ಕನ್ನಡದಲ್ಲೀಗ ಸದ್ಯಕ್ಕೆ ಸಕ್ಸಸ್‌ಫುಲ್ ನಟಿಯಾಗಿ ಸ್ಟಾರ್ ಚಿತ್ರಗಳಲ್ಲಿ ಬ್ಯುಜಿ ಎನಿಸಿಕೊಂಡಿರುವ ಸಂಜನಾ ಆನಂದ್, ಈಗ ಸಂತಸದಲ್ಲಿದ್ದಾರೆ. ಅದಕ್ಕೆ ಕಾರಣ, ಅವರ ಅಭಿನಯದ ಮೊದಲ ಚಿತ್ರ “ಮಳೆಬಿಲ್ಲು’ ಈಗ ಬಿಡುಗಡೆಗೆ ಸಜ್ಜಾಗಿದೆ. ಹೌದು, ಹೊಸ ಪ್ರತಿಭೆಗಳೇ ಸೇರಿ ಮಾಡಿರುವ “ಮಳೆಬಿಲ್ಲು’ ಪ್ರೇಕ್ಷಕರ ಮುಂದೆ ಏಳು ಬಣ್ಣಗಳ ಅಂದವನ್ನು ಚೆಲ್ಲಲಿದೆ.
ಶೀರ್ಷಿಕೆ ಹೇಳುವಂತೆ, ಏಳು ಬಣ್ಣಗಳ ಸಮಾಗಮವನ್ನು ವ್ಯಕ್ತಿಯ ಬದುಕಿಗೆ ಹೋಲಿಸಿ ಹೆಣೆದಿರುವ ಕಥೆ ಈ ಚಿತ್ರದಲ್ಲಿದೆ. ಇನ್ನು, ಈ ಚಿತ್ರದ ಮೂಲಕ ನಾಗರಾಜ್ ಹಿರಿಯೂರು ನಿರ್ದೇಶಕರಾಗುತ್ತಿದ್ದಾರೆ. ಈಗ ಸ್ಟಾರ್ ಚಿತ್ರಗಳಲ್ಲಿ ನಟಿಸುತ್ತಿರುವ ಸಂಜನಾ ಆನಂದ್ ಅವರಿಗೆ ಇದು ಮೊದಲ ಚಿತ್ರ ಎಂಬುದು ವಿಶೇಷ.
ಅಂದಹಾಗೆ, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಖುಷಿಯಲ್ಲಿ ಚಿತ್ರದುರ್ಗದಲ್ಲಿ ಈ ವಾರ ಅದ್ಧೂರಿಯಾಗಿ ಚಿತ್ರದ ಆಡಿಯೋ ಬಿಡುಗಡೆ ಮಾಡಲು ನಿರ್ದೇಶಕರು ತಯಾರಿ ನಡೆಸುತ್ತಿದ್ದಾರೆ. ಚಿತ್ರದಲ್ಲಿ ಶರತ್, ಸಂಜನಾ, ನಯನಾ ಮುಖ್ಯ ಆಕರ್ಷಣೆಯಾಗಿದ್ದಾರೆ.
ಇನ್ನು, ನಿರ್ದೇಶಕ ನಾಗರಾಜ್ ಹಿರಿಯೂರು ಅವರ ಸಹೋದರ ನಿಂಗಪ್ಪ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದ ನಾಯಕಿ ಸಂಜನಾ ಆನಂದ್, ಈ ಚಿತ್ರಕ್ಕೆ ಆಯ್ಕೆಯಾಗುವ ಮುನ್ನ ಆಡಿಷನ್ ಕೊಟ್ಟಿದ್ದರಂತೆ. ಆಡಿಷನ್‌ನಲ್ಲಿ ನಿರ್ದೇಶಕರಿಗೆ ಇಷ್ಟವಾಗಿದ್ದೇ ತಡ, ಸಂಜನಾ ಅವರು ಆಯ್ಕೆಯಾಗಿದ್ದಾರೆ.
ಆ ವೇಳೆಯಲ್ಲೇ ನಿರ್ದೇಶಕರು, ಸಂಜನಾ ಆನಂದ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ನೀನು ಬೆಳೆಯುತ್ತೀಯ ಎಂದು ಹೇಳಿದ್ದರಂತೆ. ಅದೀಗ ಮೆಲ್ಲನೆ ನಿಜವಾಗುತ್ತಿದೆ ಎಂಬುದು ಚಿತ್ರತಂಡದ ಮಾತು. ಸಂಜನಾ ಆನಂದ್ ಈಗ “ದುನಿಯಾ’ ವಿಜಯ್ ಜೊತೆ “ಸಲಗ’, ಅಜೇಯ್‌ರಾವ್ ಜೊತೆಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಶಿವರಾಜಕುಮಾರ್ ಪುತ್ರಿ ನಿರ್ಮಿಸುತ್ತಿರುವ “ಹನಿಮೂನ್’ ಎಂಬ ವೆಬ್‌ಸೀರೀಸ್‌ನಲ್ಲೂ ಕಾಣಿಸಿಕೊಂಡಿದ್ದಾರೆ.
“ಮಳೆಬಿಲ್ಲು ಚಿತ್ರದಲ್ಲಿ ಸಂಜನಾ ಅವರು ಭಾರ್ಗವಿ ಎಂಬ ಪಾತ್ರ ನಿರ್ವಹಿಸಿದ್ದಾರೆ. ಅದೊಂದು ರೀತಿಯ ಗಂಡುಬೀರಿಯಂತಹ ಪಾತ್ರ. ಸಂಭಾಷಣೆ ಕೂಡ ಸಖತ್ ಖಡಕ್ ಆಗಿಯೇ ಇರಲಿವೆ ಎನ್ನುವ ಚಿತ್ರತಂಡ, ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದೆ. ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ಮಾಡಿದ ಬಳಿಕ ಪ್ರೇಕ್ಷಕರ ಮುಂದೆ ಚಿತ್ರವನ್ನು ತರಲು ನಿರ್ದೇಶಕರು ನಿರ್ಧರಿಸಿದ್ದಾರೆ.