ಕೌಲಾಲಂಪುರ: ನೂತನ ವರ್ಷದ ಮೊದಲ ಬ್ಯಾಡ್ಮಿಂಟನ್ ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದು ಶುಭಾರಂಭದ ನಿರೀಕ್ಷೆಯಲ್ಲಿದ್ದ ಚಿರಾಗ್ ಸೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿಗೆ ಆಘಾತ ಎದುರಾಗಿದೆ. ರವಿವಾರ ನಡೆದ “ಮಲೇಷ್ಯಾ ಓಪನ್ ಸೂಪರ್ 1000′ ಕೂಟದ ಫೈನಲ್‌ನಲ್ಲಿ ಚೀನದ ಲಿಯಾಂಗ್ ವೀ ಕೆಂಗ್-ವಾಂಗ್ ಚಾಂಗ್ ಜೋಡಿ ಮೊದಲ ಗೇಮ್ ಕಳೆದುಕೊಂಡೂ ಪ್ರಶಸ್ತಿಯನ್ನೆತ್ತಿತು.
ಚಿರಾಗ್-ಸಾತ್ವಿಕ್ 21-9 ಅಂತರದಿಂದ ಮೊದಲ ಗೇಮ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಇದೇ ಮೇಲುಗೈಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚೀನದ ಜೋಡಿ 21-18, 21-17ರಿಂದ ಉಳಿದೆರಡು ಗೇಮ್‌ಗಳನ್ನು ತನ್ನದಾಗಿಸಿಕೊಂಡಿತು.
ನಿರ್ಣಾಯಕ ಗೇಮ್ ವೇಳೆ ಚಿರಾಗ್-ಸಾತ್ವಿಕ್ 11-7ರ ಮುನ್ನಡೆಯಲ್ಲಿದ್ದರು. ಆದರೆ ಇದನ್ನು ಉಳಿಸಿಕೊಂಡು ಹೋಗಲು ವಿಫಲರಾದರು.
4ನೇ ಸೋಲಿನ ಆಘಾತ
ಇದು ಲಿಯಾಂಗ್-ವಾಂಗ್ ವಿರುದ್ಧ ಭಾರತದ ಜೋಡಿಗೆ ಎದುರಾದ 4ನೇ ಸೋಲು. ಕಳೆದ 4 ಪಂದ್ಯಗಳಲ್ಲಿ ಎದುರಾದ 3ನೇ ಆಘಾತ. ಈ ಮೂರೂ ಸೋಲು ಕಳೆದ ವರ್ಷ ಎದುರಾಗಿತ್ತು. ಏಕೈಕ ಗೆಲುವು ಕಳೆದ ವರ್ಷದ “ಕೊರಿಯಾ ಓಪನ್ ಸೂಪರ್ 500′ ಪಂದ್ಯಾವಳಿಯಲ್ಲಿ ಒಲಿದಿತ್ತು.
ಚಿರಾಗ್-ಸಾತ್ವಿಕ್ 2ನೇ ಸೂಪರ್ 1000 ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರು. ಕಳೆದ ಜೂನ್‌ನಲ್ಲಿ ಇವರು “ಇಂಡೋನೇಷ್ಯಾ ಓಪನ್ ಸೂಪರ್ 1000′ ಕೂಟದಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರು. ಇವರಿನ್ನು ಮಂಗಳವಾರ ಹೊಸದಿಲ್ಲಿಯಲ್ಲಿ ಆರಂಭವಾಗಲಿರುವ “ಇಂಡಿಯಾ ಓಪನ್ ಸೂಪರ್ 750′ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಡಲಿದ್ದಾರೆ.