ಚೆನ್ನೈ: ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ʻಜೈಲರ್ʼ ಸಿನೆಮಾ ಆಗಸ್ಟ್ 10 ರಂದು ರಿಲೀಸ್ ಆಗಿದೆ. ಕನ್ನಡ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಮತ್ತು ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರನ್ನೊಳಗೊಂಡ ಈ ಸಿನೆಮಾದ ಕಲೆಕ್ಷನ್ ಬಿಡುಗಡೆಯಾದ ಒಂದೇ ವಾರದಲ್ಲಿ 350 ಕೋಟಿ ರೂ ಸನಿಹ ತಲುಪಿ ದಾಖಲೆ ಬರೆದಿದೆ.
ಈ ಸಿನೆಮಾದಲ್ಲಿನ ʻವರ್ಮಾʼ ಹೆಸರಿನ ಖಳ ಪಾತ್ರದಲ್ಲಿ ಮಲಯಾಳಂ ನಟ ವಿನಾಯಕನ್ ಅಭಿನಯಿಸಿದ್ದು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಆದರೆ ಖಳ ನಾಯಕ ʻವರ್ಮಾʼ ಪಾತ್ರಕ್ಕೆ ಮೊದಲ ಆಯ್ಕೆ ವಿನಾಯಕನ್ ಆಗಿರಲಿಲ್ಲ. ಬದಲಾಗಿ ಈ ಪಾತಯ್ರದ ಮೊದಲ ಆಯ್ಕೆ ಮಲಯಾಳಂ ದಿಗ್ಗಜ ನಟ ಮ್ಮಮ್ಮುಟ್ಟಿ ಆಗಿದ್ದರಂತೆ. ʻಜೈಲರ್ʼ ನಲ್ಲಿ ರಜನಿಕಾಂತ್‌ನ ಮಗನ ಪಾತ್ರದಲ್ಲಿ ಅಭಿನಯಿಸಿರುವ ವಸಂತ್ ರವಿ ಅವರೇ ಈ ಮಾಹಿತಿಯನ್ನು ಹೊರಹಾಕಿದ್ದಾರೆ.
ಮಾಧ್ಯಮವೊಂದಕ್ಕೆ ಮಾತನಾಡುವ ವೇಳೆ ವಸಂತ್ ರವಿ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ʻಜೈಲರ್‌ನಲ್ಲಿನ ವಿಲನ್ ರೋಲ್‌ಗೆ ಮಮ್ಮುಟ್ಟಿ ಅವರೇ ಮೊದಲ ಆಯ್ಕೆಯಾಗಿದ್ದರು. ಈ ವಿಚಾರವನ್ನು ಸ್ವತ ರಜನಿ ಸರ್ ಅವರೇ ನನ್ನೊಂದಿಗೆ ಹೇಳಿದ್ದರು. ನಿರ್ದೇಶಕ ನೆಲ್ಸನ್ ಅವರು ಮಮ್ಮುಟ್ಟಿ ಅವರು ವರ್ಮಾ ರೋಲ್‌ಗೆ ಮೊದಲ ಆಯ್ಕೆ ಎಂಬುದಾಗಿ ರಜನಿಕಾಂತ್ ಅವರ ಬಳಿ ಹೇಳಿದಾಗ ನೇರವಾಗಿ ಮಮ್ಮುಟ್ಟಿ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಆದರೆ ಆ ಬಳಿಕ ವಿನಾಯಕ್ ಅವರನ್ನು ಎರಡನೇ ಆಯ್ಕೆಯಾಗಿ ಮಾಡಿಕೊಳ್ಳಲಾಗಿತ್ತು. ಮಮ್ಮುಟ್ಟಿ ಅವರು ಮಲಯಾಳಂನ ಹಿರಿಯ ದಿಗ್ಗಜ ನಟನಾಗಿರುವುದರಿಂದ ಅವರು ವರ್ಮಾ ಪಾತ್ರದಲ್ಲಿ ನಟಿಸುವುದು ರಜನಿಕಾಂತ್ ಅವರಿಗೆ ಯಾಕೋ ಸರಿ ಕಾಣಿಸಿರಲಿಲ್ಲʼ ಎಂದು ಹೇಳಿದ್ದಾರೆ.
ʻಇಷ್ಟೊಂದು ನೆಗೆಟಿವಿಟಿ ಇರುವ ಪಾತ್ರವನ್ನು ದಿಗ್ಗಜ ಎನಿಸಿಕೊಂಡಿರುವ ಮಮ್ಮುಟ್ಟಿ ಅವರಿಂದ ಮಾಡಿಸುವುದು ಉತ್ತಮ ನಡೆಯಾಗಿರಲಿಲ್ಲ. ಅದು ಅವರಿಗಾಗಿ ಮಾಡಿರುವ ಪಾತ್ರವೂ ಆಗಿರಲಿಲ್ಲ. ಹಾಗಾಗಿ ಈ ವಿಚಾರವನ್ನು ಮಮ್ಮುಟ್ಟಿ ಅವರಿಗೆ ಮನವರಿಕೆ ಮಾಡಿಕೊಟ್ಟ ರಜನಿಕಾಂತ್ ಮುಂದೊಂದು ದಿನ ನಾವಿಬ್ಬರೂ ಜೊತೆಯಾಗಿ ಇನ್ನೊಂದು ಸಿನೆಮಾದಲ್ಲಿ ನಟಿಸೋಣʼ ಎಂದಿದ್ದರು ಎಂದು ವಸಂತ್ ರವಿ ಹೇಳಿದ್ದಾರೆ.
ಇದನ್ನೂ ಓದಿ: Jailer: ರಜಿನಿಕಾಂತ್ ʼಜೈಲರ್ʼಗೂ ಪ್ರಭಾಸ್ ʼಸಲಾರ್ʼಗೂ ಇದೆ ಒಂದು ಕನೆಕ್ಷನ್: ಏನದು?