ಮಲೇಬೆನ್ನೂರು: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶದ ಮೇರೆಗೆ, ತಹಶೀಲ್ದಾರ್ ಕಚೇರಿ ಜನರ ಮನೆ ಬಾಗಿಲಿಗೆ ಎಂಬ ನೂತನ ಆಲೋಚನೆಯೊಂದಿಗೆ ನಿಮ್ಮ ಹಕ್ಕು ನಿಮ್ಮ ಮನೆಗೆ ಅಭಿಯಾನಕ್ಕೆ ಉಪ ತಹಶೀಲ್ದಾರ್ ಸೈಯ್ಯದ್ ಕಲೀಂವುಲ್ಲಾ ಚಾಲನೆ ನೀಡಿದರು.
ಅವರು ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಪಿಂಚಣಿ ಪುನರ್ ಪ್ರಾರಂಭಿಸುವ ಮತ್ತು ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಮಂಜೂರು ಮಾಡುವ ಅಭಿಯಾನದಲ್ಲಿ ಮಾತನಾಡಿ, ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ವಿವಿಧ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪಿಂಚಣಿ ನಿಂತು ಹೋಗಿದ್ದರೆ ಅಂತಹ ಫಲಾನುಭವಿಗಳ ಪಿಂಚಣಿಯನ್ನು ಪುನರ್ ಪ್ರಾರಂಭಿಸಲಾಗುವುದು ಎಂದರು.
ಕಂದಾಯ ಇಲಾಖೆಯ ನೌಕರರು ಪ್ರತಿಯೊಂದು ಗ್ರಾಮಗಳ ಮನೆ ಮನೆಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸೂಕ್ತ ದಾಖಲೆಗಳಿದ್ದಲ್ಲಿ, ಅವರಿಂದ ಸ್ಥಳದಲ್ಲೇ ಉಚಿತವಾಗಿ ಅರ್ಜಿ ಹಾಕಿಸಿ, ಎರಡ್ಮೂರು ದಿನಗಳೊಳಗೆ ಪಿಂಚಣಿ ಮಂಜೂರು ಆದೇಶಪತ್ರ ನೀಡುವುದೇ ಈ ಅಭಿಯಾನದ ಉದ್ದೇಶವಾಗಿದೆ ಎಂದರು.
ಈಗಾಗಲೇ ಹರಿಹರ ತಾಲೂಕಿನಲ್ಲಿ 29,721 ಅರ್ಹ ಫಲಾನುಭವಿಗಳು ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆಯಡಿ ವಿವಿಧ ರೀತಿಯ ಪಿಂಚಣಿ ಪಡೆಯುತ್ತಿದ್ದಾರೆ. ಫಲಾನುಭವಿಗಳನ್ನು ಖಜಾನೆ 1 ರಿಂದ 2ಕ್ಕೆ ವರ್ಗಾಯಿಸುವಾಗ ಸುಮಾರು 1500ಕ್ಕಿಂತಲೂ ಹೆಚ್ಚು ಫಲಾನುಭವಿಗಳ ಪಿಂಚಣಿ ಕೆಲವು ತಾಂತ್ರಿಕ ತೊಂದರೆಯಿಂದ ನಿಂತಿದೆ. ಈ ತಾಂತ್ರಿಕ ದೋಷ ನಿವಾರಣೆ ಆದ ತಕ್ಷಣ ಅವರ ಪಿಂಚಣಿ ಪುನರ್ ಪ್ರಾರಂಭವಾಗುತ್ತದೆ. ಪಿಂಚಣಿ ನಿಂತಿರುವ ಫಲಾನುಭವಿಗಳು ತಮ್ಮ ಆದೇಶದ ಪ್ರತಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಿಪಿಐ ಐಡಿ ಎಲ್ಲಾ ಜೆರಾಕ್ಸ್ ಪ್ರತಿಗಳನ್ನು ಹಾಗೂ 2 ಪಾಸ್‌ಪೋರ್ಟ್ ಸೈಜ್ ´ೋಟೋಗಳನ್ನು ಅರ್ಜಿಯೊಂದಿಗೆ ನೀಡಬೇಕು ಎಂದರು.
ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾ ಗಾಂಧಿ ವೃದ್ಧಾಪ್ಯ ಯೋಜನೆ, ನಿರ್ಗತಿಕ ವಿಧವಾ ವೇತನ, ಮನಸ್ವಿನಿ, ಮೈತ್ರಿ, ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ಪರಿಹಾರ, ಅಂಗವಿಕಲರ ವೇತನ ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸರ್ಕಾರದಿಂದ ಜಾರಿಗೊಳಿಸಲಾಗಿದೆ. ಮಲೇಬೆನ್ನೂರು ಪುರಸಭೆ ಸದಸ್ಯರು ಸಹ ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಗೆ ತಕ್ಕಂತೆ ದಾಖಲೆಗಳನ್ನು ಹೊಂದಿಸಿ ಅರ್ಜಿ ಹಾಕಿಸುವಂತೆ ವಿನಂತಿಸಿದರು.
ಹೊಸದಾಗಿ ಅರ್ಜಿ ಹಾಕುವವರು ಮತದಾನ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಬಿ.ಪಿ.ಎಲ್ ಪಡಿತರ ಚೀಟಿ ಎಲ್ಲಾ ಜೆರಾಕ್ಸ್ ಪ್ರತಿಗಳು ಹಾಗೂ 5 ಪಾಸ್‌ಪೋರ್ಟ್ ಸೈಜ್ ಫೋಟೋಗಳನ್ನು ಅರ್ಜಿಯೊಂದಿಗೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಿ ಎಂದರು.
ಗ್ರಾಮಸ್ಥರು, ಪುರಸಭೆ ಸದಸ್ಯರು ಉಪ ತಹಶೀಲ್ದಾರ್‌ರೊಂದಿಗೆ ಸಂವಾದ ನಡೆಸಿ ಅನುಮಾನಗಳನ್ನು ಪರಿಹರಿಸಿಕೊಂಡರು. ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಆರ್‌ಐ ಸಮೀರ್ ಅಹ್ಮದ್, ವಿಎ ಕೊಟ್ರೇಶ್, ಪುರಸಭೆ ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.