ಕೊಚ್ಚಿ : ಕಳೆದ ಫೆ.17ರಂದು ಮಲಯಾಳಂ ಚಿತ್ರ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಲಾದ ಪ್ರಕರಣದ ಮುಖ್ಯ ಆರೋಪಿ ಪಲ್ಸರ್ ಸುನೀಲ್ ಕುಮಾರ್ ಮತ್ತು ಆತನ ಸಹಚರನಾಗಿರುವ ಇನ್ನೋರ್ವ ಆರೋಪಿ ವಿಗೀಶ್ ನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಪಲ್ಸರ್ ಸುನೀಲ್ ಕುಮಾರ್ ತನ್ನ ಸಹಚರ ವಿಜೀಶ್ ಜತೆಗೆ ಇಂದು ಇಲ್ಲಿನ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ಶರಣಾಗಲು ಬಂದಿದ್ದ. ನ್ಯಾಯಾಲಯದಲ್ಲಿನ ಆರೋಪಿಯ ಕಟಕಟೆಯಿಂದ ಪೊಲೀಸರು ಪಲ್ಸರ್ ಸುನೀಲ್ ಕುಮಾರ್ ನನ್ನು ಬಲವಂತವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು.
ಆಗ ಅಲ್ಲಿದ್ದ ವಕೀಲರು ಪೊಲೀಸರ ಈ ಬಲವಂತದ ಕೃತ್ಯವನ್ನು ಪ್ರತಿಭಟಿಸಿದರು. ಪಲ್ಸರ್ ಸುನೀಲ್ ನ್ಯಾಯಾಲಯಕ್ಕೆ ಬಂದಿದ್ದಾಗ ನ್ಯಾಯಾಧೀಶರು ಮಧ್ಯಾಹ್ನದ ಊಟಕ್ಕಾಗಿ ತೆರಳಿದ್ದರು. ಹಾಗಾಗಿ ಅವರು ತಮ್ಮ ಸೀಟಿನಲ್ಲಿ ಇರಲಿಲ್ಲ.
ಪಲ್ಸರ್ ಸುನೀಲ್ ಮತ್ತು ಆತನ ಸಹವರ್ತಿ ವಿಗೀಶ್ ಇಂದು ಮಧ್ಯಾಹ್ನ 1.10ರ ಸುಮಾರಿಗೆ ಎಸಿಜೆಎಂ ಕೋರ್ಟಿಗೆ ಬಂದಿದ್ದರು. ಮ್ಯಾಜಿಸ್ಟ್ರೇಟರ ಕುರ್ಚಿ ಖಾಲಿ ಇದ್ದುದನ್ನು ಕಂಡ ಪೊಲೀಸರು ಇದೇ ಸರಿಯಾದ ಸಮಯವೆಂದು ತಿಳಿದು ಆರೋಪಿಗಳ ಬಾಕ್ಸ್‌ನಲ್ಲಿ ನಿಂತಿದ್ದ ಸುನೀಲ್‌ನನ್ನು ಒಡನೆಯೇ ಬಂಧಿಸಿದರು. ಪೊಲೀಸರು ಬಂಧಿಸುವಾಗ ಸುನೀಲ್ ಅವರ ಕೈಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದನಾದರೂ ಅದರಿಂದ ಪ್ರಯೋಜನವಾಗಲಿಲ್ಲ.
ಆದರೆ ಕೋರ್ಟ್ ಒಳಗಿದ್ದ ವಕೀಲರು ಪೊಲೀಸರನ್ನು ಪ್ರತಿಭಟಿಸಿದರು.ಪರಿಣಾಮವಾಗಿ ಗೊಂದಲ, ಗಲಾಟೆಯ ವಾತಾವರಣ ಸೃಷ್ಟಿಯಾಯಿತು. ಈ ನಡುವೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಸುನೀಲ್ ನೆಲಕ್ಕೆ ಉರುಳಿ ಬಿದ್ದ. ಆದರೂ ಪೊಲೀಸರು ಆತನನ್ನು ದರದರನೆ ಎಳೆದುಕೊಂಡು ತಮ್ಮ ವ್ಯಾನಿಗೆ ಹಾಕಿ ಠಾಣೆಗೆ ಒಯ್ದರು.
ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಲಾದ ಪ್ರಕರಣದಲ್ಲಿ ಪೊಲೀಸರು ಈಗಾಗಲೇ, ನಟಿಯ ಕಾರು ಚಾಲಕ ಮಾರ್ಟಿನ್ ಸಹಿತ, ಇತರ ನಾಲ್ವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಆದರೆ ಮುಖ್ಯ ಆರೋಪಿ ಸುನೀಲ್ ಕುಮಾರ್ ಮತ್ತು ವಿಗೀಶ್ ಕಳೆದ ಆರು ದಿನಗಳಿಂದಲೂ ತಲೆಮರೆಸಿಕೊಂಡಿದ್ದರು. ಫೆಬ್ರವರಿ 17ರಂದು ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳದ ಘಟನೆ ನಡೆದಿತ್ತು.