Advertisement

ಪುರುಷ ಬರಹಗಾರರ ಪ್ರಸವ ವೇದನೆ! 

03:45 AM Jun 25, 2017 | |

ಇತ್ತೀಚೆಗೆ ಯುವ ಕಥೆಗಾರರೊಬ್ಬರು, ತಮ್ಮ ಸಂಕಲನದ ಬಿಡುಗಡೆಯ ಸಂದರ್ಭದಲ್ಲಿ ನಡೆದ ಕಥನ ಸಂವಾದದಲ್ಲಿ, ತಾವು ಮೊದಲು ಬರೆದ ಸುಮಾರು ನಲ್ವತ್ತು ಕಥೆಗಳನ್ನು ಯಾವುದೇ ಮೋಹ ಪ್ರೀತಿ ಇಟ್ಟುಕೊಳ್ಳದೇ ಹರಿದುಹಾಕಿದ್ದನ್ನು ಹೇಳುತ್ತ ಒಂದು ವಾಕ್ಯ ಹೇಳಿದರು. ತುಂಬ ಸಹಜವಾಗಿ ಮಾತನಾಡುತ್ತ ಅವರು ಹೇಳಿದ ಆ ವಾಕ್ಯ ಕೇಳುತ್ತ ನನಗೆ ಚೂರು ಆಘಾತವಾದಂತಾಯಿತು. ಉಳಿದವರೆಲ್ಲ ಅಷ್ಟು ಸಹಜವಾಗಿ ಆ ವಾಕ್ಯವನ್ನು ಕೇಳಿ ಮತ್ತು ಅಷ್ಟೇ ಸಹಜವಾಗಿ ತಲೆಯಲ್ಲಾಡಿಸುತ್ತ ಅದನ್ನು ಸ್ವೀಕರಿಸಿರುವಾಗ ನನಗೇ ಯಾಕೆ ಹೀಗೆ ಆಮೇಲೂ ಕಾಡಬೇಕು, ಯಾಕೋ ನಾನೇ ಸರಿಯಾಗಿ ಅದನ್ನು ಗ್ರಹಿಸಲಿಲ್ಲವೇನೋ ಅಥವಾ ತಪ್ಪಾಗಿ ಕೇಳಿಕೊಂಡೆನೇನೋ ಎಂದುಕೊಂಡು ಕೆಲ ದಿನಗಳ ನಂತರ ಯೂಟ್ಯೂಬಿನಲ್ಲಿ ಅಪ್‌ ಲೋಡ್‌ ಆಗಿದ್ದ ಆ ಸಂವಾದವನ್ನು ಮತ್ತೆ ಮೂರ್‍ನಾಲ್ಕು ಸಲ ಗಮನವಿಟ್ಟು ಕೇಳಿದೆ. ಹೌದು, ನನಗೆ ಒಳಗೆಲ್ಲೋ ಶಾಕ್‌ ಎನ್ನಿಸಿದ ಆ ವಾಕ್ಯ ನಾನು ಮೊದಲು ಕೇಳಿದ್ದ ಹಾಗೆಯೇ ಇತ್ತು.

Advertisement

ಅವರು ಹೇಳಿದ್ದಿಷ್ಟೆ : “ಹಿಂದೆ ನಲ್ವತ್ತು ಕಥೆಗಳು ಭ್ರೂಣಾವಸ್ಥೆಯಲ್ಲಿ ಅಬಾರ್ಶನ್‌ ಆದಂಗೆ ಅಲ್ಲೆ ಸತ್ತು ಹೋಗಿವೆ’ ಅರೆ ! ಈ ಗಂಡಸರಿಗೆ- ವಸ್ತು ಚೆನ್ನಾಗಿಲ್ಲ, ನಾನು ಏನು ಹೇಳಬೇಕೋ ಅದನ್ನು ಹೇಳಲಾಗುತ್ತಿಲ್ಲ, ನಾನು ಹೇಳಿದ್ದು ಕನ್ವೇ ಆಗಲ್ಲ, ಓದುಗನಿಗೆ ದಾಟಿಸಲು ಸಾಧ್ಯವಿಲ್ಲ- ಎಂದು ಕಥೆಗಳನ್ನು ಹರಿದು ಹಾಕುವುದಕ್ಕೂ, ಯಾವುದೋ ಕಾರಣಕ್ಕೆ ಒಡಲಲ್ಲಿ ಚಿಗುರಿದ ಜೀವವೊಂದು ಅಬಾರ್ಶನ್‌ ಆಗಿ ಸತ್ತುಹೋಗುವ ಮಾನಸಿಕ ಹಾಗೂ ದೈಹಿಕವಾದ ಒಂದು ಆತ್ಯಂತಿಕ ದಾರುಣ ನೋವಿಗೂ ವ್ಯತ್ಯಾಸವೇ ಕಾಣದೇ, ಹ್ಯಾಗೆ (ಯಃಕಚಿತ್‌!) ಕಥೆಗಳನ್ನು ಹರಿದುಹಾಕುವುದು ಒಡಲ ಜೀವವೊಂದು ಸತ್ತುಹೋಗುವ ದಾರುಣತೆಗೆ ಸಮನಾಗಿಬಿಟ್ಟಿತಲ್ಲ ಎಂಬ ತಲ್ಲಣವಾಯಿತು ಮತ್ತು “ಎಲಾ ಗಂಡಸೇ(ಸರೇ)…’ ಎಂಬ ಅಚ್ಚರಿ ಕೂಡ. 

ಹೀಗೆ ಕಥೆ, ಕವನಗಳನ್ನು ಹರಿದು ಹಾಕುವುದು ಅಬಾರ್ಶನ್‌ನ ಹಾಗೆ ಅನ್ನಿಸಿದರೆ ಇನ್ನು ಕಥೆ, ಕಾದಂಬರಿ, ಕವನಗಳು ಸಂಕಲನ ಅಥವಾ ಪುಸ್ತಕವಾಗಿ ಪ್ರಕಟಗೊಳ್ಳುವುದು ನಮ್ಮ ಹೆಚ್ಚಿನ ಬರಹಗಾರರಿಗೆ (ಇದಕ್ಕೆ ಹಿರಿ-ಕಿರಿಯ ಬೇಧವಿಲ್ಲ) ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ಮಗು ಹುಟ್ಟಿದ ಹಾಗೆ. ಎಷ್ಟೆಲ್ಲ (ಪುರುಷ!) ಬರಹಗಾರರು ಬರವಣಿಗೆಯೆಂಬ ಸೃಜನಶೀಲ ಪ್ರಕ್ರಿಯೆಯನ್ನು ಪ್ರಸವ ವೇದನೆಗೆ ಹೋಲಿಸಿಲ್ಲ ಹೇಳಿ… ಬರಹಗಾರ್ತಿಯರೂ ಹೋಲಿಸಿರಬಹುದೇನೋ, ಆದರೆ, ಖಂಡಿತವಾಗಿಯೂ ಬರಹಗಾರರು ತಮ್ಮ ಬರವಣಿಗೆಯನ್ನು ಪ್ರಸವ ವೇದನೆಗೆ ಹೋಲಿಸಿದ ಪ್ರಮಾಣದಷ್ಟು ಖಂಡಿತವಾಗಿಯೂ ಅಲ್ಲ . ಯಾಕೆಂದರೆ, ಹೆಚ್ಚಿನವರಿಗೆ ನಿಜವಾದ ಪ್ರಸವ ವೇದನೆಯ ಅನುಭವವಾಗಿರುವುದರಿಂದ, ಅಂಥ ಹೋಲಿಕೆ ಸರಿಯಲ್ಲ ಎಂದು ಅವರಿಗನ್ನಿಸಿರಬಹುದು. ಆದರೆ, ಹೆಚ್ಚಿನ ಗಂಡಸರಿಗೆ ಇದು ತೀರಾ ಸಹಜವೆಂಬಂತೆಯೇ ತೋರಬಹುದೇನೊ ಅಥವಾ ಈ ಹೋಲಿಕೆಯಲ್ಲಿ ತಪ್ಪೇನಿದೆ ಎಂದು ವಾದಿಸಬಹುದೇನೋ. ಕಥೆಯ ಬೀಜವೊಂದು (?) ಮನಸ್ಸಿನಲ್ಲಿ ಅಂಕುರಿಸಿ, ಅದು ಬೆಳೆದು, ಬರಹಕ್ಕಿಳಿದು, ಪ್ರಕಟವಾಗಿ ಕೈಗೆ ಸಿಗುವುದು ಒಡಲಿನಲ್ಲಿ ಜೀವವೊಂದು ಅಂಕುರಿಸಿ, ಒಂಬತ್ತು ತಿಂಗಳು ಬೆಳೆದು, ಹೆರುವ ಹಾಗೆಯೇ ಅನ್ನುವುದು ಮೇಲ್ನೋಟಕ್ಕೆ ಸರಿಯೆಂಬಂತೆ ತೋರಬಹುದು. 

ಆದರೂ ಜೀವಾಂಕುರದ ಕ್ಷಣಕ್ಕೆ ಕಾರಣವಾಗಿದ್ದು, ನಂತರ ಭ್ರೂಣದ ಬೆಳವಣಿಗೆಯಿಂದ ಹಿಡಿದು ಮಗು ಹುಟ್ಟುವವರೆಗೆ ತಾವೆಂದೂ ಜೀವದೊಳಗಿನಿಂದ ಪಾಲ್ಗೊಳ್ಳಲಾಗದ ಒಂದು ಜೈವಿಕ ಪ್ರಕ್ರಿಯೆಯ ಕುರಿತು ಹ್ಯಾಗೆ ಈ ಪುರುಷರು ಇದು ಸಂಪೂರ್ಣ ತಮಗೆ  ಗೊತ್ತು ಎಂಬಂತೆ ಷರಾ ಬರೆದುಬಿಡುತ್ತಾರಲ್ಲ ! ಹಾಗೆ ತಾಯಿಯಾಗುವವಳು ಜೀವವನ್ನೇ ಪಣಕ್ಕಿಟ್ಟಂತೆ ಇನ್ನೊಂದು ಜೀವವನ್ನು ಭೂಮಿಗೆ ತರುವ ಕ್ಷಣದ ಸಹಜ ಹೆರಿಗೆಯ ಅಪಾರವಾದ ಮಾನಸಿಕ ಒತ್ತಡ, ದೈಹಿಕ ನೋವು, ಒದ್ದಾಟ ಎಲ್ಲವನ್ನು ಹೀಗೆ ಕಥೆ, ಕಾದಂಬರಿ, ಕವನಗಳ ಪುಸ್ತಕವೊಂದು ಕೈಗೆ ಬರುವುದಕ್ಕಿಂತ ಮೊದಲು ಆದ ಪ್ರಯಾಸಕ್ಕೆ, ಒದ್ದಾಟಗಳಿಗೆ ಹೋಲಿಸಿಬಿಡುತ್ತಾರಲ್ಲ! ಪ್ರತೀ ಸಲ ಯಾರಾದರೂ ಹಿರಿ-ಕಿರಿಯ ಕವಿಗಳು, ಕಥೆಗಾರರು, ಕಾದಂಬರಿಕಾರರು, ಅನುವಾದಕರು ಹೀಗೆ ತಮ್ಮ ಪ್ರಸವ ವೇದನೆ ಬಗ್ಗೆ, ಮಗುವನ್ನು ಹೆತ್ತ ಬಗ್ಗೆ ಹೇಳಿದ್ದನ್ನು ಕೇಳಿದಾಗೆಲ್ಲ ನಾನು, “ಆಹಾ ಪುರುಷಾಕಾರಂ’ ಎಂದು ನನ್ನೊಳಗೇ ನಗುತ್ತೇನೆ. ಅಲ್ಲವೇ ಮತ್ತೆ, ಹೆಂಗಸಿಗೆ ಮತ್ತು ಹೆಣ್ಣು ಪ್ರಾಣಿಗಳಿಗೆ ದಕ್ಕುವ ಈ ಅನುಭವವನ್ನು ಎಂದೂ ಅನುಭವಿಸಲು ಸಾಧ್ಯವೇ ಇಲ್ಲದ ಗಂಡಸರು ಹೀಗೆ ಕಥೆಗಳನ್ನು  ಹರಿದುಹಾಕುವುದಕ್ಕೋ, ಪುಸ್ತಕವೊಂದು ಹೊರಬರುವುದಕ್ಕೋ ಹೋಲಿಸುವುದೆಂದರೆ!

ಕೆಲ ವರ್ಷಗಳ ಹಿಂದೆ ಪ್ರಸಿದ್ಧ ಸಾಹಿತಿಯೊಬ್ಬರು ವಿಶ್ವವಿದ್ಯಾಲಯದ ಜಡಗೊಂಡ ವ್ಯವಸ್ಥೆಯನ್ನು ಹೆಂಗಸರ ಮೆನೋಪಾಸ್‌ಗೆ ಹೋಲಿಸಿದ್ದರು. ಹೀಗೆ ಹೆಣ್ಣಿಗೆ ತೀರಾ ಸಹಜವಾದ ಮತ್ತು ಜೀವಿಗಳ ಮುಂದುವರಿಕೆಗೆ ಕೆಲವು ಅನಿವಾರ್ಯವೂ ಆದ ಜೈವಿಕ ಪ್ರಕ್ರಿಯೆಗಳನ್ನು ಕ್ಲೀಷೆಯೆಂಬಷ್ಟರ ಮಟ್ಟಿಗೆ ಬೇರೆ ಯಾವುದಕ್ಕೋ ಹೋಲಿಸುವ ಮನೋಭಾವ ಎಲ್ಲಿಂದ ಹುಟ್ಟುತ್ತದೆ? ನನಗೆ ಅನ್ನಿಸುವಂತೆ ಎರಡು ಕಾರಣಗಳು. ಒಂದು, ವಿಶ್ವದ ಸಕಲ ಚರಾಚರಗಳ ಕುರಿತು ವಿಮರ್ಶಿಸುವ, ಟೀಕಿಸುವ, ಹೇಳಿಕೆಕೊಡುವ, ಒಟ್ಟಾರೆಯಾಗಿ ಒಂದು ಅಂತಿಮ ಷರಾ ಬರೆಯುವ, ಆಧಿಪತ್ಯ ಸಾಧಿಸುವ ಎಲ್ಲ ಹಕ್ಕು ತನಗಿದೆ ಎಂದು ಎಂದಿನಿಂದಲೋ ಪುರುಷರು ಭಾವಿಸಿಕೊಂಡು ಬಂದಿರುವುದು. 

Advertisement

ಹೆಣ್ಣಿನ ಬುದ್ಧಿಯನ್ನು ಮೊಣಕಾಲ ಕೆಳಗೆ ಎಂದು ಹೋಲಿಸುವಲ್ಲಿಂದ ನರಿಯನ್ನು ಶಾಶ್ವತವಾಗಿ ಮೋಸಕ್ಕೆ ಒಂದು ಪ್ರತಿಮೆಯಾಗಿಸುವವರೆಗೆ ಸಕಲ ಚರಾಚರಗಳು ಹೀಗೇಯೇ ಇರುತ್ತವೆ ಎಂದು ಅಭಿಪ್ರಾಯಿಸುವ, ಷರಾ ಬರೆಯುವ ಅಧಿಕಾರ ತಮಗಿದೆ ಎಂದು ಪುರುಷರು ಭಾವಿಸಿದಂತಿದೆ. ಇನ್ನೊಂದು ಕಾರಣ  ಗಂಡು ತಾನು ಮೇಲು ಎಂದು ಎಷ್ಟೇ ಭಾವಿಸಿದರೂ, ಪಾರಮ್ಯ ಸಾಧಿಸಿದರೂ, ಈ ನಿಸರ್ಗ ಮಗುವನ್ನು ಹಡೆಯುವ ಕೆಲಸವೊಂದನ್ನು ಹೆಣ್ಣಿಗೆ ಕೊಟ್ಟುಬಿಟ್ಟಿದೆಯಲ್ಲ… ಈ ಅನುಭವ ತನಗೆ ದಕ್ಕದಂತೆ ಮಾಡಿಬಿಟ್ಟಿದೆಯಲ್ಲ, ಆದರೆ ತನಗೆ ಇನ್ನೊಂದು ಬಗೆಯ ಸೃಷ್ಟಿಕಾರ್ಯ ಗೊತ್ತಿದೆ, ಜೀವವೊಂದನ್ನು ಭೂಮಿಗೆ ತರುವ ಹೆಣ್ಣಿನ ಸೃಷ್ಟಿಕಾರ್ಯಕ್ಕೆ ಸಮನಾದ ಅಥವಾ ಅದಕ್ಕಿಂತಲೂ ಮಹತ್ತರ ಸೃಜನಶೀಲ ಸೃಷ್ಟಿಕಾರ್ಯದಲ್ಲಿ ತಾನು ತೊಡಗಿಕೊಂಡು, ಸಫ‌ಲವಾಗಿದ್ದೇನೆ ಎಂದು ಹೇಳುವುದು.ಹೀಗೆ ಭಾರತದ ಬೇರೆ ಭಾಷೆಯ ಬರಹಗಾರರಿಗೆ ಅಥವಾ ಬೇರೆ ದೇಶಗಳ ಬೇರೆ ಭಾಷೆಗಳ ಬರಹಗಾರರಿಗೆ ಬರವಣಿಗೆಯ ಸೃಜನಪ್ರಕ್ರಿಯೆ ಪ್ರಸವವೇದನೆಯಂತೋ, ಹೆರಿಗೆಯಂತೆಯೋ ಅನ್ನಿಸಿದೆಯೆ? ಯಾರಾದರೂ ಬೇರೆ ಭಾಷೆಗಳ ಸಾಹಿತ್ಯ ಮತ್ತು ಬರಹಗಾರರನ್ನು ಕುರಿತು ಓದುವವರು ಹೇಳಬೇಕಷ್ಟೆ. 

ಗರ್ಭಪಾತ ಆದ ಹೆಂಗಸಿಗೆ ಗೊತ್ತು, ಅದರ ಆಳದ ದುಃಖ, ನಿರಾಸೆ, ಹತಾಶೆ ಮತ್ತು ಇನ್ನೂ ಏನೆಲ್ಲ. ಹಡೆದವಳಿಗೆ ಗೊತ್ತು, ಆ ಜೀವವರಳಿಸುವ ಮತ್ತು ಜೀವವನ್ನು ಭೂಮಿಗೆ ತರುವ ಅನುಭವ. ಸ್ವತಃ ಅನುಭವಕ್ಕೆ ದಕ್ಕದೇ ಇರುವ ಸಂಗತಿಯನ್ನು ನೋಡಿ, ಕೇಳಿ, ಬರೆಯಬಾರದು ಎಂಬ ಅರ್ಥದಲ್ಲಿ ನಾನು ಹೇಳುತ್ತಿಲ್ಲ. ಅದ್ರಲ್ಲೇನು ತಪ್ಪು… ಎರಡೂ ಒಂದೇ ತಾನೆ… ಸುಮ್ನೆ ಸಹಜವಾಗಿ ಅಂದಿದ್ದನ್ನು ನೀವು (ಮಾಡಕ್ಕೆ ಕೆಲಸ ಇಲೆª!) ಇಷ್ಟುದ್ದ ಮಾಡ್ತೀರಪ್ಪ ಎಂದು ವಾದಿಸುವವರು ವಾದಿಸುತ್ತಲೇ ಇರಬಹುದು. ನಿಜವೇ, ಹೋಲಿಸುವವರಿಗೆ ಹೋಲಿಕೆಯನ್ನು ಸಮರ್ಥಿಸಿಕೊಳ್ಳುವ ಹಕ್ಕು ಇದೆ. ಮತ್ತೀಗ ಹೋಲಿಕೆಯಾಗುವ ಜೀವಿಗೂ ಅದನ್ನು ನಿರಾಕರಿಸುವ, ಹೋಲಿಕೆಯನ್ನು ಪ್ರಶ್ನಿಸುವ ಹಕ್ಕು ಇದ್ದೇ ಇದೆ!

– ಸುಮಂಗಲಾ

Advertisement

Udayavani is now on Telegram. Click here to join our channel and stay updated with the latest news.

Next