹುದು. ಜಾತ್ಯಾತೀತ ಶಕ್ತಿಗಳೆಲ್ಲ ಒಂದಾಗಬೇಕು ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ನಾಯಕರ ಕೋಲ್ಡ್ ವಾರ್ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಒಡಕುಮೂಡಿಸುವ ಕೆಲಸ ಬೇಡ. ನಾವು ಸಿದ್ಧಾಂತದ ಮೇಲೆ ಬಂದವರು. ಹಾಗಾಗಿಯೇ ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಕೈಜೋಡಿಸಿದ್ದು. ಸೈದ್ಧಾಂತಿಕ ತಳಹದಿಯ ಮೇಲೆ ನಿಂತವರು ನಾವು. ನಮ್ಮಲ್ಲಿ ಯಾವುದೇ ಜಗಳವೂ ಇಲ್ಲ ಏನೂ ಇಲ್ಲ. ನಮ್ಮಲ್ಲಿ ಒಡಕು ಮೂಡಿಸಬೇಡಿ ಎಂದರು.
ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಕುರಿತು ದೇವೇಗೌಡ ಜೊತೆ ಮಾತನಾಡಿದ ವಿಚಾರಕ್ಕೆ ಉತ್ತರಿಸಿದ ಅವರು, ಹೌದು ನಾನು ಮಾತನಾಡಿದ್ದೇನೆ. ಅಲ್ಲಿ ಮೆಜಾರಿಟಿ ಕಾಂಗ್ರೆಸ್ ಗೆ ಬಂದಿದೆ. ಆದರೆ ಬಿಜೆಪಿ ಅಧಿಕಾರ ಹಿಡಿಯಲು ನೋಡುತ್ತಿದೆ. ಜನ ಬೆಂಬಲ ನಮಗಿದೆ, ಜಾತ್ಯತೀತ ಪಕ್ಷಗಳು ಒಂದಾಗಬೇಕು. ಈ ನಿಟ್ಟಿನಲ್ಲಿ ದೇವೇಗೌಡ ಜೊತೆ ಮಾತನಾಡಿದ್ದೇನೆ. ಕುಮಾರಸ್ವಾಮಿ ಜೊತೆ ಮಾತನಾಡಿ ತಿಳಿಸುತ್ತೇನೆ ಎಂದಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಬೇಕಿದೆ ಎಂದ ಅವರು ನಾವು ಜೆಡಿಎಸ್ ಜೊತೆ ಏನು ಮಾತನಾಡಬೇಕು ಅದನ್ನು ಮಾಡಿದ್ದೇವೆ. ನಮ್ಮ ಜೊತೆಗೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದೇವೆ. ಅವರು ಸಮಯ ಕೇಳಿದ್ದಾರೆ ಎಂದರು.
ಇದನ್ನೂ ಓದಿ:ಪರವಾನಿಗೆ ಪಡೆದರೂ ಗಣಪತಿ ಪೆಂಡಾಲ್ ಕಿತ್ತ ವ್ಯವಸ್ಥೆ ವಿರುದ್ಧ ಹಿಂದೂಪರ ಸಂಘಟನೆಗಳ ಪ್ರತಿಭಟನೆ
ತೈಲ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಖರ್ಗೆ, ಸಂಸತ್ ನಲ್ಲೂ ಧ್ವನಿ ಎತ್ತಿದ್ದೇವೆ. ಸೈಕಲ್ ರ್ಯಾಲಿ ಮಾಡಿದ್ದೇವೆ. ನಮ್ಮ ಧ್ವನಿಗೆ ಸಹಾಯ ಮಾಡುವವರು ಕಡಿಮೆ. ಮೋದಿ ಎಲ್ಲರಿಗೂ ಹೆದರಿಸುತ್ತಿದ್ದಾರೆ. ಮಾಧ್ಯಮದವರನ್ನೂ ಹೆದರಿಸುತ್ತಿದ್ದಾರೆ. ಪೆಟ್ರೋಲ್, ಡಿಸೇಲ್, ಎಡಿಬಲ್ ಆಯಿಲ್ ರೇಟ್ ಹೆಚ್ಚಾಗುತ್ತಿದೆ ಎಂದರು.
ಅಚ್ಚೇದಿನ ಆಯೇಂಗೆ ಅನ್ನುತ್ತಿದ್ದರು. ಒಂದು ಕಡೆ ರೈತರ ಕಾನೂನು ಹಿಂಪಡೆಯಲಿಲ್ಲ, ಬಾರ್ಡರ್ ನಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದರು. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದರು, ಜನರಿಗೆ ಉತ್ತಮ ಆಶ್ವಾಸನೆ ಕೊಟ್ಟರು. ಯುವಕರನ್ನ ಆನೇಕ ಬಾರಿ ಪುಸಲಾಯಿಸಿದರು. ಆದರೆ ಅವರು ಮಾಡುತ್ತಿರುವುದೇನು? ಜನರನ್ನು ಸಮಸ್ಯೆಗೆ ದೂಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.