ಚಾಮರಾಜನಗರ: ಮಲೆ ಮಹದೇಶ್ವರ ಸ್ವಾಮಿಗೆ ದಾನಿಯೊಬ್ಬರು ನೀಡಿದ್ದ 85 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಕಿರೀಟವನ್ನು ಮಹಾಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಧರಿಸಲಾಯಿತು.
ಕಳೆದ ಐದು ವರ್ಷಗಳ ಹಿಂದೆಯೇ ಹೆಸರು ಬಹಿರಂಗಪಡಿಸಲು ಇಚ್ಛಿಸದ ದಾನಿಯೊಬ್ಬರು 1 ಕೆಜಿ 369 ಗ್ರಾಂ ಚಿನ್ನದ ಕಿರೀಟವನ್ನು ಮಲೆ ಮಹದೇಶ್ವರ ಸ್ವಾಮಿಗೆ ಸೇವಾರ್ಥವಾಗಿ ನೀಡಿದ್ದರು. ಅದು ಮಲೆ ಮಹದೇಶ್ವರ ಪ್ರಾಧಿಕಾರದ ಖಜಾನೆಯಲ್ಲಿತ್ತು.
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ನೂತನ ಕಾರ್ಯದರ್ಶಿ ಎ.ಇ. ರಘು ಅವರು ಚಿನ್ನದ ಕಿರೀಟವನ್ನು ಸ್ವಾಮಿಗೆ ಧರಿಸಲು ನಿರ್ಧರಿಸಿ, ಎಲ್ಲ ಭದ್ರತಾ ಕ್ರಮಗಳನ್ನೂ ಕೈಗೊಂಡು ಶುಕ್ರವಾರ ರಾತ್ರಿ ಸ್ವಾಮಿಯ ಲಿಂಗಕ್ಕೆ ಕಿರೀಟವನ್ನು ಧರಿಸಲಾಯಿತು.
ಸ್ವಾಮಿಗೆ ಚಿನ್ನದ ಕಿರೀಟ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಲಕ್ಷಾಂತರ ಭಕ್ತಾದಿಗಳು ಇದೇ ಮೊದಲ ಬಾರಿಗೆ ಚಿನ್ನದ ಕಿರೀಟದಲ್ಲಿ ಕಂಗೊಳಿಸಿದ ಮಹದೇಶ್ವರ ಸ್ವಾಮಿಯ ದರ್ಶನ ಮಾಡಿ ಉಘೇ ಉಘೇ ಮಾದಪ್ಪ ಘೋಷ ಮೊಳಗಿಸಿದರು.