ಹೊಸದಿಲ್ಲಿ: ರಾಜತಾಂತ್ರಿಕ ಜಗಳದ ನಡುವೆ ತನ್ನಲ್ಲಿರುವ ಭಾರತದ ಸೇನಾ ಉಪಸ್ಥಿತಿಯನ್ನು ಹಿಂತೆಗೆದುಕೊಳ್ಳುವಂತೆ ಮಾಲ್ದೀವ್ಸ್ ಕೇಳಿದೆ.
ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು, ಭಾರತ ಸರಕಾರವು ಮಾರ್ಚ್ 15 ರ ಮೊದಲು ದ್ವೀಪಸಮೂಹ ರಾಷ್ಟ್ರದಿಂದ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹಿಂತೆಗೆದುಕೊಳ್ಳುವಂತೆ ಪ್ರಸ್ತಾಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮಾಲ್ದೀವ್ಸ್ ಸಚಿವರು ಇತ್ತೀಚೆಗೆ ಅವಹೇಳನಕಾರಿ ಹೇಳಿಕೆಗಳ ಕುರಿತು ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವ ನಡುವೆ ಈ ವಿದ್ಯಮಾನ ನಡೆದಿದೆ.
ಹಿಂದಿನ ಮಾಲ್ದೀವ್ಸ್ ಸರಕಾರದ ಕೋರಿಕೆಯ ಮೇರೆಗೆ ಭಾರತವು ಹಲವಾರು ವರ್ಷಗಳಿಂದ ಸಣ್ಣ ಮಿಲಿಟರಿ ಉಪಸ್ಥಿತಿಯನ್ನು ಕಾಯ್ದುಕೊಂಡು ಬಂದಿದೆ. ಇತ್ತೀಚಿನ ಸರಕಾರಿ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಮಾಲ್ದೀವ್ಸ್ ನಲ್ಲಿ ಭಾರತದ 88 ಸೇನಾ ಸಿಬಂದಿ ಇದ್ದು, ಪ್ರಾಥಮಿಕವಾಗಿ ಸಾಗರ ಭದ್ರತೆ ಮತ್ತು ವಿಪತ್ತು ಪರಿಹಾರದಲ್ಲಿ ಸಹಾಯ ಮಾಡುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಮಾಲ್ದೀವ್ಸ್ ನ ಹಿರಿಯ ಅಧಿಕಾರಿ ಅಬ್ದುಲ್ಲಾ ನಜೀಮ್ ಇಬ್ರಾಹಿಂ ಅವರು ಬೆಳವಣಿಗೆಯನ್ನು ದೃಢಪಡಿಸಿದ್ದು, ಭಾರತೀಯ ಮಿಲಿಟರಿ ಸಿಬಂದಿ ಮಾಲ್ದೀವ್ಸ್ ನಲ್ಲಿ ಉಳಿಯಲು ಸಾಧ್ಯವಿಲ್ಲ. ಇದು ಅಧ್ಯಕ್ಷ ಡಾ ಮೊಹಮ್ಮದ್ ಮುಯಿಜು ಮತ್ತು ಈ ಆಡಳಿತದ ನೀತಿಯಾಗಿದೆ” ಎಂದು ಹೇಳಿದ್ದಾರೆ.