Advertisement

ಕಾಲುವೆ ಕೊನೆ ಭಾಗಕ್ಕೆ ನೀರು ಹರಿಸಿ

11:22 AM Feb 26, 2020 | Naveen |

ಮಲೇಬೆನ್ನೂರು: ಹರಿಹರ ತಾಲೂಕು ಕೊನೆಭಾಗದ ಜಮೀನುಗಳಿಗೆ ನೀರು ತಲುಪಿಸುವಂತೆ ರೈತರು ಪಟ್ಟಣದ ನೀರಾವರಿ ನಿಗಮದ ಇಂಜಿನಿಯರ್‌ಗಳಲ್ಲಿ ಒತ್ತಾಯಿಸಿದರು.

Advertisement

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಎಚ್‌. ಓಂಕಾರಪ್ಪ ಮಾತನಾಡಿ, ಮೇಲ್ಭಾಗದಲ್ಲಿ ಕಾಲುವೆಗಳಿಗೆ ಅಳವಡಿಸಿರುವ ಅನಧಿಕೃತ ಪಂಪ್‌ಸೆಟ್‌ ಗಳನ್ನು ತೆರವುಗೊಳಿಸಿ ಕೊನೆಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುವಂತೆ ರಾಜ್ಯ ಹೈಕೋರ್ಟ್‌ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರೂ, ಅದೇಶ ಕಾರ್ಯರೂಪಕ್ಕೆ ಬಾರದೆ ರೈತರ ಸ್ಥಿತಿ ಅತಂತ್ರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೈಕೋರ್ಟ್‌ ಆದೇಶ ಬಂದಾಗ ಎರಡು ದಿನ ಅಧಿಕಾರಿಗಳು ಮೇಲ್ಭಾಗದಲ್ಲಿನ ಅನಧಿಕೃತ ಪಂಪಸೆಟ್‌ ತೆಗೆಸುವ ನಾಟಕವಾಡಿ ಸುಮ್ಮನಾಗಿದ್ದಾರೆ. ಈಗ ನಾವು ನೀರುಕೊಡಿ ಎಂದು ಕೇಳಲು ಬಂದಾಗ ನಿದ್ದೆಯಿಂದ ಎದ್ದಂತೆ ಓಡಾಡುತ್ತಿದ್ದಾರೆ. ಅನಧಿಕೃತ ಪಂಪಸೆಟ್‌ ತೆರವುಗೊಳಿಸುವಂತೆ ನಾವು ಹೈಕೋರ್ಟ್‌ಗೆ ಹೋಗಿ ಹಣ ಖರ್ಚು ಮಾಡಿಕೊಂಡು ಬಂದಿದ್ದು ವ್ಯರ್ಥವಾಗುತ್ತಿದೆ. ಅಧಿಕಾರಿಗಳು ಹೈಕೋರ್ಟ್‌ನ ಆದೇಶ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಹೈಕೋರ್ಟ್‌ನ ಆದೇಶದಂತೆ ಮೇಲ್ಭಾಗದಲ್ಲಿ ಚಾನಲ್‌ಗೆ ಅಳವಡಿಸಿರುವ ಅನಧಿಕೃತ ಪಂಪಸೆಟ್‌ ತೆರವು ಮಾಡುವಂತೆ ಜಿಲ್ಲಾ ಧಿಕಾರಿಗಳು ವಿದ್ಯುತ್‌ ಇಲಾಖೆ, ಪೊಲೀಸರು ಮತ್ತು ನೀರಾವರಿ ಇಲಾಖೆ ಈ ಮೂರೂ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಆದೇಶ ನೀಡಿದ್ದರೂ ಕಾರ್ಯಾಚರಣೆ ಮಾತ್ರ ಸೊನ್ನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೆ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಸಂಬಂಧಪಟ್ಟ ಇಲಾಖೆಗಳು ಕಾರ್ಯಪ್ರವೃತ್ತರಾಗುವಂತೆ ಮತ್ತೂಮ್ಮೆ ಆದೇಶಿಸಿ, ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತರನ್ನು ಬದುಕಿಸಿಕೊಡಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ನಮ್ಮ ಹೋರಾಟದ ರೂಪುರೇಷೆಗಳನ್ನು ಪರಿವರ್ತಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಇಇ ರಾಜಶೇಖರ್‌ ಆಬಣ್ಣ ಇವರು ನಾನು ರಜೆಯ ಮೇಲೆ ಹೋಗಿದ್ದೆ ಎಂದು ಹೇಳಿದರೆ ಇನ್ನುಳಿದ ಇಬ್ಬರು ಎಕ್ಸಿಕ್ಯೂಟೀವ್‌ ಇಂಜಿನಿಯರ್‌ಗಳು ನಮಗೆ ಹುಶಾರಿರಲಿಲ್ಲ ಎಂದು ನುಡಿದರು.

ಆಕ್ರೋಶಭರಿತ ರೈತರು ನಾಲೆಯ ಯಾವ ಕಡೆ ನೀರು ಪೋಲಾಗುತ್ತಿದೆ ಎಂದು ನೋಡಿಕೊಂಡು ಬರಲು ತಮ್ಮೊಡನೆ ಇಂಜಿನಿಯರ್‌ಗಳನ್ನು ಕರೆದುಕೊಂಡು ಹೋದರು. ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಜಿ. ಪ್ರಭುಗೌಡ, ಎಂ.ಬಿ. ಪಾಟೀಲ್‌, ಪಾಲಾಕ್ಷಪ್ಪ, ವಸಂತಪ್ಪ, ಆರ್‌.ಟಿ. ಶೇಖರಪ್ಪ, ದೇವರಾಜಪ್ಪ, ರಾಜಪ್ಪ, ಕುಬೇರಗೌಡ, ಗದ್ದಿಗೆಪ್ಪ, ಭೀಮನಗೌಡ್ರು, ಮೇಸ್ಟ್ರೆ ರಾಜಪ್ಪ, ಎ.ಕೆ. ಬಸವರಾಜಪ್ಪ, ಎ.ಕೆ. ಮಂಜಪ್ಪ ಹಾಗೂ ಸಿರಿಗೆರೆ, ವಾಸನ, ಪಾಳ್ಯ, ಕೆ.ಎನ್‌.ಹಳ್ಳಿ ಗ್ರಾಮಗದ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next