ಬೆಂಗಳೂರು:ನಗರದ ಮಲ್ಲೇಶ್ವರಂನಲ್ಲಿರುವ ಪ್ರತಿಷ್ಠಿತ ಮಂತ್ರಿಮಾಲ್ ನ ಹಿಂಭಾಗದ ಗೋಡೆ ಕುಸಿದಿರುವ ಆಘಾತಕಾರಿ ಘಟನೆ ಸೋಮವಾರ ನಡೆದಿದ್ದು, ಮಂತ್ರಿಮಾಲ್ ನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಮಾಲ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಲಕ್ಷ್ಮಮ್ಮ ಎಂಬಾಕೆ ಗಾಯಗೊಂಡಿದ್ದು, ಆಕೆಯನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂತ್ರಿಮಾಲ್ ಗೋಡೆ ಕುಸಿದಿದೆ ಎಂಬ ಸುದ್ದಿಯಿಂದಾಗಿ ಮಾಲ್ ನಲ್ಲಿದ್ದ ಸಿಬ್ಬಂದಿಗಳು, ಜನರು ಆತಂಕಕ್ಕೀಡಾಗಿದ್ದಾರೆ ಎಂದು ವರದಿ ವಿವರಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ತೆರವುಗೊಳಿಸಲಾಗುತ್ತಿದೆ ಎಂದು ವರದಿ ಹೇಳಿದೆ.
ನೀರು ಸರಬರಾಜು ಪೈಪ್ ತುಂಡಾಗಿ 1ರಿಂದ 3ನೇ ಮಹಡಿಯಲ್ಲಿ ನೀರು ತುಂಬಿಕೊಂಡಿತ್ತು. ನೀರು ಸಂಗ್ರಹದಿಂದ ಹಿಂಭಾಗದ ಗೋಡೆ ಕುಸಿದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ತಾತ್ಕಾಲಿಕವಾಗಿ ಮಂತ್ರಿಮಾಲ್ ಬಂದ್:
ಮುನ್ನೆಚ್ಚರಿಕೆಯ ಅಂಗವಾಗಿ ತಾತ್ಕಾಲಿಕವಾಗಿ ಮಂತ್ರಿಮಾಲ್ ಬಂದ್ ಮಾಡಲಾಗಿದೆ ಎಂದು ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಬಿಬಿಎಂಪಿ ಮೇಯರ್ ಪದ್ಮಾವತಿ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.