ಕಾರಟಗಿ: ಹೇಮರಡ್ಡಿ ಮಲ್ಲಮ್ಮನವರ ಆದರ್ಶಗಳನ್ನು ಮಹಿಳೆಯರು ಚಾಚು ತಪ್ಪದೇ ಪರಿಪಾಲನೆ ಮಾಡಬೇಕು ಎಂದು ಹರಿಹರದ ಶ್ರೀ ಹೇಮಾ, ವೇಮ ಸದ್ಬೋಧನಾ ಪೀಠದ ಶ್ರೀ ವೇಮಾನಂದ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಚಳ್ಳೂರ ಗ್ರಾಮದಲ್ಲಿ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಆರಾಧಿಸಿ ಸಾಕ್ಷಾತ್ಕರಿಸಿಕೊಂಡು ಹೇಮರಡ್ಡಿ ಮಲ್ಲಮ್ಮ ಮೋಕ್ಷ ಪಡೆಯಲು ಲೌಕಿಕ ಪ್ರಪಂಚ ತ್ಯಾಗ ಮಾಡದೇ ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದರು. ಅವರ ಜೀವನ ಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಯಾಗಿವೆ ಎಂದರು.
ಹೆಬ್ಟಾಳ ಬೃಹನ್ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಲ್ಲಮ್ಮ ಬಾಲ್ಯದಲ್ಲಿಯೇ ಶ್ರೀ ಶೈಲ ಮಲ್ಲಿಕಾರ್ಜುನನ ಪೂಜೆ ಜಪತಪಗಳಲ್ಲಿ ಮಗ್ನರಾಗಿರುತ್ತಿದ್ದರು. ಮಲ್ಲಿಕಾರ್ಜುನನ್ನು ಪೂಜಿಸಿ ಧ್ಯಾನಿಸಿ ಮುಕ್ತಿ ಪಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಕಾಯಕ ನಿಷ್ಠೆಯನ್ನು ಎಲ್ಲರೂ ಪಾಲಿಸಬೇಕು. ಉತ್ತಮ ಮನೋಭಾವಗಳನ್ನು ಬೆಳೆಸಿಕೊಳ್ಳುವುದರ ಮೂಲಕ ದಾನ-ಧರ್ಮಕ್ಕೆ ಹೆಚ್ಚು ಒತ್ತು ನೀಡಿ ವೈರಾಗ್ಯ ಮೂರ್ತಿಗಳಾಗಿ ಬಾಳುವುದರೊಂದಿಗೆ ಯೋಗಿಗಳಾಗಬೇಕು. ಮಲ್ಲಮ್ಮನವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕು ಅವರಂತೆ ಜೀವನದಲ್ಲಿ ಸದ್ಗತಿ ಹೊಂದಬೇಕು ಎಂದರು.
ಕಜ್ಜಿಡೋಣಿಯ ಕೃಷ್ಣಾನಂದ ಶಾಸ್ತ್ರೀಗಳು ಮಾತನಾಡಿದರು. ಇದೇ ಸಂದರ್ಭದಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಕಾರ್ಯಕ್ರಮಕ್ಕೆ ಮಾಜಿ ಶಾಸಕ ಜಿ. ವೀರಪ್ಪ ಕೇಸರಹಟ್ಟಿ, ಹಾಗೂ ವೇ.ಮೂ. ಸರ್ವಜ್ಞ ಸ್ವಾಮಿಗಳು, ವೇ.ಮೂ. ಚಂದ್ರಶೇಖರಯ್ಯಸ್ವಾಮಿಗಳು ಹಿರೇಮಠ ಸೋಮನಾಳ ಅವರು ಚಾಲನೆ ನೀಡಿದರು.
ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಅಂಗವಾಗಿ ಬೆಳಗ್ಗೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಗ್ರಾಮದ ಮುಖ್ಯ ರಸ್ತೆಯ ಮಾರ್ಗವಾಗಿ ಕುಂಭ ಕಳಸಹೊತ್ತ ಸುಮಂಗಲಿಯರೊಂದಿಗೆ ವಿವಿಧ ವಾದ್ಯ ಮೇಳಗಳೊಂದಿಗೆ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಶ್ರೀಶೈಲಗೌಡ ಪಾಟೀಲ, ಜಿಪಂ ಸದಸ್ಯ ಅಮರೇಶ ಗೋನಾಳ, ಕಾರಟಗಿ ಎಪಿಎಂಸಿ ಅಧ್ಯಕ್ಷ ಶರಣಪ್ಪ ಬಾವಿ, ಜಿ. ವೆಂಕನಗೌಡ ಕಾರಟಗಿ, ಶಿವಕುಮಾರ ಉದ್ಯಾಳ, ಮಹಾದೇವ ಸುಭೇದಾರ, ನಾಗರಾಜ ತಿರಚನಗುಡ್ಡ, ಪಂಪಾಪತಿ ರ್ಯಾವಳದ, ವಿರೂಪಾಕ್ಷಿ ಮೇಟಿ ಇದ್ದರು.