Advertisement

ಮಲೇಷ್ಯಾ ಮರಳು ಅಗ್ಗ ?

06:00 AM Sep 03, 2018 | |

ಬೆಂಗಳೂರು: ಮರಳು ಕೊರತೆ ನಿವಾರಿಸಲು ಮಲೇಷ್ಯಾದಿಂದ ಆಮದು ಮಾಡಿಕೊಂಡ ಮರಳು ಖರೀದಿಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಟನ್‌ಗೆ 500 ರೂ. ದರ ಇಳಿಕೆ ಮಾಡಿ ಮಾರಾಟ ಉತ್ತೇಜಿಸುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ. ಮಲೇಷ್ಯಾ ಮರಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಮಾರುತ್ತಿರುವುದರಿಂದ 400 ರೂ. ಹೆಚ್ಚುವರಿ ವೆಚ್ಚವಾಗುತ್ತಿದೆ. ಚೀಲಕ್ಕೆ ಬದಲಾಗಿ ನೇರ ಮಾರಾಟಕ್ಕಾಗಿ ಮಾರ್ಗಸೂಚಿಗಳಿಗೆ ತಿದ್ದುಪಡಿ ತರುವ ಪ್ರಸ್ತಾವವನ್ನು ಸದ್ಯದಲ್ಲೇ ಸಂಪುಟ ಸಭೆಯಲ್ಲಿ ಮಂಡಿಸಲು ಸಿದ್ಧತೆ ನಡೆದಿದೆ. ರಾಜ್ಯಾದ್ಯಂತ ವಾರ್ಷಿಕ 3.3 ಕೋಟಿ ಟನ್‌ನಿಂದ 3.5 ಕೋಟಿ ಟನ್‌ ಮರಳಿಗೆ ಬೇಡಿಕೆ ಇದೆ ಎಂಬುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಂದಾಜಿಸಿದೆ.

Advertisement

ಮಲೇಷ್ಯಾ ಮಣ್ಣಿನಲ್ಲಿ ಯಾವುದೇ ಸೂಕ್ಷ್ಮ ಜೀವಿಗಳು, ಹಾನಿಕಾರಕ ಅಂಶಗಳಿ ರದಂತೆ ಪರೀಕ್ಷಿಸಿ ದೃಢೀಕರಿಸಿ ಪೂರೈಸುವ ಸಲುವಾಗಿ ಮಾರ್ಗಸೂಚಿಗಳನ್ನು ರೂಪಿಸಿದ್ದ ಸರಕಾರ ಆಮದು ಮರಳನ್ನು ಬ್ಯಾಗ್‌ನಲ್ಲೇ ಮಾರಬೇಕೆಂದು ನಿಯಮಾವಳಿ ರೂಪಿಸಿತ್ತು. ಅದರಂತೆ ಸರಕಾರಿ ಸ್ವಾಮ್ಯದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಶನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಮಲೇಷ್ಯಾ ಮರಳು ಆಮದು ಮಾಡಿಕೊಂಡು 50 ಕೆ.ಜಿ. ಬ್ಯಾಗ್‌ಗಳಲ್ಲಿ ಮಾರಾಟ ಮಾಡುತ್ತಿದೆ.

3,000 ರೂ.ಗೆ ಇಳಿಕೆ ನಿರೀಕ್ಷೆ
ಮಲೇಷ್ಯಾ ಮರಳನ್ನು ಪ್ಯಾಕಿಂಗ್‌ ಮಾಡಿ ಮಾರುವುದು ಕಡ್ಡಾಯವಾ ಗಿರುವುದರಿಂದ ಮರಳು ಆಮದಿಗೆ ಪರವಾನಿಗೆ ಪಡೆದಿರುವ ಖಾಸಗಿ ಸಂಸ್ಥೆಗಳು ವಹಿವಾಟು ಆರಂಭಿಸಿಲ್ಲ. ಪ್ಯಾಕಿಂಗ್‌ ಬದಲಿಗೆ ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ಖಾಸಗಿಯವರು ಮರಳು ಆಮದು ಮಾಡಿಕೊಂಡು ಮಾರಾಟಕ್ಕೆ ಮುಂದಾದರೆ ಪೈಪೋಟಿ ಸೃಷ್ಟಿಯಾಗಿ ಬೆಲೆ ಇನ್ನಷ್ಟು ಇಳಿಕೆಯಾಗಲಿದೆ. ಆ ಮೂಲಕ ಒಂದು ಟನ್‌ ಮಲೇಷ್ಯಾ ಮರಳಿನ ಬೆಲೆ 3,000 ರೂ.ಗೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ನೇರ ಮಾರಾಟ ವ್ಯವಸ್ಥೆಯಿಂದ ಎಲ್ಲೆಡೆ ಮಲೇಷ್ಯಾ ಮರಳು ಸಿಗುವಂತಾದರೆ ಬೇಡಿಕೆ ತಗ್ಗಿ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ. ಪ್ಯಾಕಿಂಗ್‌ ವ್ಯವಸ್ಥೆ ಕೈಬಿಟ್ಟರೆ ಟನ್‌ಗೆ ಸುಮಾರು 400 ರೂ.ನಿಂದ 500 ರೂ. ಇಳಿಕೆಯಾಗಲಿದೆ. ಸರಕಾರದ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ರಾಜೇಂದ್ರ ಕುಮಾರ್‌ ಕಟಾರಿಯಾ,  ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ

ನೇರ ಮಾರಾಟಕ್ಕೆ ಚಿಂತನೆ
ಪ್ಲಾಸ್ಟಿಕ್‌ ಚೀಲದಲ್ಲಿ ಮಲೇಷ್ಯಾ ಮರಳು ಖರೀದಿಗೆ ಜನರಿಂದ ಸ್ಪಂದನೆ ಸಿಗುತ್ತಿಲ್ಲ. ಹಾಗಾಗಿ ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ. ಪ್ಲಾಸ್ಟಿಕ್‌ ಚೀಲದ ವಿಲೇವಾರಿ, ಪರಿಸರ ಸಂಬಂಧಿ ವಿಷಯ ಸಹಿತ ನೇರವಾಗಿ ಮರಳು ಮಾರಾಟದ ಬಗ್ಗೆ ಹಿಂದಿನ ಸರಕಾರದ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ್‌ ಹೇಳಿದ್ದಾರೆ. ಒಂದು ಟನ್‌ ಮರಳನ್ನು 3,000 ರೂ.ನಿಂದ 3,500 ರೂ.ಗೆ ಮಾರಾಟದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿವೆ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ ಶೀಘ್ರವೇ ಗುಣಮಟ್ಟದ ಮರಳನ್ನು ಕಡಿಮೆ ಬೆಲೆಯಲ್ಲಿ ಸಿಗುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next