ಕಲಬುರಗಿ: ಸಂಸತ್ತಿನಲ್ಲಿ ಬಿಜೆಪಿ ಬಹುಮತ ಸದಸ್ಯರ ಸಂಖ್ಯೆ ಹೊಂದಿದೆ. ಆದರೆ ದೇಶದಲ್ಲಿ ಒಟ್ಟಾರೆ ಶಾಸಕರಲ್ಲಿ ಶೇ. 25ರಿಂದ 30ರಷ್ಟು ಮಾತ್ರ ಬಿಜೆಪಿ ಶಾಸಕರಿದ್ದಾರೆ. ಆದರೂ ಹಿಂಬಾಗಿಲಿನಿಂದ ಸರ್ಕಾರ ರಚಿಸಿ ಆಡಳಿತ ನಡೆಸಲಾಗುತ್ತಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಂಡಿಚೇರಿಯಿಂದ ಹಿಡಿದು ದಕ್ಷಿಣ ಭಾರತದವರೆಗಿನ ರಾಜ್ಯಗಳಲ್ಲಿ ಪಕ್ಷವಾರು ವಿವರ ನೋಡಿದರೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಬಿಹಾರ, ಕರ್ನಾಟಕ, ಆಂಧ್ರ ಪ್ರದೇಶ, ನವದೆಹಲಿ, ಪಂಜಾಬ್, ಮಹಾರಾಷ್ಟ್ರ,ತಮಿಳನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಲ್ಲಿ ಬಿಜೆಪಿ ಶಾಸಕರು ಎಷ್ಟಿದ್ದಾರೆ ಎಂಬುದನ್ನು ಬಿಜೆಪಿಯವರೇ ಲೆಕ್ಕ ಮಾಡಲಿ ಎಂದು ಸವಾಲು ಹಾಕಿದರು.
ದೇಶದ ಒಟ್ಟಾರೆ ಶಾಸಕರ ಸಂಖ್ಯೆಯಲ್ಲಿ ಬಿಜೆಪಿ ಶೇ.25ರಿಂದ. 30 ರಷ್ಟು ಮಾತ್ರ ಶಾಸಕರನ್ನು ಬಿಜೆಪಿ ಹೊಂದಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿ ಸರ್ಕಾರ ಹೇಗೆ ಮಾಡಿದರು ಎಂಬುದು ಎಲ್ಲರಿಗೆ ಗೊತ್ತಿದೆ. ಈಗ ಗೋವಾದಲ್ಲಿ ಮತ್ತೆ ಕಮಲ ಆಪರೇಷನ್ ಮಾಡಲು ಮುಂದಾಗಿರುವುದು ನಾಚಿಗೇಡಿತನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರಿಗೆ ಅಧಿಕಾರ ಪಡೆಯುವುದೇ ಮುಖ್ಯ ಧ್ಯೇಯವಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗುತ್ತಿಲ್ಲ. ರಕ್ಷಣಾ ಇಲಾಖೆಯಲ್ಲೇ ಎರಡು ಲಕ್ಷ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿ ಬದಲು ಅಗ್ನಿ ಪಥ ಎಂದು ಹೇಳಿ ತಾತ್ಕಾಲಿಕವಾಗಿ ಭರ್ತಿ ಮಾಡುವುದು ಪಲಾಯನ ವಾದವಾಗಿದೆ. ಅದೇ ರೀತಿ ಬಿಎಸ್ ಎನ್ಎಲ್, ರೈಲ್ವೇ, ಪೊಲೀಸ್, ಶಿಕ್ಷಣದಲ್ಲೂ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಮೊದಲು ಭರ್ತಿ ಮಾಡಿಕೊಳ್ಳಲಿ. ಉಜ್ವಲ ಎಂದು ಹೇಳಿ ಮೊದಲಿಗೆ ಒಂದರ ಜತೆ ಒಂದು ಉಚಿತ ಎಂದು ಹೇಳಿ ಸಿಲೆಂಡರ್ ನೀಡಿ ಈಗ ದರ ಮೂರು ಪಟ್ಟು ಹೆಚ್ಚಿಸಿರುವುದು ಅಭಿವೃದ್ಧಿಯೇ? ಯಾವುದಾದರೂ ಕೇಳಿದರೆ ಹಿಂದುತ್ವ ಹೇಳಿ ಅಭಿವೃದ್ಧಿ ವಿಷಯವನ್ನೇ ಮರೆ ಮಾಚಿಸಲಾಗುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ದೇಶದ ಪ್ರಜಾಪ್ರಭುತ್ವ ಕ್ಕೆ ದೊಡ್ಡ ಹೊಡೆತ ಬೀಳುತ್ತಿದ್ದರೂ ಯುವಕರನ್ನೂ ಛೂ ಬಿಟ್ಟು ದೇಶದ ಭದ್ರತೆ ಹಾಗೂ ಆರ್ಥಿಕ ಸ್ಥಿತಿಗೆ ಬಲವಾದ ಪೆಟ್ಟು ನೀಡಲಾಗುತ್ತಿದೆ. ಈಗಲಾದರೂ ದೇಶದ ಜನ ಎಚ್ಚೆತ್ತುಕೊಳ್ಳುವುದು ಅವಶ್ಯಕವಿದೆ ಎಂದು ಡಾ. ಖರ್ಗೆ ಒತ್ತಿ ಹೇಳಿದರು.
17ರಂದು ಸಭೆ: ಚುನಾವಣೆ ಅಂಗವಾಗಿ 17 ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳೊಂದಿಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಹಲವರು ತಮ್ಮೊಂದಿಗೆ ಬರಲು ಹೇಳಿದ್ದಾದರೂ ಇನ್ನೂ ಕೆಲವರು ತಟಸ್ಥ ನಿಲುವು ಹೊಂದಿದ್ದಾರೆ. ವಿರೋಧ ಪಕ್ಷ ತನ್ನ ಕೆಲಸ ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರಾಜ್ಯದಲ್ಲಿ ಸಚಿವರ ಮೌಲ್ಯ ಅಭಿವೃದ್ಧಿ ನಿಟ್ಟಿನಲ್ಲಿ ಆಗಲಿ. ಈ ಹಿಂದೆ ಪ್ರಧಾನಿ ಇಂದಿರಾ ಗಾಂಧಿ ಅನಿರೀಕ್ಷಿತವಾಗಿ ರಾಜ್ಯಕ್ಕೆ ಆಗಮಿಸಿ ಸಚಿವರ ಮೌಲ್ಯಮಾಪನ ನಡೆಸಿದ್ದರು. ಮುಖ್ಯಮಂತ್ರಿಗಳು ಸಚಿವರ ಮೌಲ್ಯ ಮಾಪನ ನಡೆಸುವುದು ಒಂದು ಪ್ರಕ್ರಿಯೆ ಕಾರ್ಯವಾಗಿದೆ. ಅದನ್ನು ಮಾಧ್ಯಮಗಳಿಗೆ ಹೇಳಿ ಮಾಡುವಂತದ್ದಲ್ಲ ಎಂದರು.
ರಾಜ್ಯದ ಏಕೈಕ ಇಲ್ಲಿನ ಕರ್ನಾಟಕ ಕೇಂದ್ರೀಯ (ಸಿಯುಕೆ) ವಿಶ್ವವಿದ್ಯಾಲಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳು ನಡೆಯುತ್ತಿವೆ ಎಂದು ದೂರುಗಳು ಕೇಳಿ ಬಂದವು. ಇದಾಗಬಾರದು. ಶಿಕ್ಷಣವೊಂದೇ ನಡೆಯಬೇಕು. ಬೇಕಿದ್ದರೆ ಹೊರಗಡೆ ಏಲ್ಲಾದರೂ ಆರ್ ಎಸ್ಎಸ್ ತನ್ನ ಚಟುವಟಿಕೆಗಳನ್ನು ನಡೆಸಲಿ ಎಂದು ಖರ್ಗೆ ಹೇಳಿದರು.
ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಮೇಯರ್ ಶರಣು ಮೋದಿ ಸೇರಿದಂತೆ ಮುಂತಾದವರಿದ್ದರು.