ಜೇವರ್ಗಿ: ತಾಲೂಕಿನ ಯಡ್ರಾಮಿ ಹತ್ತಿರದ ಮಳ್ಳಿ ಗ್ರಾಮದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಚೌಡೇಶ್ವರಿದೇವಿಯರ ಜಾತ್ರೆ ಶುಕ್ರವಾರ ಸಾವಿರಾರು ಭಕ್ತರ ಮಧ್ಯೆ ಸಡಗರದಿಂದ ಜರುಗಿತು. ಈ ಭಾಗದ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಮಳ್ಳಿ ಚೌಡೇಶ್ವರಿ ಜಾತ್ರೆ ವಿಶೇಷತೆಯಿಂದ ಕೂಡಿತ್ತು.
ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನ ಸಮಿತಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಳೆದ ಎಳ್ಳಮವಾಸೆಗೆ ಬಣ್ಣಕ್ಕೆ ಹೋದ ಚೌಡಮ್ಮ ದೇವಿ ಗುರುವಾರ ರಾತ್ರಿ ಗ್ರಾಮ ಪ್ರವೇಶ ಮಾಡಿದ ನಂತರ ಚೌಡಮ್ಮ ಕಟ್ಟೆ ಹತ್ತಿರ ಭಾರಿ ಪ್ರಮಾಣದ ಮದ್ದು ಸುಡುವ ಕಾರ್ಯಕ್ರಮ ನಡೆಯಿತು.
ಶುಕ್ರವಾರ ಮಧ್ಯಾಹ್ನ ಗ್ರಾಮದ ಮುಖ್ಯಬೀದಿಯಲ್ಲಿ ಅಕ್ಕ-ತಂಗಿ ಚೌಡೇಶ್ವರಿ (ಚೌಡಮ್ಮ ದೇವಿ)ಯರ ಭವ್ಯ ಮುಖಾಕೃತಿಗಳನ್ನು ಧರಿಸಿದ ಪುರುಷರೊಂದಿಗೆ ಊರಿನ ಚಾಜ ಮನೆತನದ ಪ್ರಮುಖರು ಹಾಗೂ ಎರಡು ಬಣದ ದಲಿತ ಸಮುದಾಯದವರು ಸೇರಿ ಆಡಿದ ಬಡಿಗೆ ಆಟ ನೋಡುಗರ ಕಣ್ಮನ ಸೆಳೆಯಿತು.
ಜಾತ್ರೆಗೆ ಮುಂಚೆ ಎರಡು ಬಣದ ದಲಿತ ಸಮುದಾಯದವರು ಸುಮಾರು 40 ಎತ್ತಿನ ಬಂಡಿಗಳಷ್ಟು ಜಾಲಿ ಕಟ್ಟಿಗೆ ಕಡಿದು ತೊಗಟೆ ತೆಗೆದು ಹುರುಮಂಜು ಹಚ್ಚಿ ಪೂಜೆ ನೆರವೇರಿಸಿದರು. ಬಡಿಗೆ ಆಟದ ಸಂದರ್ಭದಲ್ಲಿ ಬಾನ ಕಿಚಡಿ (ಜೋಳದ ಅನ್ನ) ಮತ್ತು ಸಗಣೆಯನ್ನು ಜಾತ್ರೆಗೆ ಬಂದವರತ್ತ ಎರಚುವ ಹಾಗೂ ಮಣ್ಣಿನ ಕೆಸರಿನಲ್ಲಿ ಅದ್ದಿದ ಕೌದಿ ಸುತ್ತಿಕೊಂಡು ಜನರಿಗೆ ಒರೆಸುತ್ತಾ ಸಾಗುವ ಮತ್ತು ಬಾರಿಗಿಡದ ಮುಳ್ಳು ಕಂಟಿಯನ್ನು ಬಡಿಗೆ ಆಟಕ್ಕೆ ಅಡ್ಡಿಯಾಗದಂತೆ ಎಳೆದಾಡುತ್ತಾ ಗಲಿಬಿಲಿಗೊಳಿಸುವ ವಿಚಿತ್ರ ಆಚರಣೆ ನೋಡುಗರನ್ನು ಅಚ್ಚರಿಪಡಿಸಿತು.
ಮಧ್ಯಾಹ್ನದಿಂದ ಸಾಯಂಕಾಲದ ವರೆಗೆ ಬಡಿಗೆ ಆಟ ಜೋರಾಗಿ ನಡೆಯಿತು. ಬಡಿಗೆ ಆಟ ವೀಕ್ಷಿಸಲು ಸುತ್ತಮುತ್ತಲಿನ ಶಹಾಪುರ, ಸಿಂದಗಿ, ಸುರಪುರ, ಜೇವರ್ಗಿ, ಕಲಬುರಗಿ, ವಿಜಯಪುರ ಜಿಲ್ಲೆಗಳಿಂದ ಸಾವಿರಾರು ಜನರು ಆಗಮಿಸಿದ್ದರು. ಶುಕ್ರವಾರ ರಾತ್ರಿ ಹಳ್ಳದ ದಂಡೆಯ ಚೌಡಮ್ಮನ ಕಟ್ಟೆಯ ಹತ್ತಿರ ಡೊಳ್ಳಿನ ಹಾಡು ಕುಣಿತ, ಕೊಳಲುನಾದ, ವೀರಕಾರರ ಕುಣಿತ, ಚೌಡಮ್ಮ ದೇವಿ ವೇಷಧಾರಿಗಳ ಸಕ್ಕಾ ಸರಿಗೆ ಸೇರಿದಂತೆ ವಿವಿಧ ಆಟಗಳು, ಹಾಡುಕುಣಿತ, ಜಾನಪದ ಜಾತ್ರೆ ನಸುಕಿನವರೆಗೆ ಜರುಗಿತು.
ನಂತರ ವಾದ್ಯ ವೈಭವದೊಂದಿಗೆ ಗ್ರಾಮದ ವಿವಿಧ ಮನೆಗಳಿಗೆ ದೇವಿಯ ವೇಷಧಾರಿಗಳು ತೆರಳಿದರು. ನಂತರ ಚೌಡಮ್ಮದೇವಿ ಸಹೋದರಿಯರ ಮುಖಾಕೃತಿಗಳನ್ನು ದೇವಸ್ಥಾನದಲ್ಲಿ ಯಥಾಪ್ರಕಾರ ಪ್ರತಿಷ್ಠಾಪಿಸಲಾಯಿತು. ಜಾತ್ರೆ ನಿಮಿತ್ತ ಗ್ರಾಮದ ಯುವಕರು ಅಭಿನಯಿಸಿದ ಅಣ್ಣನ ಕಣ್ಣೀರು ನಾಟಕ, ಶಬ್ಬೀರ್ ಡಾಂಗೆ ಅವರಿಂದ ಜಾನಪದ ಗಾಯನ ನಡೆಯಿತು. ಶನಿವಾರ ವಿಶ್ವನಾಥ ಜೋಶಿ ಹೈದ್ರಾಬಾದ ತಂಡದವರಿಂದ ಜಾದು ಕಾರ್ಯಕ್ರಮ, ಫೆ.26 ರಂದು ಮದ್ಯಾಹ್ನ 3:00 ಗಂಟೆಗೆ ಜಂಗೀ ಕುಸ್ತಿಗಳು ನಡೆಯಲಿವೆ.