Advertisement

ಮಲೆನಾಡು, ಕರಾವಳಿ ಪ್ರಿಯರ “ಅಕ್ಕಿರೊಟ್ಟಿ’ಹೋಟೆಲ್‌

06:00 AM Oct 15, 2018 | |

ಮಲೆನಾಡು, ಕರಾವಳಿ ಜನರ ಬೆಳಗ್ಗಿನ ಉಪಾಹಾರ ಅಕ್ಕಿರೊಟ್ಟಿ. ಇದರ ಜೊತೆಗೆ ಕಾಯಿ ಚಟ್ನಿ ಇದ್ರೆ ಕೇಳ್ಳೋದೇ ಬೇಡ. ಇಂತಹ ತಿನಿಸಿನಿಂದಲೇ ಹೆಸರಾಗಿರುವ ಒಂದು ಹೋಟೆಲ್‌ ಸಕಲೇಶಪುರದಲ್ಲಿ ಇದೆ. ಮಲೆನಾಡು, ಕರಾವಳಿ ಜನರ ಆಹಾರ ಅಭಿರುಚಿಯನ್ನೇ ಮುಖ್ಯವಾಗಿಟ್ಟುಕೊಂಡು ಪ್ರಾರಂಭಿಸಿರುವ ಈ ಹೋಟೆಲ್‌ನ ವಿಶೇಷ ತಿಂಡಿ ಅಕ್ಕಿರೊಟ್ಟಿ.

Advertisement

ಸಕಲೇಶಪುರ ಪಟ್ಟಣದಿಂದ ಮಂಗಳೂರಿಗೆ ಹೋಗುವ ರಸ್ತೆಯಲ್ಲೇ ಮೂರು ಕಿ.ಮೀ. ಹೋದರೆ ಆನೆ ಮಹಲ್‌ ಸಿಗುತ್ತದೆ. ಅಲ್ಲಿ ಕೆನರಾ ಬ್ಯಾಂಕ್‌ ಇದೆ. ಅದರ ಎದುರು ಇರುವ ಹಂಚಿನ ಮನೆಯಲ್ಲಿ ಈ ಹೋಟೆಲ್‌ ನಡೆಸಲಾಗುತ್ತಿದೆ. 15 ವರ್ಷಗಳ ಹಿಂದೆ ಬಲವಂತ್‌ ಮತ್ತು ಅವರ ಪತ್ನಿ ಗಿರಿಜಾ ಕೇವಲ ಟೀ, ಕಾಫಿ ಮಾರಾಟದ ಉದ್ದೇಶ ಇಟ್ಟುಕೊಂಡು ಕಾಂಡಿಮೆಂಟ್ಸ್‌ ರೀತಿಯಲ್ಲಿ ಸಣ್ಣ ಮಟ್ಟದಲ್ಲಿ ಶಾಪ್‌ ಶುರು ಮಾಡಿದ್ದರು. ಆದರೆ, ಗ್ರಾಹಕರೆಲ್ಲ ಹೆಚ್ಚಾಗಿ ತಿಂಡಿ, ಊಟ ಕೇಳುತ್ತಿದ್ದರಿಂದ ಮೂರು ವರ್ಷಗಳ ನಂತರ ಮಲೆನಾಡಿನ ಮನೆಗಳಲ್ಲಿ ಹೆಚ್ಚಾಗಿ ಮಾಡುವ ಅಕ್ಕಿರೊಟ್ಟಿ, ಕಡುಬು, ಚಿತ್ರಾನ್ನವನ್ನು ನೀಡಲು ಶುರು ಮಾಡಿದರು. ಇದೀಗ ಆ ಅಕ್ಕಿರೊಟ್ಟಿಯೇ ಈ ಹೋಟೆಲ್‌ನ ಗುರುತಿಸುವಂತೆ ಮಾಡಿದೆ. ಅಲ್ಲದೆ, ಗ್ರಾಹಕರಿಗೂ ಈ ರೆಸಿಪಿ ಇಷ್ಟವಾಗಿದೆ. ಬಲವಂತ್‌ ಅವರ ಪತ್ನಿ ಗಿರಿಜಾ ಹೋಟೆಲ್‌ನ ಬೆನ್ನೆಲುಬಾಗಿದ್ದು, ಪುತ್ರ ಪ್ರಶಾಂತ್‌ ಕೂಡ ಕೃಷಿಯ ಜೊತೆ ಹೋಟೆಲ್‌ ನೋಡಿಕೊಳ್ಳುತ್ತಾರೆ. ಇವರಿಗೆ ಪತ್ನಿ ಲಕ್ಷ್ಮೀ ಸಾಥ್‌ ನೀಡುತ್ತಿದ್ದಾರೆ.

ಹೋಟೆಲ್‌ನ ವಿಳಾಸ:
ಸಕಲೇಶಪುರ ಪಟ್ಟಣದಿಂದ ಮೂರು ಕಿ.ಮೀ. ದೂರದ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ಬರುವ ಆನೆ ಮಹಲ್‌ನಲ್ಲಿರುವ ಕೆನರಾ ಬ್ಯಾಂಕ್‌ ಎದುರು ಈ ಹೋಟೆಲ್‌ ಇದೆ.

ಹೋಟೆಲ್‌ ಸಮಯ:
ಬೆಳಗ್ಗೆ 7ರಿಂದ ಸಂಜೆ 4 ಗಂಟೆಯವರೆಗೆ ತೆರೆದಿರುತ್ತದೆ. ಕೆಲಸವಿದ್ರೆ ಮಾತ್ರ ಭಾನುವಾರ, ಹಬ್ಬಗಳಲ್ಲಿ ರಜೆ ಮಾಡ್ತಾರೆ, ಇಲ್ಲ ಅಂದ್ರೆ ವರ್ಷಪೂರ್ತಿ ಹೋಟೆಲ್‌ ಇರುತ್ತದೆ.

ತಿಂಡಿಗೆ 30 ರೂ.:
ಬೆಳಗ್ಗೆ 7ರಿಂದ 11ಗಂಟೆವರೆಗೆ ತಿಂಡಿ ಸಿಗುತ್ತದೆ. ಮಲೆನಾಡಿಗರ ಮನೆ ತಿಂಡಿಯಾದ ಅಕ್ಕಿರೊಟ್ಟಿ, ಕಡುಬು, ಚಿತ್ರಾನ್ನ, ಪಲಾವ್‌, ತಟ್ಟೆ ಇಡ್ಲಿ ಸಿಗುತ್ತದೆ. ತಿಂಡಿಗೆ 30 ರುಪಾಯಿ. ಇದರ ಜೊತೆಗೆ ತರಕಾರಿ ಸಾಗು, ಖಾರ ಚಟ್ನಿ, ತೆಂಗಿನಕಾಯಿ ಚಟ್ನಿ, ಹುರಿಗಡ್ಲೆ ಚಟ್ನಿ ಕೊಡಲಾಗುತ್ತದೆ.

Advertisement

ಊಟ 50 ರೂ.: 
ಮಲೆನಾಡಷ್ಟೇ ಅಲ್ಲ, ಬಯಲುಸೀಮೆ ಜನರ ಪ್ರಮುಖ ಆಹಾರವಾದ ಮುದ್ದೆ ಕೂಡ ಇಲ್ಲಿ ದೊರೆಯುತ್ತದೆ. 11ಗಂಟೆಯಿಂದ ಸಂಜೆ 4ರವರೆಗೆ ಎರಡು ಬಗೆಯ ಊಟ ಸಿಗುತ್ತದೆ. ಒಂದು ಮುದ್ದೆ ಊಟ. ಇದಕ್ಕೆ ಪಲ್ಯ, ಹಪ್ಪಳ, ರಸಂ, ಉಪ್ಪಿನ ಕಾಯಿ, ಸಾಂಬಾರು, ಮೊಸರು, ಮಜ್ಜಿಗೆ ನೀಡಲಾಗುತ್ತದೆ. ಮತ್ತೂಂದು ರೊಟ್ಟಿ ಊಟ. ವೈಟ್‌ರೈಸು, ಸಾಂಬಾರ್‌, ಖಾರಾ ಚಟ್ನಿ, ಕಾಯಿ ಚಟ್ನಿ, ಪಲ್ಯ, ಮೊಸರು, ಮಜ್ಜಿಗೆ ಕೊಡಲಾಗುತ್ತದೆ.

 ಚಿತ್ರನಟರು, ರಾಜಕಾರಣಿಗಳು ಭೇಟಿ:
ಸಕಲೇಶಪುರಕ್ಕೆ ಶೂಟಿಂಗ್‌ಗೆ ಬಂದಾಗ ಹಿರಿಯ ನಟ ದೊಡ್ಡಣ್ಣ, ನಾಯಕ ನಟ ಯಶ್‌, ಜೈಜಗದೀಶ್‌, ಶಿವಧ್ವಜ್‌, ಮತ್ತಿತರೆ ನಟರು, ಪ್ರವಾಸಿಗರಿಗೆ ಇಲ್ಲಿನ ಅಕ್ಕಿರೊಟ್ಟಿ, ರಸಂ ಅಚ್ಚುಮೆಚ್ಚು. ಹೋಟೆಲ್‌ಗೆ ಭೇಟಿ ನೀಡುತ್ತಾರೆ.  ಅಡುಗೆಯನ್ನು ನಾವೇ ಮಾಡ್ತೇವೆ. 8 ಜನ ಸಹಾಯಕರಿದ್ದಾರೆ. ಈಗಲೂ ನಾವು ಕಟ್ಟಿಗೆ ಒಲೆಯಲ್ಲೇ ಆಹಾರ ಬೇಯಿಸುತ್ತೇವೆ. ಫ್ರಿಡ್ಜ್ , ಮತ್ತೂಂದು ಮಗದೊಂದು ಬಳಸಲ್ಲ. ಹಳ್ಳಿಯ ಮಾದರಿಯಲ್ಲಿ ಹೋಟೆಲ್‌ ನಡೆಸುತ್ತಿದ್ದೇವೆ ಎನ್ನುತ್ತಾರೆ ಈ ಹೋಟೆಲ್‌ನ ಈಗಿನ ಮಾಲೀಕ ಪ್ರಶಾಂತ್‌.

ಭೋಗೇಶ್‌ ಆರ್‌. ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next