ರಾಣಿಬೆನ್ನೂರ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸಾರದಲ್ಲಿದ್ದುಕೊಂಡು ಪಾರಮಾರ್ಥ ಜೀವನ ಸಾಗಿಸಿದರು. ಬದುಕಿನಲ್ಲಿ ಎಷ್ಟೇ ಕಷ್ಟ-ಕಾರ್ಪಣ್ಯ ಬಂದರೂ ಸತ್ಯ ಮತ್ತು ಸತಿ ಧರ್ಮವನ್ನು ತಪ್ಪದೇ ಪಾಲಿಸಿದವರು ಎಂದು ಜಿಪಂ ಸದಸ್ಯ ಏಕನಾಥ ಬಾನುವಳ್ಳಿ ಹೇಳಿದರು.
ನಗರದ ಪಿ.ಬಿ. ರಸ್ತೆಯ ಶ್ರೀ ವೇಮನ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಶುಕ್ರವಾರ ಶ್ರೀ ವೇಮನ ವಿದ್ಯಾವರ್ಧಕ ಸಂಘ ಮತ್ತು ರಡ್ಡಿ ಸಮಾಜದ ವತಿಯಿಂದ ಹಮ್ಮಿಕೊಂಡ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ 598ನೇ ಜನ್ಮದಿನೋತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಶ್ರೀಶೈಲ ಮಲ್ಲಿಕಾರ್ಜುನನ್ನು ಆರಾಧ್ಯ ದೈವವಾಗಿ ಸ್ವೀಕರಿಸಿ ಜೀವನದ ಭಾರ ಹಾಕಿ ನಡೆದವಳು, ತನ್ನ ಮಾವ ಸೋಮರಡ್ಡಿ ನೀಡಿದ ಮನೆಗೆಲಸ ನಿಭಾಯಿಸುವ ಮೂಲಕ ಗುರು ಹಿರಿಯರಲ್ಲಿ ಗೌರವ ತೋರಿಸಿದವಳು. ಜೀವಿತಾವಧಿವರೆಗೆ ಸನ್ಮಾರ್ಗದಲ್ಲಿ ಜೀವನ ನಡೆಸಿ ಸ್ತ್ರೀ ಕುಲಕ್ಕೆ ಅನಘ್ಯರ್ ರತ್ನವಾಗಿದ್ದರು. ಅವರಂತೆ ಇಂದಿನ ತಾಯಂದಿರು ಮುನ್ನಡೆದರೆ ಬದುಕು ಹಸನಾಗುವುದು ಎಂದರು.
ಡಾ| ಆರ್.ಎಂ. ಕುಬೇರಪ್ಪ ಮಾತನಾಡಿ, ಇಡೀ ವಿಶ್ವಕ್ಕೆ ಗುರುವಾದ ಭಾರತದಲ್ಲಿ ಅನೇಕ ಮಹಾಪುರುಷರು, ಶರಣರು, ಋಷಿಮುನಿಗಳು, ಸಂತರು, ವಚನಕಾರರು ಆಗಿ ಹೋಗಿದ್ದಾರೆ. ಅಂಥವರಲ್ಲಿ ಹೇಮರಡ್ಡಿ ಮಲ್ಲಮ್ಮ ಕೂಡ ಒಬ್ಬರು ಎಂದು ಸ್ಮರಿಸಿದರು.
ಮಣಕೂರ ಸಿದ್ಧಾರೂಢ ಮಠದ ಬಸಮ್ಮತಾಯಿ ಗೌಡ್ರ ಹೇಮರಡ್ಡಿ ಮಲ್ಲಮ್ಮ ಕುರಿತು ಉಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ರಾಮಚಂದ್ರಪ್ಪ ರಾಯರಡ್ಡಿ, ಆರ್.ಡಿ. ಹೊಂಬರಡಿ, ಶ್ರೀನಿವಾಸ ಹಳ್ಳಳ್ಳಿ, ಕೆ.ಡಿ. ಬಜರಡ್ಡಿ, ಟಿ.ಎಫ್. ರಡ್ಡಿ, ಎಸ್.ಎಚ್. ಮೇಟಿ, ಎಸ್.ಕೆ. ಗಿರಡ್ಡಿ, ಎಸ್.ಕೆ. ಹೂಲಿಹಳ್ಳಿ, ಡಿ.ವಿ. ಜೀವನಗೌಡ್ರ, ಮಲ್ಲಿಕಾರ್ಜುನ ಕೆಂಚರಡ್ಡಿ ಇತರರಿದ್ದರು.