ಕೌಲಾಲಂಪುರ: ಸುದಿರ್ಮನ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಫ್ಲಾಪ್ ಶೋ ನೀಡಿದ ಭಾರತಕ್ಕಿನ್ನು ಮಲೇಷ್ಯಾ ಓಪನ್ ಬಾಡ್ಮಿಂಟನ್ ಟೂರ್ನಿಯಲ್ಲಿ ಅಗ್ನಿಪರೀಕ್ಷೆ ಎದುರಾಗಲಿದೆ. “ಸೂಪರ್ 500′ ಸರಣಿಯ ಈ ಪಂದ್ಯಾವಳಿ ಮಂಗಳವಾರ ಕೌಲಾಲಂಪುರದಲ್ಲಿ ಆರಂಭವಾ ಗಲಿದೆ. ಒಲಿಂಪಿಕ್ಸ್ ಅರ್ಹತೆಯನ್ನು ಗಮನದಲ್ಲಿರಿಸಿ ನಮ್ಮವರು ಉತ್ತಮ ಪ್ರದರ್ಶನ ನೀಡಬೇಕಿದೆ.
ಪಿ.ವಿ. ಸಿಂಧು, ಎಚ್.ಎಸ್. ಪ್ರಣಯ್ ಮೇಲೆ ಭಾರತ ನಿರೀಕ್ಷೆ ಇರಿಸಿದೆ. ಇತ್ತೀಚೆಗೆ ಭಾರತದ ಆಟಗಾರರ್ಯಾರೂ ಮಲೇಷ್ಯಾ, ಚೈನೀಸ್ ತೈಪೆ ಆಟಗಾರರ ವಿರುದ್ಧ ಜಯ ಸಾಧಿಸಿದ ನಿದರ್ಶನಗಳಿಲ್ಲ. ಆದರೆ ಮಲೇಷ್ಯಾದಲ್ಲಿ ಇಂಥದೇ ಫಲಿತಾಂಶ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.
ಕಳೆದ ವಾರ ತೈ ಜು ಯಿಂಗ್, ಗೋಹ್ ಜಿನ್ ವೀ ವಿರುದ್ಧ ಸೋತಿದ್ದ 6ನೇ ಶ್ರೇಯಾಂಕದ ಪಿ.ವಿ. ಸಿಂಧು ಡೆನ್ಮಾರ್ಕ್‌ನ ಲಿನ್ ಕ್ರಿಸ್ಟೋಫರ್‌ಸನ್ ಅವರನ್ನು ಮಪದಲ ಸುತ್ತಿನಲ್ಲಿ ಎದುರಿಸಲಿದ್ದಾರೆ.
ಎಚ್.ಎಸ್. ಪ್ರಣಯ್ ಮತ್ತೆ ಚೈನೀಸ್ ತೈಪೆಯ ಚೌ ತೀನ್ ಚೆನ್ ವಿರುದ್ಧ ಆಡಲಿದ್ದಾರೆ. ಕಳೆದ ಸುಝೋವ್ ಟೂರ್ನಿಯಲ್ಲಿ ಇವರಿಗೆ ಪ್ರಣಯ್ ಶರಣಾಗಿದ್ದರು. ಈಗ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶ ಎದುರಾಗಿದೆ. ಕೆ. ಶ್ರೀಕಾಂತ್ ಜಪಾನ್‌ನ ಕಾಂಟ ಸುನೆಯಾಮ ವಿರುದ್ಧ ಆಟ ಆರಂಭಿಸಲಿದ್ದಾರೆ. ಸುದಿರ್ಮನ್ ಕಪ್ ವೇಳೆ ಮೀಸಲು ಆಟಗಾರನಾಗಿದ್ದ ಲಕ್ಷ್ಯ ಸೇನ್ ಸಿಂಗಾಪುರದ ಮಾಜಿ ಚಾಂಪಿ ಯನ್ ಲೋಹ್ ಕೀನ್ ವ್ಯೂ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಬ್ರಿಟನ್‌ನ ಬೆನ್ ಲೇನ್-ಸೀನ್ ವೆಂಡಿ ಜೋಡಿಯನ್ನು ಮೊದಲ ಸುತ್ತಿನಲ್ಲಿ ಎದುರಿಸುವರು.
ಮಾಳವಿಕಾ ಬನ್ಸೋಡ್, ಆಕರ್ಷಿ ಕಶ್ಯಪ್, ಬಿ. ಸಾಯಿಪ್ರಣೀತ್, ಮಿಥುನ್ ಮಂಜುನಾಥ್ ಮತ್ತು ಪ್ರಿಯಾಂಶು ರಾಜಾವತ್ ಅವರೆಲ್ಲ ಅರ್ಹತಾ ಸುತ್ತಿನಲ್ಲಿ ಅದೃಷ್ಟಪರೀಕ್ಷೆಗೆ ಒಳಗಾಗಲಿದ್ದಾರೆ.