Advertisement

ಬಸ್‌ಸ್ಟಾಂಡ್‌ ಮೇಲೆ ಮಾಲ್‌, ಥಿಯೇಟರ್‌

11:33 AM May 17, 2017 | |

ಬೆಂಗಳೂರು: ಬಸ್‌ ನಿಲ್ದಾಣ, ಮಾಲ್‌ ಮತ್ತು ಮಲ್ಟಿಪ್ಲೆಕ್ಸ್‌ ಥಿಯೇಟರ್‌, ಒಳಾಂಗಣ ಕ್ರೀಡಾಂ­ಗಣ… ಇದೆಲ್ಲವೂ ಒಂದೇ ಸೂರಿನಡಿ ಸಿಕ್ಕರೆ ಹೇಗಿರುತ್ತದೆ? ಹೌದು, ಬಿಎಂಟಿಸಿ ಬಸ್‌ ಟಿಟಿಎಂಸಿಗಳ ಮೇಲ್ಛಾ­ವಣಿಯಲ್ಲಿ ಶಾಪಿಂಗ್‌ ಮಾಲ್‌, ಮಲ್ಟಿಪ್ಲೆಕ್ಸ್‌ ಥಿಯೇಟರ್‌, ಶೆಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌, ಹೋಟೆಲ್‌ ಈ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಬಿಎಂಟಿಸಿ ಚಿಂತನೆ ನಡೆಸಿದ್ದು, ಶೂನ್ಯ ಬಂಡ­ವಾಳದಲ್ಲಿ ಆದಾಯ ವೃದ್ಧಿಯ ಜತೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ನಿಗಮವು ಈ ಐಡಿಯಾ ಮಾಡಿದೆ. 

Advertisement

ಅದರಂತೆ ಟಿಟಿಎಂಸಿ ಮೇಲ್ಛಾವಣಿಯಲ್ಲಿ ಕನಿಷ್ಠ 4 ಸಾವಿರ ಚದರಡಿಯಿಂದ ಗರಿಷ್ಠ 36 ಸಾವಿರ ಚದರಡಿ ಜಾಗ ಇದೆ. ಅಲ್ಲಿ ಈ “ಆಸ್ತಿ ಸೃಜನೆ’ (ಪ್ರಾಪರ್ಟಿ ಡೆವಲಪ್‌ಮೆಂಟ್‌)ಗೆ ನಿಗಮ ಮುಂದಾಗಿದ್ದು, ಈ ಸಂಬಂಧ ಟೆಂಡರ್‌ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ. 

ಇದರ ಉದ್ದೇಶ ಜನರಿಗೆ ಹಲವು ಸೇವೆಗಳು ಒಂದೇ ಕಡೆ ಕಲ್ಪಿಸುವುದು. ಉದಾಹರಣೆಗೆ ಈಗಿರುವ ವ್ಯವಸ್ಥೆಯಲ್ಲಿ ಬಸ್‌ ನಿಲ್ದಾಣಕ್ಕೆ ಬಂದಿಳಿ­ಯುವ ಪ್ರಯಾಣಿಕರು ಥಿಯೇಟರ್‌ಗೆ ಹೋಗಬೇಕಾದರೆ, ಮತ್ತೂಂದು ದಿಕ್ಕಿಗೆ ತೆರಳಬೇಕು. ಕೆಲವರು ಇದೇ ಕಾರಣಕ್ಕೆ ನೇರವಾಗಿ ಆಟೋ ಅಥವಾ ಆ್ಯಪ್‌ ಆಧಾರಿತ ಟ್ಯಾಕ್ಸಿ ಬುಕ್‌ ಮಾಡಿ, ನೇರವಾಗಿ ಮಲ್ಟಿಪ್ಲೆಕ್ಸ್‌ ಅಥವಾ ಶಾಪಿಂಗ್‌ ಮಾಲ್‌ಗೆ ತೆರಳುತ್ತಾರೆ. ಇದೆಲ್ಲವೂ ಒಂದೇ ಕಡೆ ಸಿಕ್ಕರೆ ಜನ ಸಾರ್ವಜನಿಕ ಸಾರಿಗೆಯತ್ತ ಮುಖಮಾಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ. 

ಎಲ್ಲೆಲ್ಲಿ ಯೋಜನೆ?: ವಿಜಯನಗರ, ಬನಶಂಕರಿ, ಕೆಂಗೇರಿ, ಯಶವಂತಪುರ, ಯಲಹಂಕ ಓಲ್ಡ್‌ ಟೌನ್‌, ಇಸ್ರೋ ಲೇಔಟ್‌ನಲ್ಲಿರುವ ಟಿಟಿಎಂಸಿಗಳ ಮೇಲ್ಛಾವಣಿಯಲ್ಲಿ ಖಾಲಿ ಇರುವ ಜಾಗದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಚಿಂತನೆ ನಡೆದಿದೆ. ಈಗಾಗಲೇ ಇಸ್ರೋ ಲೇಔಟ್‌ನಲ್ಲಿ ಶೆಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌ ಹಾಗೂ ಉಳಿದೆಡೆ ಮಲ್ಟಿಪ್ಲೆಕ್ಸ್‌ ಥಿಯೇಟರ್‌ ನಿರ್ಮಿಸಲು ಉದ್ಯಮಿಗಳು ಮುಂದೆಬಂದಿದ್ದಾರೆ. 

ಟೆಂಡರ್‌ ಮೂಲಕ 12 ವರ್ಷಗಳ ಮಟ್ಟಿಗೆ ಗುತ್ತಿಗೆ ನೀಡಲಾಗುವುದು. ಇದರಲ್ಲಿ ನಿಗಮದ ಯಾವುದೇ ಬಂಡವಾಳ ಇರುವುದಿಲ್ಲ. ಬದಲಿಗೆ ಖಾಲಿ ಇರುವ ಜಾಗದಲ್ಲಿ ಈ ಸೇವೆಗಳು ಲಭ್ಯವಾ­ಗುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಜತೆಗೆ ಆದಾಯವೂ ಹರಿದುಬರುತ್ತದೆ ಎಂದೂ ಅಧಿಕಾರಿಗಳು ಹೇಳಿದರು. 

Advertisement

ನಗರದಲ್ಲಿ ಹತ್ತು ಟಿಟಿಎಂಸಿಗಳು ಸೇರಿದಂತೆ ಎಲ್ಲ ನಿಲ್ದಾಣಗಳಲ್ಲಿರುವ ಮಳಿಗೆಗಳಿಂದ ಬರುವ ಬಾಡಿಗೆ ವಾರ್ಷಿಕ 5 ಕೋಟಿ ರೂ. ಹಾಗೊಂದು ವೇಳೆ ಉದ್ದೇಶಿತ ಆರು ಟಿಟಿಎಂಸಿ ಮೇಲ್ಛಾವಣಿಯಲ್ಲಿ ಹೂಡಿಕೆ ಮಾಡಿದರೆ, ಹೆಚ್ಚು-ಕಡಿಮೆ ಇಷ್ಟೇ ಆದಾಯ ಬರುವ ಸಾಧ್ಯತೆ ಇದೆ. ಆದರೆ, ಈಗಲೇ ಈ ಬಗ್ಗೆ ನಿಖರವಾಗಿ ಹೇಳುವುದು ಕಷ್ಟ ಎಂದು ವಾಣಿಜ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಮೆಟ್ರೋ ಪ್ರೇರಣೆ?
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ವು “ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿ ಹೋಟೆಲ್‌, ಕಾಫಿ ಡೇ ಸೇರಿದಂತೆ ಹತ್ತುಹಲವು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿ ಕೊಟ್ಟಿದೆ. ಇದರಿಂದ ಪ್ರಸಕ್ತ ಸಾಲಿನಲ್ಲಿ ಸುಮಾರು 25 ಕೋಟಿ ರೂ. ಆದಾಯ ಹರಿದುಬಂದಿದೆ.  ಮುಂದಿನ ದಿನಗಳಲ್ಲಿ ನಿಗಮವು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಮಾಲ್‌, ಥಿಯೇಟರ್‌ನಂತಹ ವಿವಿಧ ಯೋಜನೆಗಳಿಗೆ ಕೈಹಾಕಲು ಉದ್ದೇಶಿಸಿದೆ. ಈ ಪ್ರಯೋಗವನ್ನು ಬಿಎಂಟಿಸಿ ಕೂಡ ತನ್ನ ಟಿಟಿಎಂಸಿಗಳಲ್ಲಿ ಮಾಡಲು ಮುಂದಾಗಿದೆ ಎನ್ನಲಾಗಿದೆ. 

ಪ್ರಯೋಗ ಹೊಸದು
ಈ ಹಿಂದೆ ಬಿಎಂಟಿಸಿಯು ಜಯನಗರ ಮತ್ತಿತರ ಟಿಟಿಎಂಸಿಗಳನ್ನು ಬಿಗ್‌ ಬಜಾರ್‌ ಸೇರಿದಂತೆ ಹಲವು ವಾಣಿಜ್ಯ ಚಟುವಟಿಕೆಗಳಿಗೆ ನೀಡಿದೆ. ಹಾಗಾಗಿ, ಬಿಎಂಆರ್‌ಸಿಯ ಪ್ರೇರಣೆ ಎನ್ನಲಾಗದು. ಆದರೆ, ಮೇಲ್ಛಾವಣಿಯಲ್ಲಿ ಈ ಪ್ರಯೋಗ ಹೊಸದು. ಅಷ್ಟಕ್ಕೂ ಸುಮಾರು ದಿನಗಳಿಂದ ಈ ಚಿಂತನೆ ನಡೆದಿದೆ. ಇದುವರೆಗೆ ಮಂಡಳಿಯಲ್ಲಿ ಅನುಮೋದನೆಗೊಂಡಿಲ್ಲ ಎಂದೂ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸುತ್ತಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next