ಮಲೇಬೆನ್ನೂರು: ಮೇಲ್ನೋಟಕ್ಕೆ ನಾವೆಲ್ಲ ತುಂಬಾ ಆರೋಗ್ಯವಾಗಿದ್ದೇವೆ ಎಂದು ತಿಳಿದುಕೊಂಡಿರುತ್ತೇವೆ. ಅದು ಸತ್ಯವಾಗಬೇಕಾದರೆ ಪ್ರತಿ ಆರು ತಿಂಗಳಿಗೊಮ್ಮೆ ನಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ಸಂಸದ ಜಿ.ಎಂ. ಸಿದ್ಧೇಶ್ವರ್ ಅಭಿಪ್ರಾಯಪಟ್ಟರು. ಅವರು ಪಟ್ಟಣ ಹೊರವಲಯದ ಶ್ರೀರಂಗನಾಥಸ್ವಾಮಿ ಪ್ರೌಢಶಾಲೆ ಆವರಣದಲ್ಲಿ ಜಿ.ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಷನ್ ಚಾರಿಟಿ ಟ್ರಸ್ಟ್ರ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಲುಷಿತ ನೀರಿನ ಬಳಕೆ, ಕಲುಷಿತ ಗಾಳಿ, ತರಕಾರಿ, ಸೊಪ್ಪು, ಆಹಾರ ಧಾನ್ಯಗಳಿಗೆ ಅತೀ ಹೆಚ್ಚಿನ ಕ್ರಿಮಿನಾಶಕ ಮತ್ತು ಗೊಬ್ಬರಗಳ ಬಳಕೆಯಿಂದ ನಾವು ಸೇವಿಸುತ್ತಿರುವ ಆಹಾರವೂ ವಿಷಪೂರಿತವಾಗಿದೆ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ ನಮ್ಮ ಆರೋಗ್ಯವೂ ಹದಗೆಡುತ್ತಿವೆ. ಯಾರಿಗೆ ಯಾವ ಸಮಯದಲ್ಲಿ ಎಂತಹ ಕಾಯಿಲೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇರುವುದರಿಂದ ಪ್ರತಿಯೊಬ್ಬರೂ ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ಆರೋಗ್ಯವನ್ನು ಕಡ್ಡಾಯವಾಗಿ ಪರೀಕ್ಷಿಸಿಕೊಳ್ಳುವುದು ಅವಶ್ಯಕ ಎಂದರು.
ನಮ್ಮ ಚಾರಿಟಿ ಫೌಂಡೇಷನ್‌ನಿಂದ ಪ್ರತಿವರ್ಷ ಕೂಡ ಬಡವರಿಗೆ ಉಚಿತ ತಪಾಸಣೆ, ಸಾಮೂಹಿಕ ವಿವಾಹ ಸಂದರ್ಭದಲ್ಲಿ ವಧು-ವರರಿಗೆ ಉಚಿತ ವಸ್ತ್ರಗಳ ವಿತರಣೆ, ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್, ಪೆನ್ನು ಮುಂತಾದವುಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಶಿಬಿರದಲ್ಲಿ ಹೆಸರಾಂತ ವೈದ್ಯರು ಭಾಗವಹಿಸುತ್ತಿರುವುದರಿಂದ ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಡಾ|ನಾಗಪ್ಪ ಕೊಟ್ರಪ್ಪ ಕಡ್ಲಿ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ದೈಹಿಕ ಚಟುವಟಿಕೆ ಅವಶ್ಯಕ. ಪ್ರತಿಯೊಬ್ಬರೂ ಯಾವುದಾದರೂ ಒಂದು ವಾಹನ ಹೊಂದಿರುವುದರಿಂದ ಓಡಾಡುವುದನ್ನೇ ಮರೆತಿದ್ದಾರೆ. ಇದರಿಂದ ಅನೇಕ ಕಾಯಿಲೆಗಳು ಬರುತ್ತಿವೆ. ಮೊಬೈಲ್, ಟಿ.ವಿ., ವಾಹನಗಳಿಂದ ಆದಷ್ಟು ಮಟ್ಟಿಗೆ ದೂರವಿರಬೇಕು. ಕಾಯಿಲೆ ಬಂದಾಗ ಗುದ್ದಾಡುವುದಕ್ಕಿಂತ, ಕಾಯಿಲೆ ಬರದಂತೆ ನೋಡಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸಲಹಾ ಸಮಿತಿ ಆಧ್ಯಕ್ಷ ಕೆ.ಬಿ. ಶಂಕರ್ ನಾರಾಯಣ, ಜಿ.ಪಂ. ಸದಸ್ಯ ಬಿ.ಎಂ. ವಾಗೀಶಸ್ವಾಮಿ, ಜಿ.ಪಂ. ಸದಸ್ಯ ವೀರೇಶ್ ಹನಗವಾಡಿ, ಡಾ| ಕಿರಣ್, ಡಾ| ಮಂಜುನಾಥ್ ಆಲೂರು, ಡಾ|ವಿಶ್ವನಾಥ್, ಡಾ| ದೀಪಕ್, ಡಾ| ಅನ್ನಪೂರ್ಣ ಹತ್ತಿ, ಡಾ| ವನಜಾ ನಾರ್ವೇಕರ್, ಡಾ| ಕಾರ್ತಿಕ್, ಎ.ಕೆ. ಲೊಕೇಶ್, ಪಾನಿಪೂರಿ ರಂಗಣ್ಣ, ರಾಜು ಪೂಜಾರ್, ಗೌಡ್ರ ಮಂಜಣ್ಣ, ಕರಿಬಸಣ್ಣ, ಕೋಮಾರನಹಳ್ಳಿ ಐರಣಿ ಮಹೇಶ್, ವಿಭೂತಿ ಬಸಣ್ಣ, ರಂಗನಾಥ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು.
ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯ ಬಿ.ಎಸ್. ಜಗದೀಶ್ ಸ್ವಾಗತಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ರುದ್ರಯ್ಯ, ರಂಗನಾಥ ಶಾಲೆಯ ಮುಖ್ಯೋಪಾಧ್ಯಾಯ ಶಿವಾನಂದಪ್ಪ ವಂದಿಸಿದರು. ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣೇಶ್ ನಿರೂಪಿಸಿದರು.