Advertisement
ಹಾಗಂತ ಪೇಟೆಯ ಮಂದಿ ಪ್ರವಾಸ, ಸೈಟ್ ಸೀಯಿಂಗ್, ಟ್ರೆಕ್ಕಿಂಗ್ ಅಂತ ಮಲೆನಾಡಿಗೆ ಲಗ್ಗೆ ಹಾಕಬೇಡಿ. ನಾವಿನ್ನೂ ಪ್ರವಾಹದಿಂದ ಕೊಚ್ಚಿಹೋದ ರಸ್ತೆ, ಸೇತುವೆ, ವಿದ್ಯುತ್ ಕಂಬಗಳನ್ನು ಹುಡುಕುತ್ತಿದ್ದೇವೆ. ಸ್ಥಳೀಯ ಆಡಳಿತ, ಮೆಸ್ಕಾಂ, ಪಂಚಾಯ್ತಿಗಳು ಇನ್ನೂ ದುರಸ್ತಿ, ಪರಿಹಾರ ಕಾರ್ಯದಲ್ಲಿ ಮುಳುಗಿವೆ. ಯಾರಿಗೆ ಗೊತ್ತು ಸಂಜೆಯಿಂದಲೇ ಮತ್ತೆ ಮಳೆ ಶುರುವಾಗಬಹುದು.
Related Articles
Advertisement
ಹಾಗಾಗಿ ನೀವೀಗ ಅನಪೇಕ್ಷಿತ ಅತಿಥಿ. ಜೊತೆಗೆ ನೀವು ಕಂಡಕಂಡಲ್ಲಿ ಕಾರು ನಿಲ್ಲಿಸಿಕೊಂಡು ಕುಡಿದು ಬಿಸಾಕಿದ ಮದ್ಯದ ಬಾಟಲಿಗಳಂತೂ ಈ ರಣಮಳೆಗೆ ತೇಲಿಬಂದು ಕೆರೆಕಟ್ಟೆ, ಗದ್ದೆ-ಅಳಿವೆಗಳನ್ನು ಸೇರಿವೆ. ಅವು ಒಡೆದ ಒಂದೇ ಒಂದು ಚೂರು ಅನ್ನದಾತನ ಒಂದು ಪಾದಕ್ಕೆ ನಾಟಿದರೂ ಅವನು ಕನಿಷ್ಠ ಮೂರು ತಿಂಗಳು ಕೆಲಸಕೇಡು ಬಿಟ್ಟು ಅರೈಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೇ ಕಾಡಿನಂಚಿನಲ್ಲಿ ರಾಶಿಬಿದ್ದಿರುವ ಆ ಬಾಟಲಿಯ ಚೂರು ಜಿಂಕೆ, ಕಾಡುಕೋಣ, ಅನೆ ಮುಂತಾದ ವನ್ಯಪ್ರಾಣಿಗಳ ಕಾಲಿಗೆ ನಾಟಿದರಂತೂ ಬಹುತೇಕ ಅದು ಕೀವಾಗಿ, ಕೊಳೆತು, ಕೊನೆಗೆ ಅದರ ಜೀವವನ್ನೇ ಬಲಿತೆಗೆದುಕೊಳ್ಳಲಿದೆ.
ಮನುಷ್ಯ ಸಂಚಾರವೇ ದುಃಸಾಧ್ಯವಾದ ಕಾನೂರು ಕೋಟೆಯ ತಪ್ಪಲಿನಲ್ಲಿ ಕೂಡ ನಿಮ್ಮ ಇಂಥ ‘ನಾಗರಿಕ’ ಕೃತ್ಯಗಳ ಕುರುಹುಗಳು ಸಾಕ್ಷಿಬಿದ್ದಿವೆ.
ಇಡೀ ಮಲೆನಾಡು ಮಳೆಗಾಳಿ, ಪ್ರವಾಹ, ಭೂಕುಸಿತವಷ್ಟೇ ಅಲ್ಲದೆ ನಿಮ್ಮ ಇಂಥ ಘನ ಕೃತ್ಯಗಳ ಕಾರಣದಿಂದಾಗಿಯೂ ಸಾಕಷ್ಟು ಅನುಭವಿಸುತ್ತಿದೆ. ಹಾಗಾಗಿ ಕನಿಷ್ಟ ಇಂಥ ಸಂಕಷ್ಟದ ಹೊತ್ತಲ್ಲಾದರೂ ನಿಮ್ಮ ಪಾಡಿಗೆ ನೀವು, ತೆಪ್ಪಗೆ ನಿಮ್ಮ ಊರಲ್ಲೇ ಇದ್ದು ಉಪಕಾರ ಮಾಡಿ, ಹುಯ್ ಎಂದು ಲಗ್ಗೆ ಇಟ್ಟು ಮೊದಲೇ ಹೈರಾಣಾಗಿರುವ ಮಲೆನಾಡಿಗೆ ಇನ್ನಷ್ಟು ಕಂಟಕ ತರಬೇಡಿ..
ಮುಂದೆ ಬಂದರೂ; ಮಲೆನಾಡಿನ ಪ್ರತಿ ಬಯಲು, ಪ್ರತಿ ಬ್ಯಾಣ, ಬೆಟ್ಟ, ಗುಡ್ಡಗಳನ್ನೂ ಆಶ್ರಯಿಸಿದ ಜನ, ಪ್ರಾಣಿ, ಪಕ್ಷಿಗಳಿವೆ. ಅದು ನಿಮ್ಮ ಮೋಜುಮಸ್ತಿಯ ಉಂಬಳಿ ಜಾಗವಲ್ಲ ಎಂಬ ಎಚ್ಚರವಿರಲಿ. ಮತ್ತು ನಿಮ್ಮ ಕಸವನ್ನು ನೀವೇ ಹೊತ್ತುಕೊಂಡು ಹೋಗಿ..
ಅಷ್ಟರಮಟ್ಟಿಗೆ ಕನಿಷ್ಟ ಮನುಷ್ಯತ್ವ ತೋರಿಸಿ..
ವರದಿ: ಸಂತೋಷ್ ಅತ್ತಿಗೆರೆ