Advertisement

ಮಲ್ಲಳ್ಳಿ ಜಲಧಾರೆ ವೈಭವ

11:43 PM Aug 14, 2019 | mahesh |

ಸಂಗಾತಿಯ ಸಾಂಗತ್ಯವಿಲ್ಲದೆ ನೊಂದು ಬೆಂದಿದ್ದ ಇಳೆಯ ಸಕಲ ಬಯಕೆಗಳನ್ನು ಪೂರೈಸುವಂತೆ ಮಳೆ ಧಾರೆಯಾಗಿ ಸುರಿಯುತ್ತಿತ್ತು. ಮುಂಗಾರಿನ ಅಭಿಷೇಕದಿಂದ ಪ್ರೀತಿಯಂಥ ಹಸಿರು ಕಣ್ಣಿಗೆ ಮುತ್ತಿಡುತ್ತಿತ್ತು. ವರ್ಷಧಾರೆಗೆ ಮೈದುಂಬಿದ ಜಲಧಾರೆಗಳು ಪ್ರವಾಸಿಗರನ್ನು ಹರ್ಷದ ಹೊನಲಿನಲ್ಲಿ ಮೀಯಿಸುತ್ತಿದ್ದವು.

Advertisement

ದಕ್ಷಿಣದ ಕಾಶ್ಮೀರ ಎಂದೇ ಹೆಸರಾದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಬಳಿಯಿರುವ ಮಲ್ಲಳ್ಳಿ ಜಲಪಾತ ನಯನ ಮನೋಹರವಾಗಿದೆ. ದೂರದಲ್ಲಿ ಮುಗಿಲನ್ನು ಚುಂಬಿಸಲೋ ಎನ್ನುವಂತೆ ನಿಂತ ಪುಷ್ಪಗಿರಿ ಬೆಟ್ಟದ ಶ್ರೇಣಿಗಳು, ಅವುಗಳ ನಡುವಿನ ಕಂದಕದಲ್ಲಿ ಒತ್ತೂತ್ತಾಗಿ ಬೆಳೆದು ನಿಂತ ವೃಕ್ಷರಾಶಿಗಳು, ಏಲಕ್ಕಿ ಹಾಗೂ ಕಾಫಿ ತೋಟಗಳು ಕಣ್ಣು ಹಾಯಿಸಿದ್ದುದ್ದಕ್ಕೂ ಹಸುರು ಹಚ್ಚವನ್ನು ಹೊದ್ದ ನಿಸರ್ಗ. ಇಂತಹ ದಟ್ಟ ಕಾನನದ ನಡುವಿನ ಸುಂದರ ಪರಿಸರದ ಮಧ್ಯದಲ್ಲಿ ಹೆಬ್ಬಂಡೆಯೊಂದರ ಮೇಲೆ ಬಳ್ಳಿ ಬಳುಕಿದಂತೆ ಗೋಚರಿಸುತ್ತದೆ ಮಲ್ಲಳ್ಳಿ ಜಲಕನ್ಯೆ.

ವಿಹಂಗಮ ದೃಶ್ಯ
ಕೊಡಗಿನ ಬೇರೆ ಜಲಧಾರೆಗಳಿಗೆ ಹೋಲಿಸಿದರೆ ಮಲ್ಲಳ್ಳಿ ಜಲಧಾರೆ ವಿಭಿನ್ನವಾಗಿಯೂ ವಿಶಿಷ್ಟವಾಗಿಯೂ ಗಮನ ಸೆಳೆಯುತ್ತದೆ. ಬೆಟ್ಟಗಳ ನಡುವಿನ ಹೆಬ್ಬಂಡೆಗಳ ಮೇಲಿನಿಂದ ಬೃಹತ್‌ ಕಂದಕಕ್ಕೆ ಸುಮಾರು ಎಂಬತ್ತು ಅಡಿ ಅಗಲವಾಗಿ ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮ್ಮಿ ಕ್ಕುವ ಜಲರಾಶಿ. ಬಳಿಕ ಚಿಕ್ಕಚಿಕ್ಕ ಜಲಧಾರೆಗಳಾಗಿ ತಳ ಸೇರುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಒಂದು ಹೆಬ್ಬಂಡೆಯಿಂದ ಇನ್ನೊಂದಕ್ಕೆ ಚಿಮ್ಮುವಾಗ ಕಾಣಸಿಗುವ ಸುಂದರದೃಶ್ಯ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಒಂದು ಕ್ಷಣ ಭೂತಾಯಿಯ ಒಡಲ ಬೆಳ್ಳಿಯೆಲ್ಲವೂ ಕರಗಿ ಬಂಡೆಯ ಮೇಲೆ ಹರಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.

ಜಲಪಾತದ ವೈಶಿಷ್ಟ್ಯ
ಕೊಡಗಿನಲ್ಲಿರುವ ಬೇರೆಲ್ಲ ನದಿಗಳು ಪೂರ್ವ ದಿಕ್ಕಿಗೆ ಹರಿದು ಕಾವೇರಿಯೊಂದಿಗೆ ಸೇರಿ ಬಂಗಾಲಕೊಲ್ಲಿಯಲ್ಲಿ ವಿಲೀನವಾದರೆ ಈ ನದಿ ಮಾತ್ರ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ಜಲಧಾರೆಯು ಕುಮಾರಧಾರಾ ನದಿಯಿಂದ ನಿರ್ಮಿತವಾಗಿದ್ದು, ಜಲಪಾತವನ್ನು ಇಲ್ಲಿನ ಜನರು ಕುಮಾರಧಾರಾ ಜಲಧಾರೆ, ಪುಷ್ಪಹಾರಿ ಜಲಧಾರೆ, ಮಲ್ಲಳಿ ಹೊಳೆ, ಹೆಗ್ಗಡೆಮನೆ ಹೊಳೆ – ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ.

ಹಾದಿ ಸುಲಭವೇನಿಲ್ಲ
ಮಲ್ಲಳ್ಳಿ ಜಲಧಾರೆ ಸನಿಹಕ್ಕೆ ಹೋಗಿ ಬರುವುದು ಅಷ್ಟು ಸುಲಭದ ಮಾತಲ್ಲ. ಪೇಟೆ ಪಟ್ಟಣದಿಂದ ದೂರವಾಗಿ, ಬಸ್‌ ಹಾಗೂ ಖಾಸಗಿ ವಾಹನಗಳ ಸಂಚಾರದಿಂದ ವಂಚಿತವಾಗಿರುವ ಈ ತಾಣಕ್ಕೆ ಭೇಟಿ ನೀಡಬೇಕೆಂದರೆ ಒಂದಿಡೀ ದಿನವನ್ನು ಮೀಸಲಿಡಬೇಕು. ರಕ್ತ ಹೀರಲು ಬರುವ ಜಿಗಣೆಗಳಿಂದ ತಪ್ಪಿಸಿಕೊಂಡು ಕಲ್ಲು-ಮುಳ್ಳು, ಏರು ತಗ್ಗುಗಳ ಹಾದಿಯನ್ನು ಕ್ರಮಿಸಿ ಶ್ರಮ ಪಡಬೇಕು. ಇದಕ್ಕೆಲ್ಲ ತಯಾರಿದ್ದರೆ ಮಾತ್ರ ನಾವು ಸನಿಹಕ್ಕೆ ತೆರಳಿ ಜಲಧಾರೆಯ ಸೊಬಗನ್ನು ಸವಿಯಲು ಸಾಧ್ಯ.

Advertisement

ಇಲ್ಲಿಗೆ ತಲುಪುವುದು ಹೇಗೆ?
ಮಲ್ಲಳ್ಳಿ ಜಲಧಾರೆಯನ್ನು ವೀಕ್ಷಿಸಲು ತೆರಳುವವರು ಕೊಡಗಿನ ತಾಲೂಕು ಕೇಂದ್ರಗಳಲ್ಲಿ ಒಂದಾದ ಸೋಮವಾರ ಪೇಟೆಗೆ ತೆರಳಿದರೆ ಅಲ್ಲಿಂದ ಶಾಂತಳ್ಳಿ ಮೂಲಕ ಸುಮಾರು ಇಪ್ಪತ್ತು ಕಿ.ಮೀ. ಸಂಚರಿಸಬೇಕು. ಅಲ್ಲಿ ಹಂಚಿನಹಳ್ಳಿ ಗ್ರಾಮ ಸಿಗುತ್ತದೆ. ಇಲ್ಲಿಂದ ಬಲಕ್ಕೆ ಮಣ್ಣುರಸ್ತೆಯಲ್ಲಿ ನಾಲ್ಕು ಕಿ.ಮೀ. ಏರು-ತಗ್ಗುಗಳನ್ನು ದಾಟಿ ಮುನ್ನಡೆಯಬೇಕು. ಹೀಗೆ ನಡೆಯುವಾಗ ಆಯಾಸವಾಗುವುದು ಸಹಜ. ಆದರೆ ಸುತ್ತಲಿನ ನಿಸರ್ಗ ಸೌಂದರ್ಯ ನಮ್ಮ ಆಯಾಸವನ್ನು ಮರೆಸಿ, ಹೊಸ ಉಲ್ಲಾಸವನ್ನು ತುಂಬುತಿರುತ್ತದೆ. ಕಾಲ್ನಡಿಗೆಯ ಹಾದಿ ಮುಗಿಯುತ್ತಿದ್ದಂತೆಯೇ ವಿಶಾಲವಾದ ಮೈದಾನ ಎದುರಾಗುತ್ತದೆ. ಇಲ್ಲಿಂದ ನಿಂತು ನೋಡಿದರೆ ದೂರದಲ್ಲಿ ಹೆಬ್ಬಂಡೆಗಳ ನಡುವೆ ಶ್ವೇತಧಾರೆಯಾಗಿ ನಾಟ್ಯಾಂಗಿಯಂತೆ ಜಲಧಾರೆ ಕಂಗೊಳಿಸುತ್ತದೆ. ಸೋಮವಾರಪೇಟೆ ತನಕ ಹಾಗೂ ಅಲ್ಲಿಂದ ಶಾಂತಳ್ಳಿ ಮೂಲಕ ಹಂಚಿನಹಳ್ಳಿ ಗ್ರಾಮದ ವರೆಗೆ ಬಸ್ಸು ಸಿಗುತ್ತದೆ. ಮುಂದೆ ನಾಲ್ಕು ಕಿ.ಮೀ.ಗಳಷ್ಟು ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದ ದಾರಿ ಇದೆ. ಅಬ್ಬಿ ಜಲಪಾತವೂ ಸಮೀಪದಲ್ಲೇ ಇದೆ.

•ಕವಿತಾ ಎಂ.ಎಲ್., ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next