ಮನುಷ್ಯನಂತೆಯೇ ಸಂಘ ಜೀವಿಯಾಗಿರುವ ಕಾಡುಬಾತು ಐದರಿಂದ ಹತ್ತು ವರ್ಷ ಮಾತ್ರ ಬದುಕುತ್ತದೆ. ಕ್ವಾಕ್, ಕ್ವಾಕ್ ಎಂದು ಏರುದನಿಯಲ್ಲಿ ಕೂಗುವ ಈ ಹಕ್ಕಿ, ಒಂದು ಬಾರಿಗೆ 8ರಿಂದ 13 ಮೊಟ್ಟೆಗಳನ್ನು ಇಡುತ್ತದೆ.
ಈ ಹಕ್ಕಿಯನ್ನು ಹಸಿರು ತಲೆ ಬಾತು ಅಂತಲೂ ಕರೆಯುತ್ತಾರೆ. ಈ ಬಾತಿಗೆ ದಪ್ಪ, ಅಗಲ -ಉದ್ದವಾದ ಚುಂಚಿದೆ. 61 ಸೆಂ.ಮೀ.ಯಷ್ಟು ದೊಡ್ಡದಾಗಿರುವ ಬಾತುಕೋಳಿ ಇದು. ಜಗತ್ತಿನಲ್ಲಿ ಸುಮಾರು 120 ಕ್ಕಿಂತ ಹೆಚ್ಚು ತಳಿಯ ಬಾತುಗಳನ್ನು ಗುರುತಿಸಲಾಗಿದೆ. ಇವೆಲ್ಲ ನೀರಿನ ಸಮೀಪವೇ ವಾಸಿಸುತ್ತವೆ. ಸಿಹಿ ನೀರಿನಲ್ಲಿ ಕೆಲವು ಬಾತುಗಳಿದ್ದರೆ, ಇನ್ನು ಕೆಲವು ಉಪ್ಪು ನೀರಿನ ಸರೋವರ, ನದಿ, ಗಜನೀಪ್ರದೇಶ, ಸಮುದ್ರದಲ್ಲೂ ಇರುತ್ತವೆ.
ಇದು ಮನುಷ್ಯನಂತೆ ಸಂಘ ಜೀವಿ. ಇದರ ಜೀವಿತಾವಧಿ ಐದರಿಂದ ಹತ್ತು ವರ್ಷ ಮಾತ್ರ. ಈ ಹಕ್ಕಿ ರೆಕ್ಕೆ ಅಗಲಿಸಿದಾಗ 82 ರಿಂದ 95 ಸೆಂ.ಮೀಗಷ್ಟು ಉದ್ದಕ್ಕೆ ಚಾಚುತ್ತದೆ. ಇದು ದಪ್ಪ ಮತ್ತು ಭಾರವಾದ ದೇಹ ಇರುವ ಬಾತು. ವರ್ತುಲಾಕಾರದ ತಲೆ ಇದಕ್ಕಿದೆ. ಇತರ ಬಾತಿಗಿರುವಂತೆ ಅಗಲವಾದ , ಚಪ್ಪಟೆಯಾಗಿರುವ ಚುಂಚು ಇರುವ ಬಾತುಗಳಿಗೆ ಇನ್ನೂ ಕಾಣಬಹುದು.
ಈಜುವಾಗ ಇದರ ಬಾಲದ ಪುಕ್ಕ ನೀರಿಗಿಂತ ಮೇಲಿರುತ್ತದೆ. ಈ ಲಕ್ಷಣ ತಿಳಿದು ಇದನ್ನು ಇತರ ಬಾತುಗಳಿಗಿಂತ ಬೇರೆ ಎಂದು ಸುಲಭವಾಗಿ ಗುರುತಿಸ ಬಹುದು. ಇದರ ಚುಂಚು ಹರಿತವಾಗಿರದೆ ಮೊಂಡಾಗಿಯೂ ಇರುತ್ತದೆ. ಹಾರುವಾಗ ಈ ಹಕ್ಕಿಗೆ ಎಷ್ಟು ದೊಡ್ಡ ರೆಕ್ಕೆ ಇದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ರೆಕ್ಕೆಯಲ್ಲಿರುವ ಮಚ್ಚೆ ನೀಲಿ ಬಣ್ಣವಾದರೂ, ಸುತ್ತಲೂ ಬಿಳಿ ಬಣ್ಣದಿಂದ ಆವೃತ್ತವಾಗಿರುತ್ತದೆ. ಹಾರುವಾಗ, ಈ ಬಣ್ಣ ಫಳ ಫಳ ಹೊಳೆಯುತ್ತದೆ. ಗಂಡು ಹಕ್ಕಿಯ ತಲೆ, ಕುತ್ತಿಗೆ -ದಟ್ಟ ಹಸಿರುಬಣ್ಣದಿಂದ ಕೂಡಿರುತ್ತದೆ. ಎದೆ ಮತ್ತು ಕುತ್ತಿಗೆಯನ್ನು ಕತ್ತಿನ ಬುಡದಲ್ಲಿರುವ ಬಿಳಿಗೆರೆಯು ಪ್ರತ್ಯೇಕ ಮಾಡುತ್ತದೆ.
ಈ ಹಕ್ಕಿ ಸಾಮಾನ್ಯವಾಗಿ ಕೆರೆ, ಸರೋವರ, ನದೀತೀರದ ಸಮೀಪ ಗೂಡನು ನಿರ್ಮಿಸಿಕೊಳ್ಳುತ್ತದೆ. ಇವು ಭಾರತಕ್ಕೆ ಚಳಿಗಾಲದಲ್ಲಿ ವಲಸೆ ಬರುತ್ತದೆ. ನೀರಿಗೆ ಸಮೀಪ ಇರುವ ಚಿಕ್ಕ ಪೊದೆ ಇಲ್ಲವೇ ಹುಲ್ಲು ಇರುವ ಜಾಗದಲ್ಲಿ ನೆಲಮಟ್ಟದಲ್ಲಿ ತೇಲುಸಸ್ಯ ಮತ್ತು ಜೊಂಡು ಹುಲ್ಲನ್ನು ಉಪಯೋಗಿಸಿ -ಗೂಡನ್ನು ರಚಿಸುವುದು . ಮೇ ದಿಂದ ಜೂನ್ ಅವಧಿಯಲ್ಲಿ ಮರಿ ಮಾಡುತ್ತದೆ. ಮರಿಮಾಡುವ ಸಮಯದಲ್ಲಿ ಹಾಗೂ ಹೆಣ್ಣನ್ನು ಆಕರ್ಷಿಸಲು ಭಿನ್ನವಾದ ದನಿಯಲ್ಲಿ ಕೂಗುತ್ತದೆ. ಬೂದು ಇಲ್ಲವೇ ಹಳದಿ ಬಣ್ಣದ ಮೊಟ್ಟೆ ಇಡುತ್ತದೆ. ಒಂದು ಸಲಕ್ಕೆ 8ರಿಂದ 13 ಮೊಟ್ಟೆ ಇಡುತ್ತದೆ. 27-28 ದಿನಗಳ ವರೆಗೆ ಕಾವು ಕೊಡುತ್ತದೆ. 50-60 ದಿನಗಳಲ್ಲಿ ಮೊಟ್ಟೆ ಬಲಿತು ಮರಿಯಾಗುವುದು. ಆಶ್ಚರ್ಯ ಎಂದರೆ ಮರಿಯಾದ ತಕ್ಷಣ ಈಜಲು ಆರಂಭಿಸುತ್ತದೆ. ಕ್ವಾಕ್ , ಕ್ವಾಕ್ ಕ್ವಾಕ್, ಎಂದು, ಏರುದನಿಯಲ್ಲಿ, ಮತ್ತೆ ಮಂದ್ರದನಿಯಲ್ಲಿ ಭಿನ್ನವಾಗಿ ಕೂಗುವುದು ಇದರ ವಿಶೇಷ.
ಹುಲ್ಲಿನ ದಂಟು, ತೇಲು ಸಸ್ಯಗಳು, ಅದರ ಚಿಗುರು ಎಲೆ, ಬೀಜ, ದಂಟಿನ ಒಳಗಿರುವ ಮೃದು ಭಾಗ, ಮೀನು, ಮೃದ್ವಂಗಿಗಳ ಮಾಂಸ, ಎರೆಹುಳು, ಚಿಕ್ಕ ಕ್ರಿಮಿಗಳನ್ನು ಸಹ ತಿನ್ನುತ್ತದೆ. ಕೆಲವೊಮ್ಮ ಭತ್ತದ ಪೈರು ಬೆಳೆದ ಜಾಗಕ್ಕೆ ಬಂದು ಅಲ್ಲಿರುವ ಎಳೆ ಹುಲ್ಲನ್ನು ತಿಂದು- ರೈತರ ಕೆಂಗಣ್ಣಿಗೆ ಗುರಿಯಾಗುವುದೂ ಉಂಟು. ಚಪ್ಪಟೆ ಚುಂಚು ಇರುವುದರಿಂದ ಉಪ್ಪು ನೀರಿನ ಆಳದಲ್ಲೂ ತನ್ನ ಆಹಾರ ಹುಡುಕಲು, ಮೃದ್ವಂಗಿಗಳ ಮಾಂಸ ತಿನ್ನಲು ಅನುಕೂಲಕರವಾಗಿದೆ.
ಈ ಹಕ್ಕಿ ಅಂಟಾರ್ಟಿಕ ಪ್ರದೇಶವನ್ನು ಬಿಟ್ಟು ಜಗತ್ತಿನ ಎಲ್ಲಾ ಉಷ್ಣವಲಯ ಪ್ರದೇಶಗಳಲ್ಲಿ ಇರುತ್ತವೆ. ವಿಶೇಷ ಎಂದರೆ, ಇವುಗಳಲ್ಲಿ ಎಷ್ಟೋ ಹಕ್ಕಿಗಳು ವಲಸೆ ಹೋಗುವುದೇ ಇಲ್ಲ. ತನ್ನ ಇರುನೆಲೆಯಲ್ಲೇ ಜೀವನ ಪೂರ್ತಿ ಕಳೆಯುತ್ತದೆ. ಇನ್ನು ಕೆಲವು ಋತುಮಾನಕ್ಕೆ ಅನುಗುಣವಾಗಿ ವಲಸೆ ಹೋಗುತ್ತವೆ.
ಇದರಲ್ಲಿ ಹೆಣ್ಣು ಹಕ್ಕಿಗೆ ಕಿತ್ತಳೆ ಮತ್ತು ಹಳದಿ ಬಣ್ಣದ ಚುಂಚು ಇರುತ್ತದೆ. ಕಂದು, ತಿಳಿ ಕಂದು, ಬಿಳಿ ಹೆಣ್ಣು ಹಕ್ಕಿಯಲ್ಲಿ ಪ್ರಧಾನವಾಗಿ ಕಾಣುವ ಬಣ್ಣ. ಹೆಣ್ಣಿಗಿಂತ ಗಂಡು ಹಕ್ಕಿ ಹೆಚ್ಚು -ಅಚ್ಚ ಬಣ್ಣದಿಂದ ಕೂಡಿರುತ್ತದೆ. ಹೆಣ್ಣಿಗೆ ಕಂದು ತಿಳಿ ಕಂದು ಬಿಳಿಬಣ್ಣದಿಂದ ಕೂಡಿದ ತಲೆ ಇದೆ.
ಪಿ.ವಿ.ಭಟ್ ಮೂರೂರು