ರಬಕವಿ-ಬನಹಟ್ಟಿ : ಭಾರತೀಯರ ಆಚರಣೆ ಮತ್ತು ಸಂಪ್ರದಾಯಗಳಿಗೆ ತನ್ನದೇ ಆದ ಮಹತ್ವಗಳಿವೆ. ಈ ಆಚರಣೆಗಳಿಗೆ ಊತಿಹಾಸಿಕ ಹಿನ್ನಲೆಯೂ ಇದೆ. ಈ ಆಚರಣೆಗಳು ಶತಶತಮಾನದಿಂದಲೂ ನಡೆದುಕೊಂಡು ಬಂದಿರುವಂತಹವು. ನಮ್ಮ ಗ್ರಾಮೀಣ ಪ್ರದೇಶಗಳು ಆಧುನಿಕತೆಯ ಜೊತೆಗೆ ಸಂಪ್ರದಾಯಗಳನ್ನು ಬಿಟ್ಟು ಬಿಡದೆ ಆಚರಿಸುತ್ತಾ ಬಂದಿರುವುದಕ್ಕೆ ಐದೇಶಿ ಸಂದರ್ಭದಲ್ಲಿ ಮಲ್ಲಯ್ಯನ ದೇವಸ್ಥಾನದಲ್ಲಿ ನಡೆಯುವ ಐದು ದಿನಗಳ ಮಂಗಳಾರತಿ ಕಾರ್ಯಕ್ರಮ ವಿಶೇಷವಾಗಿದೆ.
ದೇವರನ್ನು ಕರೆದುಕೊಂಡ ದಿನದಿಂದ ಐದು ದಿನಗಳ ಕಾಲ ಪ್ರತಿ ರಾತ್ರಿ 9 ಗಂಟೆಗೆ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಮಲ್ಲಯ್ಯನ ಮಂಗಳಾರತಿ ಕಾರ್ಯಕ್ರಮ ನಡೆಯುತ್ತದೆ. ಈ ಮಂಗಳಾರತಿಗೆ ನಗರದ ನೂರಾರು ಜನರು ಬಂದು ಸಾಮೂಹಿಕವಾಗಿ ಮಂಗಳಾರುತಿ ಮಾಡುತ್ತಾರೆ. ಗಂಡು ಮಕ್ಕಳು ದಿವಟಿಗೆಗಳನ್ನು ಹಿಡಿದುಕೊಂಡು ಬಂದರೆ ಮಹಿಳೆಯರು ಆರತಿಯನ್ನು ತರುತ್ತಾರೆ.
ಹಿಂದಿನ ಕಾಲದಲ್ಲಿ ಶ್ರೀಶೈಲಕ್ಕೆ ಹೋಗಲು ಯಾವುದೇ ಸಾಧನಗಳು ಇರಲಿಲ್ಲ. ಭಕ್ತರು ನಡೆದುಕೊಂಡು ಇಲ್ಲವೆ ಬಂಡಿಗಳನ್ನು ಕಟ್ಟಿಕೊಂಡು ಹೋಗುವುದು ವಾಡಿಕೆ. ಆದರಲ್ಲಿ ನಡೆದುಕೊಂಡು ಹೋಗುವವರೆ ಜಾಸ್ತಿ. ತಮ್ಮ ಸ್ಥಳದಿಂದ ಆಂಧ್ರಪ್ರದೇಶದ ಮಲ್ಲಿಕಾರ್ಜುನ ದೇವಸ್ಥಾನವನ್ನು ತಲುಪುವವರೆಗೆ ಆದ ನೋವು ಸಂಕಟ, ಸುಖ ದುಃಖಗಳನ್ನು ಮತ್ತು ಇಲ್ಲಿಂದ ನಡೆಯುತ್ತ ಶ್ರೀಶೈಲದವರೆಗೆ ಹೋದರೆ ಮಲ್ಲಿಕಾರ್ಜುನ ಆಶೀರ್ವಾದ ರೂಪದಲ್ಲಿ ಭಕ್ತರಿಗೆ ಏನು ಕೊಡುತ್ತಾನೆ ಇವೆಲ್ಲ ವಿಷಯಗಳು ಮಂಗಳಾರತಿಯಲ್ಲಿವೆ. ನಡೆಯುತ್ತಾ ಹೋಗುವವರ ಅನುಭವದ ಪದಗಳು, ಸಾಲುಗಳು ಮಂಗಳಾರತಿಯಲ್ಲಿವೆ.
ಶ್ರೀಶೈಲಕ್ಕೆ ಹೋಗುವ ಮಾರ್ಗದಲ್ಲಿ ಕಡಿದಾದ ಬೆಟ್ಟಗಳನ್ನು ಹತ್ತಿಕೊಂಡು ಹೋಗಬೇಕು. ಮಂಗಳಾರತಿಯಲ್ಲಿ ಬರುವ ಸಾಲುಗಳು` ಒಬ್ಬರ ಕೈಗಳ ಒಬ್ಬರ ಹಿಡಿಯುತ ಹಬ್ಬಿದ ಗಿರಿಗಳ ಏರುತಲಿ, ಹುಬ್ಬಿ ಹಾಳಿಗಳ ಬೀಸುತಲಿ, ಯಾಲಕಿ ಪುಡಿಗಳ ನೀಡುತಲಿ’ ಅದೇ ರೀತಿಯಾಗಿ ಗಿರಿಗಳನ್ನು ಏರುವಾಗ ಆಯ ತಪ್ಪಿದರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಅದಕ್ಕಾಗಿ`ಕಾಲ ಜಾರಿತೋ ಕೋಲ ಮುರಿಯಿತೋ ಕೊಪ್ಪರಿಗೆ ಒಡಿಯಿತೋ ಮಲ್ಲಯ್ಯ’
ಇದು ಒಂದು ನುಡಿಯಾದರೆ ಇನ್ನೋಂದು ನುಡಿ ‘ಇಲ್ಲಿಂದ ಅಲ್ಲಿಗೆ ಹೋದರತ್ತ ಏನ್ ಕೋಡುವಣೋ ಮಲ್ಲಯ್ಯ, ಏರಿನೆಂದರ ಕುದರಿ ಛತ್ತರಗಿ ಸಂಪತ್ತು ಕೊಡುವಣೋ ಮಲ್ಲಯ್ಯ, ಧನವ ಕೊಟ್ಟವ ಕೊಟ್ಟ ಧಾನ್ಯವ ಕೊಟ್ಟ ಸಿರಿಯ ಕೊಟ್ಟ ಸಂಪತ್ತು ಕೊಟ್ಟ’
ಈ ರೀತಿಯ ಒಟ್ಟು ಐವತ್ತಕ್ಕೂ ಹೆಚ್ಚು ನುಡಿಗಳ ಮಂಗಳಾರತಿ ಇದಾಗಿದೆ. ನಡೆಯುತ್ತಾ ಹೋಗುತ್ತಿರುವ ಸಂದರ್ಭದಲ್ಲಿ ಕೆಲವು ಊರು ಮತ್ತು ದೇವಸ್ಥಾನಗಳು ಬರುತ್ತವೆ. ಅವುಗಳ ಮಹತ್ವವನ್ನು ಮಂಗಳಾರತಿಯಲ್ಲಿ ವರ್ಣಿಸಲಾಗಿದೆ.
ಇಂತಹ ವಿಶಿಷ್ಟವಾದ ಮಂಗಳಾರತಿಯನ್ನು ಐದೇಶಿ ಸಂದರ್ಭದಲ್ಲಿ ಇಂದಿನ ದಿನಮಾನಗಳಲ್ಲೂ ಹಾಡುತ್ತಾ ಬಂದಿರುವುದು ಅಪರೂಪ. ಜಾತಿ, ಮತ ಪಂಥ ಹಿರಿಯರು, ಕಿರಿಯರು, ಸ್ತ್ರಿ ಪುರುಷ, ಬಡವ ಶ್ರೀಮಂತ ಎನ್ನದೆ ಎಲ್ಲರೂ ಒಂದಾಗಿ ಹಾಡುವ ಈ ಮಂಗಳಾರುತಿಗೆ ಶತ ಶತಮಾನದ ಇತಿಹಾಸವಿದೆ.
–ಕಿರಣ ಶ್ರೀಶೈಲ ಆಳಗಿ