ಯಡ್ರಾಮಿ: ತಾಲೂಕಿನ ರೈತರು ಪ್ರಸಕ್ತ ವರ್ಷ ತೊಗರಿ ಬೆಳೆ ನಷ್ಟದ ಪೆಟ್ಟಿನಿಂದ ಸುಧಾರಿಸಿಕೊಳ್ಳುವ ಮುನ್ನವೇ ಕಬ್ಬಿನ ಬೆಳೆ ಸಕಾಲದಲ್ಲಿ ಕಟಾವು ಆಗದೇ ಇರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಳ್ಳಿ-ನಾಗರಳ್ಳಿ ಉಗಾರ್ ಶುಗರ್ ಕಾರ್ಖಾನೆ ಆಡಳಿತ ಮಂಡಳಿಯ ನಿಲುವಿನಿಂದಾಗಿ ವಡಗೇರಿ, ದುಮ್ಮದ್ರಿ, ಸುಂಬಡ, ಮಾಗಣಗೇರಿ, ಜಂಬೆರಾಳ, ವರವಿ, ವಸ್ತಾರಿ, ಕುಕನೂರ, ಕೋನಶಿರಸಗಿ ಅಲ್ಲಾಪುರ, ಬಿರಾಳ(ಹಿಸ್ಸಾ), ಐನಾಪುರ, ಕೊಂಡಗೂಳಿ, ಕಣಮೇಶ್ವರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಕಬ್ಬು ಬೆಳೆದ ರೈತರು ಹೈರಾಣಾಗುತ್ತಿದ್ದಾರೆ. 2021-22ನೇ ಸಾಲಿನಲ್ಲಿ ಬೆಳೆದ ಕಬ್ಬು ಇಲ್ಲಿಯವರೆಗೆ ಕಟಾವು ಆಗದ ಕಾರಣ ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ.
ಪ್ರತಿವರ್ಷ ಕಾರ್ಖಾನೆ ಅಂದಾಜು ಮೂರು ಲಕ್ಷ ಟನ್ ಕಬ್ಬು ನುರಿಸುತ್ತದೆ. ಪ್ರಸಕ್ತ ವರ್ಷ ತಾಲೂಕಿನಲ್ಲಿಯೇ ಸುಮಾರು ನಾಲ್ಕು ಲಕ್ಷ ಟನ್ ಗಿಂತಲೂ ಹೆಚ್ಚು ಕಬ್ಬು ಬೆಳೆದಿರುವುದರಿಂದ ಬೇರೆ ಭಾಗಗಳಿಂದ ಕಬ್ಬು ತರಿಸಿಕೊಳ್ಳುವುದು ಅನಗತ್ಯವಾಗಿತ್ತು. ಆದರೆ, ಬೇರೆ ತಾಲೂಕಿನ ಜಮೀನುಗಳಿಂದ ಕಬ್ಬು ಬರುತ್ತಿರುವುದರಿಂದ ಸ್ಥಳೀಯ ರೈತರ ಕಬ್ಬು ಕಟಾವು ಆಗುತ್ತಿಲ್ಲ. ಅಲ್ಲದೇ ಇಂದು-ನಾಳೆ ಎನ್ನುವ ಭರವಸೆಯನ್ನು ಕಾರ್ಖಾನೆ ಆಡಳಿತ ಮಂಡಳಿ ನೀಡುತ್ತಲೇ ಇದೆ. ಈ ಕುರಿತು ಸುತ್ತಲಿನ ಗ್ರಾಮಗಳ ರೈತರು ಒಂದೆರೆಡು ದಿನ ಕಾರ್ಖಾನೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೊಂದೆಡೆ ಗ್ರಾಮಗಳಲ್ಲಿನ ಪ್ರಭಾವಿಗಳ ಕಬ್ಬು ಮೊದಲು ಕಟಾವು ಮಾಡಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಭಾಗದಲ್ಲಿ ನಾಟಿಯಾದ ಕಬ್ಬಿನ ಬೆಳೆ ಮಾಹಿತಿಯೇ ಕಾರ್ಖಾನೆ ಆಡಳಿತ ಮಂಡಳಿಗಿಲ್ಲ. ಸ್ಥಳೀಯವಾಗಿಯೇ ನಿರೀಕ್ಷಿತ ಕಬ್ಬು ದೊರಕುವಾಗ ಬೇರೆ ಭಾಗಗಳಿಂದ ಕಬ್ಬು ತರಿಸಿಕೊಳ್ಳುವುದು ಯಾವುದಕ್ಕೆ ಎನ್ನುವ ಪ್ರಶ್ನೆ ರೈತರದ್ದಾಗಿದೆ. ಕಬ್ಬು ಕಟಾವು ಮಾಡುವಲ್ಲಿ ಯಾವುದೇ ಉಪ ಕ್ರಮಗಳನ್ನು ಕೈಗೊಳ್ಳದಿರುವುದೂ ಸಮಸ್ಯೆಗೆ ಕಾರಣವಾಗಿದೆ. ಕಾರ್ಖಾನೆ ಆಡಳಿತ ಮಂಡಳಿ ಕೂಡಲೇ ಸ್ಥಳೀಯ ರೈತರ ಕಬ್ಬು ಕಟಾವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎನ್ನುತ್ತಾರೆ ರೈತರು.
ಕಬ್ಬು ಬೆಳೆದ ರೈತರ ಸಮಸ್ಯೆ ಗಮನಕ್ಕೆ ಬಂದಿದೆ. ಈ ಕುರಿತು ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಯಾವುದೇ ಕಾರಣಕ್ಕೂ ಸ್ಥಳೀಯ ರೈತರಿಗೆ ಅನ್ಯಾಯ ಆಗದಂತೆ ಕಾರ್ಖಾನೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿದೆ. ಇಲ್ಲದಿದ್ದರೇ ಕಾರ್ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಶಾಂತಗೌಡ ಬಿರಾದಾರ, ತಹಶೀಲ್ದಾರ್, ಯಡ್ರಾಮಿ
15 ಎಕರೆ ಕಬ್ಬು ನಾಟಿ ಮಾಡಿ 10 ತಿಂಗಳು ಮೀರಿದೆ. ಇಲ್ಲಿಯವರೆಗೆ ಕಾರ್ಖಾನೆಯವರು ಕಟಾವು ಮಾಡಿಲ್ಲ. ನೀರು ಬಂದ್ ಮಾಡಿ ಎರಡು ತಿಂಗಳಾಯಿತು. ಬೆಳೆ ಒಣಗುತ್ತಿರುವುದರಿಂದ ಅದರ ತೂಕ ಕಡಿಮೆ ಆಗಿ ನಷ್ಟ ಉಂಟಾಗುತ್ತಿದೆ. ಕಾರ್ಖಾನೆ ಆಡಳಿತ ಸ್ಥಳೀಯ ರೈತರ ವಿರುದ್ಧವಾಗಿದೆ. ಇದೆ ರೀತಿ ಮುಂದುವರಿದರೆ ರೈತರೆಲ್ಲ ಸತ್ಯಾಗ್ರಹಕ್ಕೆ ಮುಂದಾಗುತ್ತೇವೆ.
-ಶಂಕರಗೌಡ ಪೊಲೀಸ್ ಪಾಟೀಲ ವಡಗೇರಿ, ಕಬ್ಬು ಬೆಳೆಗಾರ
-ಸಂತೋಷ ಬಿ. ನವಲಗುಂದ