ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಕಳೆದ 36 ದಿನಗಳಲ್ಲಿ 2.38 ಕೋಟಿ ನಗದು, 63 ಗ್ರಾಂ ಚಿನ್ನ ಮತ್ತು 3 ಕೆ.ಜಿ ಗೂ ಅಧಿಕ ಬೆಳ್ಳಿ ಸಂಗ್ರಹವಾಗಿದೆ.
ಹುಂಡಿ ಎಣಿಕೆ ಪ್ರಕ್ರಿಯೆಯು ಸಾಲುರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರದ ಖಾಸಗಿ ಬಸ್ ನಿಲ್ದಾಣದ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾದ ಹುಂಡಿ ಎಣಿಕೆ ಕಾರ್ಯವು ರಾತ್ರಿ 8 ಗಂಟೆಯವರೆಗೂ ಸಿಸಿಟಿವಿ ಕಣ್ಗಾವಲಿನಲ್ಲಿ ಜರುಗಿತು.
ಈ ಬಾರಿಯ ಹುಂಡಿ ಎಣಿಕೆಯಲ್ಲಿ 2,38, 43, 177 (ಎರಡು ಕೋಟಿ ಮೂವತ್ತೆಂಟು ಲಕ್ಷದ ನಲವತ್ತ ಮೂರು ಸಾವಿರದ ನೂರ ಎಪ್ಪತ್ತೇಳು) ರೂ. ನಗದು, 63ಗ್ರಾಂ ಚಿನ್ನದ ಪದಾರ್ಥಗಳು ಮತ್ತು 3.173 (ಮೂರು ಕೆ.ಜಿ ನೂರ ಎಪ್ಪತ್ತ ಮೂರು ಗ್ರಾಂ) ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿದೆ.
ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಪ್ರಾಧಿಕಾರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಬ್ಯಾಂಕಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಮಲೆ ಮಹದೇಶ್ವರ ಬೆಟ್ಟ ಪೊಲೀಸರಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಬಾರಿ ಮಲೆ ಮಹದೇಶ್ವರ ಬೆಟ್ಟಕ್ಕೆ ಅಮಾವಾಸ್ಯೆ, ಹುಣ್ಣಿಮೆ, ಸ್ವಾತಂತ್ರ್ಯೋತ್ಸವ ರಜೆ, ಶ್ರಾವಣ ಮಾಸದ ವಿಶೇಷ ಪೂಜೆ ಹಿನ್ನೆಲೆ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಹಾಗೂ ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿರುವ ಹಿನ್ನೆಲೆ ಹೆಚ್ಚಿನ ಮಹಿಳಾ ಭಕ್ತಾದಿಗಳು ಶ್ರೀ ಕ್ಷೇತ್ರದತ್ತ ಆಗಮಿಸಿದ್ದರು.