Advertisement
2017ರಲ್ಲಿ ಊರ್ವಶಿ ಥಿಯೇಟರ್ಸ್ ಲಾಂಛನದಲ್ಲಿ ಸಂದೀಪ್ ಸೇನನ್ ಹಾಗೂ ಅನೀಶ್ ಥಾಮಸ್ ನಿರ್ಮಿಸಿದ ಈ ಚಿತ್ರವನ್ನು ದಿಲೀಶ್ ಪೋತನ್ ಎಂಬವರು ನಿರ್ದೇಶಿಸಿದ್ದಾರೆ. ಮುಖ್ಯ ಕಲಾಕಾರರಾಗಿ ಫಹಾದ್ ಫಾಜಿಲ್, ಸೂರಜ್ ವೆಂಜಾರಮೂಡು, ನಿಮಿಶಾ ಸಜಯನ್, ಅಲೆನ್ಶಿಯರ್ ಲೆಲೋಪೆಜ್, ಸಿಬಿ ಥಾಮಸ್ ಮುಂತಾದವರಿದ್ದಾರೆ. ರಾಜೀವ ರವಿ ಕ್ಯಾಮೆರಾ ಹಿಡಿದಿದ್ದಾರೆ. ಬಿಜಬಲ್ ಅನ್ನುವವರ ಸಂಗೀತವಿದೆ. ಸಜೀವ್ ಪಾಜೂರ್ ಹಾಗೂ ಶ್ಯಾಮ್ ಪುಷ್ಕರನ್ ಅವರ ಚಿತ್ರಕತೆ. (ಇಲ್ಲಿ ಕೆಲವರ ಹೆಸರುಗಳು ಕನ್ನಡಿಗರಿಗೆ ಅಪರೂಪವಾಗಿರಬಹುದು.) ಕೇರಳದ ಚೇರ್ತಲೈ ಮತ್ತು ವೈಕೊಮ್ ಮತ್ತು ನಮ್ಮ ಕಾಸರಗೋಡಿನ ಶೇಣಿಯ ಹತ್ತಿರ ಚಿತ್ರೀಕರಣಗೊಂಡ ಈ ನೂರಮೂವತ್ತೆದು ನಿಮಿಷಗಳ ಚಿತ್ರ ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದೆಯಲ್ಲದೆ ಗಲ್ಲಾಪೆಟ್ಟಿಗೆಯಲ್ಲೂ ಇಪ್ಪತ್ತು ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಗಳಿಕೆ ಕಂಡಿದೆ.
Related Articles
Advertisement
ಮಲಯಾಳ ಚಿತ್ರರಂಗದಲ್ಲಿ ಚಿಕ್ಕ ಚಿಕ್ಕ ಕಾಮೆಡಿ ಪಾತ್ರಗಳನ್ನೇ ಮಾಡುತ್ತಿದ್ದ ನಟರು, ನಾಯಕ ನಟರಾಗಿ ಬಂದ ಚಿತ್ರಗಳ ಪರಂಪರೆಯೇ ಇದೆ. ಅದಮಿಂಟೆ ಮಕನ್ ಅಬು, ಆಲೊರುಕ್ಕಂ ಕೆಲವು ಉದಾಹರಣೆಗಳು. ಹಾಗೆ ಅಭಿನಯಿಸುತ್ತಿದ್ದ ಸೂರಜ್ ವೆಂಜಾರಮೂಡು ಹಿಂದೆ ನೂರಾರು ಚಿತ್ರಗಳಲ್ಲಿ ಕಾಮೆಡಿ ಪಾತ್ರ ಮಾಡಿದವರಾದರೂ ಇಲ್ಲಿ ಅವರದ್ದು ಸರ ಕಳೆದುಕೊಂಡ ಹೆಣ್ಣಿನ ಪ್ರಿಯಕರನಾಗಿ ಗಂಭೀರ ಪಾತ್ರ. ಮಾತ್ರವಲ್ಲ, ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ಅಭಿನಯ ಅವರದ್ದು. ಪೊಲೀಸ್ ಅಧಿಕಾರಿ ಚಂದ್ರನ್ ಪಾತ್ರದಲ್ಲಿ ಅಲೆನ್ಶಿಯರ್ ಲೆಲೋಪೆಜ್ ವಿಶೇಷವಾಗಿ ನಮ್ಮ ಗಮನ ಸೆಳೆಯುತ್ತಾರೆ. ಅದಕ್ಕಾಗಿ ಅವರಿಗೆ ಶ್ರೇಷ್ಠ ಪೋಷಕ ಪಾತ್ರವೆಂದು ಕೇರಳ ರಾಜ್ಯಪ್ರಶಸ್ತಿಯೂ ಸಿಕ್ಕಿದೆ. ಅನೇಕ ನಿಜಜೀವನದ ಪೊಲೀಸರ ಜೊತೆಗೆ ಠಾಣಾ ಇನ್ಸ್‌ಪೆಕ್ಟರ್ ಆಗಿ ಸಿಬಿ ಥಾಮಸ್ ಅವರ ಕೆಲಸವೂ ಶ್ಲಾಘ್ಯವಾಗಿದೆ. ಠಾಣೆಯ ದೃಶ್ಯಗಳಂತೂ ಉಲ್ಲೇಖನೀಯ. ಮೊದಲ ಚಿತ್ರವಾದರೂ ಪಕ್ಕದ ಮನೆ ಹುಡುಗಿಯಂತೆ ಶ್ರೀಜಾಳಾಗಿ ನಿಮಿಶಾ ಸಜಯನ್ ಮೆಚ್ಚುಗೆಗೆ ಪಾತ್ರವಾಗುತ್ತಾರೆ.
ಇದರ ನಿರ್ದೇಶಕ ದಿಲೀಶ್ ಪೋತನ್ ಅವರು, “”ಈ ಸಿನೆಮಾವನ್ನು ಯಾವ ಜೋನರ್‌ಗೆ ಇದನ್ನು ಸೇರಿಸಬೇಕು ಅನ್ನುವುದು ತನಗೆ ತಿಳಿಯದು” ಅನ್ನುತ್ತಾರೆ. ಗಂಭೀರ ವಸ್ತುವುಳ್ಳ ಚಿತ್ರವಾದರೂ ಇದನ್ನು ತುಂಬ ಲವಲವಿಕೆಯ ಚಿತ್ರವಾಗಿ ಕಟ್ಟಿದ್ದಾರೆ. ತುಂಬ ಕಾಮೆಡಿ ಸನ್ನಿವೇಶಗಳಿವೆ. ಕಿವಿಗೆ ಇಂಪಾದ ಮೂರು ಹಾಡುಗಳಿವೆ. ಅದಕ್ಕೇ ಈ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಚಿತ್ರಕಥೆ ಅನ್ನುವ ಮೂರು ರಾಷ್ಟ್ರೀಯ ಪ್ರಶಸ್ತಿಗಳ ಜೊತೆ ಕೇರಳ ರಾಜ್ಯದ ಎರಡು ಪ್ರಶಸ್ತಿ ಮತ್ತು ಏಶಿಯಾ ನೆಟ್‌ಫಿಲ್ಮ್ನ ನಾಲ್ಕು ಪ್ರಶಸ್ತಿಗಳು ದೊರಕಿವೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಜ್ಯೂರಿಗಳ ಮುಖ್ಯಸ್ಥರಾದ ಶೇಖರ ಕಪೂರ್ ಅವರು ಇದನ್ನು ಕುರಿತಂತೆ “ಬ್ರಿಲಿಯಂಟ್ ಫಿಲ್ಮ್. ಮನಸ್ಸು ತಟ್ಟುವ ಅಭಿನಯ. ಮೊದಲಿಗೆ ಇದೊಂದು ಸಾಮಾನ್ಯ ಪ್ರೇಮಕಥೆ ಮತ್ತು ಊರುಬಿಟ್ಟು ಓಡಿಹೋಗುವ ಪ್ರಣಯಿಗಳ ಕತೆ ಎಂದನ್ನಿಸಬಹುದು. ಆದರೆ, ಚಿತ್ರವನ್ನು ಬಹಳ ಸೂಕ್ಷ್ಮವಾಗಿ ಬೆಳೆಸುತ್ತಾರೆ! ಚಿತ್ರ ಗಂಭೀರವಾಗಿ ಸಾಗಿದಂತೆಲ್ಲ ಆತಂಕ ಹೆಚ್ಚುತ್ತದೆ. ನಾನೆಂದೂ ಕಲಾವಿದರು ಇಷ್ಟು ಅದ್ಭುತವಾದ ಅಭಿನಯ ಕೊಟ್ಟ ಚಿತ್ರವನ್ನೇ ನೋಡಿಲ್ಲ’ ಎಂದು ಷರಾ ಬರೆದಿದ್ದಾರೆ.
ಪ್ರಶಸ್ತಿಗಾಗಿ ಮಾಡಿದ ಚಿತ್ರ ಎಂದು ಮೂಗು ಮುರಿದುಕೊಳ್ಳಬೇಡಿ. ಈಗ ಇದು ಇಂಗ್ಲಿಷ್ ಸಬ್‌ಟೈಟಲ್ ಸಮೇತ ನೆಟ್‌ಫ್ಲಿಕ್ಸ್‌ನಲ್ಲಿ, ಅಮೆಜಾನಿನಲ್ಲಿ ಅಥವಾ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ. ನಿಮ್ಮ ಮನೆಯ ಟೀವಿಯಲ್ಲಿಯೇ ನೋಡಲು ಸಾಧ್ಯ. ಮನೆಯವರೆಲ್ಲರೂ ಒಟ್ಟಿಗೆ ಕೂತು ನೋಡಬಹುದು. ನೀವಿದನ್ನು ಬಹಳ ಇಷ್ಟಪಡುತ್ತೀರಿ.
ಗೋಪಾಲಕೃಷ್ಣ ಪೈ