ಮಂಡ್ಯ: ಸೂಕ್ತ ಮುಂಜಾಗ್ರತಾ ವ್ಯವಸ್ಥೆ ಇಲ್ಲದೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವ ಹಿನ್ನಲೆ ಯಲ್ಲಿ ರೈತರು ಆಗ ತಾನೆ ಜನಿಸಿದ ಸೀಮೆ ಹಸುಗಳ ಗಂಡು ಕರುಗಳನ್ನು ರಾತ್ರಿ ವೇಳೆಯಲ್ಲಿ ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಮೂಕ ಪ್ರಾಣಿಗಳ ರೋದನೆ ಯಾರೂ ಕೇಳದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಂಡವಪುರದ ದೊಡ್ಡಬ್ಯಾಡರ ಹಳ್ಳಿ ಬಳಿ ಇರುವ ಚೈತ್ರ ಗೋ ಶಾಲೆಗೆ ಬಳಿ ರಾತ್ರಿ ವೇಳೆಯಲ್ಲಿ ಗಂಡು ಕರುಗಳನ್ನು ಬಿಟ್ಟು ಹೋಗಿದ್ದರು. ಈಗ ಕಳೆದ ಐದಾರು ದಿನಗಳಿಂದ ಕೆ.ಆರ್.ಪೇಟೆ ತಾಲೂಕಿನ ಗವಿರಂಗನಾಥಸ್ವಾಮಿ ದೇವಾಲಯದ ಬಳಿಯ ಅರಣ್ಯ ಪ್ರದೇಶದ ಬಳಿ ಹಾಗೂ ಬೆಟ್ಟದ ತಪ್ಪಲಿನಲ್ಲಿ ಗಂಡು ಕರುಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಹಾಲು, ಆಹಾರವಿಲ್ಲದೆ ಕರುಗಳ ನರಳಾಟ ಹೆಚ್ಚಾಗಿದೆ.10 ಕರುಗಳ ಸಾವು: ಕಳೆದ ಒಂದು ತಿಂಗಳಿನಿಂದ ರೈತರು ಗಂಡು ಕರುಗಳನ್ನು ಬಿಟ್ಟು ಹೋಗುತ್ತಿರುವುದರಿಂದ ಹಾಲು, ಮೇವು ಇಲ್ಲದೆ ನರಳಾಡಿ ಇದುವರೆಗೂ 10 ಕರುಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.
ರಾತ್ರಿ ವೇಳೆ ಬಿಟ್ಟು ಹೋಗುತ್ತಿರುವ ರೈತರು: ಜಿಲ್ಲೆಯಲ್ಲಿ ಹೈನೋದ್ಯಮ ರೈತರಿಗೆ ಆರ್ಥಿಕವಾಗಿ ಸಹಕಾರಿಯಾಗಿದೆ. ಹೆಣ್ಣು ಕರು ಜನಿಸಿದರೆ ಆರೈಕೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಹಾಲು ಕೊಡಲಿದೆ ಎಂದು ಸಾಕು ತ್ತಾರೆ. ಆದರೆ, ಗಂಡು ಕರು ಜನಿಸಿದರೆ ಸಾಕಿ ಆರ್ಥಿಕ ನಷ್ಟ ಮಾಡಿಕೊಳ್ಳಲು ರೈತರು ಇಚ್ಛಿಸುವುದಿಲ್ಲ. ಇದರಿಂದಹುಟ್ಟಿದ ತಕ್ಷಣ ಮಾರಾಟ ಮಾಡಿ ಬಿಡುತ್ತಾರೆ. ಆದರೆ, ಗೋಹತ್ಯೆ ನಿಷೇಧದಿಂದ ಮಾರಾಟ ಮಾಡಲು ಆಗದೆ, ಇತ್ತ ಸಾಕಲು ಆಗದೆ ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದಾರೆ.
ಕರುಗಳ ಮೂಕ ರೋದನೆ: ದೇವಾಲಯ ಬಳಿ ಅರಣ್ಯ ಹಾಗೂ ಬೆಟ್ಟದ ತಪ್ಪಲಿನಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಹಾಲು, ಮೇವು ಪೋಷಣೆ ಸಿಗದೆ ಕರುಗಳು ನರಳಾಡುತ್ತಿವೆ. ಗವಿರಂಗನಾಥಸ್ವಾಮಿ ದೇವಾಲಯ ಬಳಿ ಹಸಿದ ಕರುಗಳ ಮೂಕ ರೋಧನೆ ಹೆಚ್ಚಾಗಿದೆ. ನರಳಾಡುತ್ತ ಅಸ್ವಸ್ಥಗೊಂಡಿವೆ. ಪುಟ್ಟ ಕರುಗಳ ಸ್ಥಿತಿ ನೋಡಿದರೆ ಕರಳು ಹಿಂಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಗವಿರಂಗನಾಥಸ್ವಾಮಿಗೆ ಭಕ್ತರು ಕರುಗಳನ್ನು ಬಿಡುವ ಸಂಪ್ರದಾಯವಿದೆ. ಆದರೆ ಗೋಹತ್ಯೆ ನಿಷೇಧ ಕಾಯ್ದೆ ಬಳಿಕ ಇದು ಹೆಚ್ಚಾಗಿದೆ.
ಗೋ ಶಾಲೆ ತೆರೆಯಲು ಆಗ್ರಹ: ರಾತ್ರೋ ರಾತ್ರಿ ರೈತರು ಗಂಡು ಕರುಗಳನ್ನು ಬಿಟ್ಟು ಹೋಗುತ್ತಿರುವುದರಿಂದ ಕರುಗಳು ಪೋಷಣೆ ಸಿಗದೆ ನರಳಾಡುತ್ತಿವೆ. ಆದ್ದರಿಂದ ಸರ್ಕಾರ ಕೂಡಲೇ ಇಲ್ಲಿ ಗೋ ಶಾಲೆ ತೆರೆದು ಕರುಗಳ ಪೋಷಣೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಗವಿಸ್ವಾಮಿ ಆಗ್ರಹಿಸಿದ್ದಾರೆ.
-ಎಚ್.ಶಿವರಾಜು