Advertisement

ರಜಾಕಾರರ ಹಾವಳಿಗೆ ಊರು ಬಿಟ್ಟಿದ್ದ ಖರ್ಗೆ ಕುಟುಂಬ

11:50 PM Oct 19, 2022 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದ, ಕಾರ್ಮಿಕರ ಮನೆ ಮಗನಾಗಿ, ಬಿಸಿಲುಂಡೇ ಬೆಳೆದ ಡಾ| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ನೇಮಕವಾಗಿರುವುದು ರಾಷ್ಟ್ರ ರಾಜಕಾರಣದಲ್ಲಿ ಕಲಬುರಗಿ ಚಾಪ್ಟರ್‌ ಆರಂಭವಾದಂತಾಗಿದೆ.

Advertisement

ಇದರೊಂದಿಗೆ ಕನ್ನಡಿಗ ನಾಯಕನೊಬ್ಬ ಎರಡನೇ ಬಾರಿಗೆ ಕಾಂಗ್ರೆಸ್‌ ಪಕ್ಷದ ರಾಷ್ಟ್ರಾಧ್ಯಕ್ಷರಾದಂತಾಗಿದೆ. ಇದಕ್ಕೂ ಮುನ್ನ 1968ರಲ್ಲಿ ಎಸ್‌.ನಿಜಲಿಂಗಪ್ಪ ಈ ಸ್ಥಾನ ಅಲಂಕರಿಸಿದ್ದ ಮತ್ತೊಬ್ಬ ಕನ್ನಡಿಗ. ಯಾರೂ ಗಾಡ್‌ ಫಾದರ್‌ ಗಳಿಲ್ಲದೆ, ಕಲಬುರಗಿ ಎಂಎಸ್‌ಕೆ ಮಿಲ್‌ನಲ್ಲಿ ಕೆಲಸ ಮಾಡುವ ಸಾಮಾನ್ಯ ಕಾರ್ಮಿಕ ಮಾಪಣ್ಣ ಖರ್ಗೆ ಅವರೇ ಮಲ್ಲಿಕಾರ್ಜುನ ಖರ್ಗೆ ಗಾಡ್‌ ಫಾದರ್‌. ಅದ ರಿಂದಾಚೆಗೆ ಅವರೆಂದೂ ಯಾರ ಮುಂದೂ ಕೈಕಟ್ಟಿ ನಿಂತಿರುವ ಉದಾಹರಣೆಗಳಿಲ್ಲ. ಅಷ್ಟು ದಿವಿಸಾಗಿ, ಶಿಸ್ತಿನಿಂದ ಕೊಟ್ಟಿರುವ ಹುದ್ದೆ, ಸಚಿವ ಸ್ಥಾನ ಮತ್ತು ಜವಾಬ್ದಾರಿಗಳನ್ನು ನಿಭಾಯಿಸಿ ಸೈ ಎನ್ನಿಸಿಕೊಂಡ ಕಾರ್ಮಿಕನ ಮಗ.

ಎಂಎಸ್‌ಕೆ ಮಿಲ್‌ ಅಂಗಳದಿಂದಲೇ ಶ್ರಮಜೀವಿ, ಕಾಯಕ ನಿಷ್ಠೆಯ ಖದರ್‌ನ ಉದಯೋನ್ಮುಖ ನಾಯಕ 1970 ರಲ್ಲಿಯೇ ಕಲಬುರಗಿ ನೆಲದಿಂದ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದರು. ಅಂದಿನಿಂದ ಶುರುವಾದ ಅವರ ಕಟ್ಟುನಿಟ್ಟಿನ, ಶಿಸ್ತುಬದ್ಧ ರಾಜಕೀಯ ಈಗ ರಾಷ್ಟ್ರಾಧ್ಯಕ್ಷ ಹುದ್ದೆವರೆಗೆ ಎಂದೂ ನಿಂತಿಲ್ಲ ಎನ್ನುವುದು ಹೆಗ್ಗಳಿಕೆ.

ಆರು ತಿಂಗಳ ಕೂಸು ಖರ್ಗೆ: ಮೂಲತಃ ಬೀದರ್‌ ಜಿಲ್ಲೆ ವರವಟ್ಟಿ ಗ್ರಾಮದ ಖರ್ಗೆ ಕುಟುಂಬ ಬೀದರ್‌ನಿಂದ ಕಲಬುರಗಿಗೆ ವಲಸೆ ಬಂದದ್ದೇ ಒಂದು ರೋಚಕ ಕಹಾನಿ. ಹೈದರಾಬಾದ್‌ ನಿಜಾಮನ ಆಡಳಿತದಲ್ಲಿ ರಜಾ  ಕಾರರು ಬೀದರನಲ್ಲಿ ದಾಂಗುಡಿ ಇಡುತ್ತಿದ್ದ ದಿನಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಆರು ತಿಂಗಳ ಕೂಸು. ಈ ದಾಂಗುಡಿಯ ತಹತಹದಲ್ಲೇ ಅನಾರೋಗ್ಯದಿಂದ ಅವ್ವ ಇಲ್ಲವಾಗುತ್ತಾಳೆ. ಆಗ ಮಾಪಣ್ಣ ಖರ್ಗೆ ಕೂಸನ್ನು ಕರೆದುಕೊಂಡು ಹೊಸ ಜೀವನ ಹುಡುಕುತ್ತ ಕಲಬುರಗಿಗೆ ಬರುತ್ತಾರೆ. ಹೊಟ್ಟೆಗೆ ಅನ್ನ ಹುಡುಕುವ ಹೊತ್ತಿನಲ್ಲಿ ಎಂಎಸ್‌ಕೆ ಮಿಲ್‌ನಲ್ಲಿ ಕೆಲಸ ಸಿಗುತ್ತದೆ. ಅಲ್ಲಿ ಕಾರ್ಮಿಕನಾಗಿ ಸೇರಿಕೊಳ್ಳುವ ಮಾಪಣ್ಣ ಖರ್ಗೆ ಅವರ
ನೆರಳಿನಲ್ಲೇ ಕಾಯಕದ ಕುಲುಮೆಯಲ್ಲಿ ಅರಳಿದವರೇ ಮಲ್ಲಿಕಾರ್ಜುನ ಖರ್ಗೆ.

ಮಾಸ್‌ ಆ್ಯಂಡ್‌ ಕ್ಲಾಸ್‌ ಲೀಡರ್‌: ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕನ ಮಗ ಎನ್ನುವುದು ಎಷ್ಟು ಸತ್ಯವೋ ಅಷ್ಟೆ ಸತ್ಯ ಅವರೊಬ್ಬ ಕ್ಲಾಸ್‌ ಮತ್ತು ಮಾಸ್‌ ಲೀಡರ್‌. ಸದಾ ಜನಪರವಾದ ಚಿಂತನೆಗಳೇ ಮೈಗೂಡಿಸಿಕೊಂಡು ಹೊರಟವರು. ಅವರೆಂದೂ ಯಾವುದಕ್ಕೂ ಹಳಹಳಿಸಿ ದವರಲ್ಲ. ಬದುಕಿನಲ್ಲಿ ಬಂದದ್ದೆಲ್ಲವನ್ನು ಸ್ವೀಕರಿಸಿ ಕಾಂಗ್ರೆಸ್‌ ವಫಾದಾರ್‌ ಮುತ್ಸದ್ಧಿ ನಾಯಕ ಎಂದು ಮಾವನವರಾದ (ಹೆಣ್ಣು ಕೊಟ್ಟವರು) ದಲಿತ ಹಿರಿಯ ಮುಖಂಡ ವಿಠuಲ ದೊಡ್ಡಮನಿ ವ್ಯಾಖ್ಯಾನಿಸುತ್ತಾರೆ.

Advertisement

ತೊಗರಿ ನಾಡಲ್ಲಿ ಸಂಭ್ರಮ: ಕೈ ಪಕ್ಷ ಆಂತರಿಕ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಇಡೀ ತೊಗರಿ ನಾಡು ಸಂಭ್ರಮದಲ್ಲಿ ತೇಲಿ ಹೋಗಿದೆ. ಪ್ರತಿಯೊಬ್ಬರ ಬಾಯಲ್ಲಿ ಖರ್ಗೆಯದ್ದೇ ಗುಣಗಾನ. ಹೊಟೇಲ್‌, ಚಹಾ ಅಂಗಡಿ, ಪಕ್ಷದ ಕಚೇರಿಗಳು, ಸರಕಾರಿ ಕಚೇರಿಯಿಂದ ಖಾಸಗಿ ಸಂಘ, ಸಂಸ್ಥೆಗಳ ಕಚೇರಿಯಲ್ಲಿ, ನಿಂತಲ್ಲಿ… ಕುಳಿತಲ್ಲಿ.. ಬರೀ ಇದೇ ಚರ್ಚೆ.

ಖರ್ಗೆ ಆಯ್ಕೆ ಕಲ್ಯಾಣ ಕರ್ನಾಟಕ ಸೇರಿದಂತೆ ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಾಳೆಯಕ್ಕೆ ಬೂಸ್ಟರ್‌ ಡೋಸ್‌ ಸಿಕ್ಕಂತಾಗಿದೆ. ಕಾಂಗ್ರೆಸ್‌ ಅಧ್ಯಕ್ಷರು ಗಾಂಧಿ ಪರಿವಾರದವರೇ ಆಗುತ್ತಾರೆ, ಅವರನ್ನು ಬಿಟ್ಟು ಹೊರಗಿನವರು ಆಗಲ್ಲ ಎಂಬ ಅಪವಾದವನ್ನು ಕಳಚಿದ ಶ್ರೇಯಸ್ಸು ತೊಗರಿ ನಾಡು ಕಲಬುರಗಿಗೆ ಸಂದಿದೆ. ಪ್ರಧಾನಿ ಮೋದಿ ಪಡೆ ವಿರುದ್ಧ ಸದನದೊಳಗೆ ಮತ್ತು ಹೊರಗೆ ಸದಾ ತೊಡೆ ತಟ್ಟಿ ನಿಲ್ಲುವ ದಾಂಡಿಗ ಖರ್ಗೆ ಕಲಬುರಗಿಯವರು ಎನ್ನುವುದು ಕಲ್ಯಾಣ ಕರ್ನಾಟಕದ ಹೆಗ್ಗಳಿಕೆಯೇ ಸರಿ.

ದಲಿತರು ಮತ್ತು ಶೋಷಿತರಿಗೆ ರಾಷ್ಟ್ರೀಯ ಪಕ್ಷವೊಂದು ದೊಡ್ಡ ಹುದ್ದೆ ನೀಡಿ ಗೌರವಿಸಿದೆ. ಅದಕ್ಕೆ ಡಾ| ಮಲ್ಲಿಕಾರ್ಜುನ ಖರ್ಗೆ ಕೂಡ ಅರ್ಹರು. ಶಿಸ್ತಿನಷ್ಟೇ ದೂರದೃಷ್ಟಿ, ಮುತ್ಸದ್ಧಿತನ ಮತ್ತು ಪಕ್ಷದ ವಫಾದಾರ್‌ ಸಿಪಾಯಿ ಕೂಡ ಹೌದು. ದಿ| ಧರ್ಮಸಿಂಗ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಅಂದರೆ ಸಾಕು ಕಲ್ಯಾಣದ ಧರ್ಮ-ಖರ್ಗೆ ಎಂತಲೇ ಎಲ್ಲರೂ ಕರೆಯುತ್ತಾರೆ. ಅಷ್ಟು ಪಕ್ಕಾ ಗೆಳೆತನ, ಪಕ್ಷದ ಕೆಲಸ ಮಾಡಿದ್ದಾರೆ. ಆಯ್ಕೆ ನನಗಂತೂ ಭಾರೀ ಖುಷಿ ಕೊಟ್ಟಿದೆ.ವಿಠಲ ದೊಡ್ಡಮನಿ, ಖರ್ಗೆ ಅವರ ಮಾವ

-ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next