Advertisement

ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆ ಸರಳ : ಹೊರಗಿನವರಿಗೆ ಪ್ರವೇಶ ಇಲ್ಲ

08:10 PM Mar 03, 2021 | Team Udayavani |

ಹನೂರು (ಚಾಮರಾಜನಗರ): ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ಮಹಾಶಿವರಾತ್ರಿ ಜಾತ್ರೆಯನ್ನು ಕೋವಿಡ್‍ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ. ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ಹೊರಗಿನವರಿಗೆ ಜಾತ್ರಾ ಉತ್ಸವಕ್ಕೆ ಪ್ರವೇಶವಿರುವುದಿಲ್ಲ.

Advertisement

ಜಾತ್ರೆ ಆಚರಣೆ ಕುರಿತು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮಹದೇಶ್ವರ ಬೆಟ್ಟದಲ್ಲಿ ಸಭೆ ನಡೆಸಲಾಯಿತು. ಸಭೆಯ ಬಳಿಕ ಸುದ್ದಿಗಾರರರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಯವರು, ಈ ಬಾರಿಯ ಶಿವರಾತ್ರಿ ಜಾತ್ರೆ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಗೆ ಸೀಮಿತವಾಗಿದೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಾರ್ಚ್ 10 ರಿಂದ 14ರವರೆಗೂ ಜರುಗಲಿದೆ. ರಾಜ್ಯ ತಾಂತ್ರಿಕ ಸಲಹಾ ಸಮಿತಿ ಕೋವಿಡ್‍ ಹಿನ್ನೆಲೆಯಲ್ಲಿ ಜಾತ್ರೆ ಆಚರಣೆಗೆ ನಿರ್ಬಂಧ ವಿಧಿಸಿದೆ. ಹಾಗಾಗಿ ಸಲಹಾ ಸಮಿತಿಯ ಮಾರ್ಗದರ್ಶನದಂತೆ ಬೆಟ್ಟಕ್ಕೆ ಸೀಮಿತವಾಗಿ ಸರಳವಾಗಿ ಶಿವರಾತ್ರಿ ಜಾತ್ರೆ ಆಚರಿಸಲಾಗುವುದು ಎಂದರು.

ಸ್ವಾಮಿಗೆ ಪೂಜಾ ಕೈಂಕರ್ಯಗಳು ಯಥಾವತ್ತಾಗಿ ಜರುಗಲಿವೆ. ಆದರೆ ಜಿಲ್ಲೆಯ ಇನ್ನಿತರ ಭಾಗದ ಭಕ್ತಾದಿಗಳು ಮತ್ತು ಹೊರಜಿಲ್ಲೆಯ ಭಕ್ತಾದಿಗಳಿಗೆ ಹಾಗೂ ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತಾದಿಗಳ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದನ್ನು ಹೊರತುಪಡಿಸಿ ಜಾತ್ರಾ ಮಹೋತ್ಸವದ ಅವಧಿಯಲ್ಲಿ ವಿಶೇಷ ಆಹ್ವಾನಿತರು, ಜನಪ್ರತಿನಿಧಿಗಳು ಮತ್ತು ಕರ್ತವ್ಯನಿರತ ಅಧಿಕಾರಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಮ.ಬೆಟ್ಟ ಪಂಚಾಯಿತಿ ವ್ಯಾಪ್ತಿಯಿಂದ ಈ ಅವಧಿಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಯಾವುದಾದರೂ ದಾಖಲೆಯನ್ನು ತರುವುದು ಕಡ್ಡಾಯ ಎಂದು ತಿಳಿಸಿದರು.

Advertisement

ಮಾರ್ಚ್ 9 ರಿಂದ ತಂಗುವಿಕೆ ಇಲ್ಲ: ಕೋವಿಡ್ ನಿಯಮಾವಳಿಯ ಹಿನ್ನೆಲೆ ಶ್ರೀ ಕ್ಷೇತ್ರದಲ್ಲಿ ಮಾರ್ಚ್ 9ರಿಂದಲೇ ಭಕ್ತಾದಿಗಳ ತಂಗುವಿಕೆಯನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಶ್ರೀ ಕ್ಷೇತ್ರದಲ್ಲಿ ಯಾವ ಭಕ್ತಾದಿಗಳಿಗೂ ಕೂಡ ಕೊಠಡಿ ವ್ಯವಸ್ಥೆಗಳನ್ನು ನೀಡುವುದಿಲ್ಲ. ಅಲ್ಲದೆ ಭಕ್ತಾದಿಗಳು ನೆರವೇರಿಸುವಂತಹ ಪರಸೇವೆ, ಸಾಮೂಹಿಕ ಭೋಜನವನ್ನೂ ಕೂಡ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ಕೋವಿಡ್‍ ನಿರ್ಬಂಧ ಮಾರ್ಚ್‍ 31ರವರೆಗೂ ಇರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾತನಾಡಿ, ಈಗಾಗಲೇ ಬೆಟ್ಟದ ವಸತಿ ಗೃಹಗಳಲ್ಲಿರುವವರು ಮಾ. 9ರೊಳಗೆ ಕೊಠಡಿಗಳನ್ನು ತೆರವುಗೊಳಿಸಬೇಕು. 14ರ ನಂತರ ಭಕ್ತಾದಿಗಳು ಬರಬಹುದು ಎಂದರು.

ಸರಳ ಮಹಾರಥೋತ್ಸವ: ಶ್ರೀ ಕ್ಷೇತ್ರದಲ್ಲಿ ಜರುಗುವ ಶಿವರಾತ್ರಿ ಮಹೋತ್ಸವದ ಮಹಾರಥೋತ್ಸವವು ಸರಳವಾಗಿ ಮತ್ತು ಸಾಂಪ್ರದಾಯಕವಾಗಿ ನೆರವೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಕೋವಿಡ್‍ ಹಿನ್ನೆಲೆಯಲ್ಲಿ 2020ನೇ ಸಾಲಿನ ಯುಗಾದಿ ಜಾತ್ರಾ ಮಹೋತ್ಸವ ಮತ್ತು ದೀಪಾವಳಿ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ರದ್ದಾಗಿತ್ತು.

ಕೋವಿಡ್‍ ಪ್ರಕರಣಗಳು ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಶಿವರಾತ್ರಿ ಜಾತ್ರೆಯನ್ನು ಎಂದಿನಂತೆ ನಡೆಸಲು ಈ ಮುಂಚೆ ನಿರ್ಧರಿಸಲಾಗಿತ್ತು. ಆದರೆ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಇದಲ್ಲದೇ ಜಿಲ್ಲೆಯಲ್ಲೂ ಕೋವಿಡ್‍ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಾರ್ಯದರ್ಶಿ ಜಯವಿಭವಸ್ವಾಮಿ, ತಹಸೀಲ್ದಾರ್ ನಾಗರಾಜು, ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮ.ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳನ್ನು ಹೊರತುಪಡಿಸಿ ಜಿಲ್ಲೆಯ ಇತರೆ ಭಾಗಗಳ ಭಕ್ತಾದಿಗಳು, ಹೊರ ಜಿಲ್ಲೆಯ ಭಕ್ತಾದಿಗಳು, ಪಾದಯಾತ್ರೆ ಭಕ್ತಾದಿಗಳು ಸೇರಿದಂತೆ ಎಲ್ಲರಿಗೂ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು ಜಿಲ್ಲಾಡಳಿತದೊಂದಿಗೆ ಪ್ರತಿಯೊಬ್ಬರೂ ಸಹಕರಿಸಬೇಕು.

– ಡಾ||ಎಂ.ಆರ್. ರವಿ, ಜಿಲ್ಲಾಧಿಕಾರಿ

*****

ಜಾತ್ರಾ ಮಹೋತ್ಸವದ ಅವಧಿಯಲ್ಲಿ ದರ್ಶನಕ್ಕೆ ಬರುವ ಪ್ರತಿಯೊಬ್ಬ ಸ್ಥಳೀಯ ಭಕ್ತಾದಿಗಳು ಕಡ್ಡಾಯವಾಗಿ ಗುರುತಿನ ಚೀಟಿಯೊಂದಿಗೆ ಆಗಮಿಸಬೇಕು. ಮಾರ್ಚ್ 15ರಿಂದ ದರ್ಶನ ಯಥಾಸ್ಥಿತಿಯಲ್ಲಿ ಮುಂದುವರೆಯಲಿದ್ದು ಭಕ್ತಾದಿಗಳು ಸಹಕರಿಸಬೇಕು.

– ಜಯವಿಭವಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next