ಈ ಹಿಂದೆ “ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಚಿತ್ರದ ಮೂಲಕ ನೋಡುಗರ ಗಮನ ಸೆಳೆದಿದ್ದ ನಟ ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸುತ್ತಿರುವ ಎರಡನೇ ಚಿತ್ರ “ಹಾಫ್’ ಸದ್ಯ ಚಿತ್ರೀಕರಣದಲ್ಲಿ ನಿರತವಾಗಿದೆ. ಇದೀಗ “ಟಿಕ್ ಟಾಕ್’ ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿದ್ದ ಮಲೆಯಾಳಿ ಅಥಿರಾ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಮಲಯಾಳಂನಲ್ಲಿ “ಲಾಲ್ ಜೋಸ್’ ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದ ಅಥಿರಾ, ಇದೀಗ “ಹಾಫ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಚಿತ್ರದಲ್ಲಿ ಬೋಲ್ಡ್ ಆ್ಯಂಡ್ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಥಿರಾ, ಕನ್ನಡದ ಮೊದಲ ಚಿತ್ರದಲ್ಲೇ ಉತ್ತಮ ಪಾತ್ರ ಸಿಕ್ಕಿದೆ ಎಂಬ ಖುಷಿಯಲ್ಲಿದ್ದಾರೆ.
ಇತ್ತೀಚೆಗೆ “ಹಾಫ್’ ಚಿತ್ರತಂಡ ಚಿತ್ರದ ನಾಯಕಿ ಅಥಿರಾ ಅವರ ಮೊದಲ ಪೋಸ್ಟರ್ ಬಿಡುಗಡೆ ಮಾಡಿದೆ. ಸದ್ಯ ಬಿಡುಗಡೆಯಾಗಿರುವ “ಹಾಫ್’ ಪೋಸ್ಟರ್ನಲ್ಲಿ ಅಥಿರಾ ಲುಕ್ ನೋಡುಗರ ಗಮನ ಸೆಳೆಯುತ್ತಿದೆ.
ಉಳಿದಂತೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿ, ಅಭಿನಯಿಸುತ್ತಿರುವ “ಹಾಫ್’ ಚಿತ್ರದಲ್ಲಿ ಲೋಕೇಂದ್ರ ಸೂರ್ಯ, ಅಥಿರಾ ಅವರೊಂದಿಗೆ ಆಸಿಯಾ, ರಾಜು ಕಲ್ಕುಣಿ, ಡಾ. ಪವಿತ್ರಾ ಆರ್. ಪ್ರಭಾರ್ಕ ರೆಡ್ಡಿ, ರಕ್ಷಾ, ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್, ಮೋಹನ್ ನೆನಪಿರಲಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರಕ್ಕೆ ಮಲ್ಲಿಕಾರ್ಜುನ್ ಬಿ.ಆರ್. ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ರಾಕಿ ಸೋನು ಸಂಗೀತ ಸಂಯೋಜಿಸುತ್ತಿದ್ದಾರೆ. ಸದ್ಯ ಚಿತ್ರೀಕರಣದಲ್ಲಿ ನಿರತವಾಗಿರುವ “ಹಾಫ್’ ಚಿತ್ರ ಇದೇ ವರ್ಷದ ಮಧ್ಯ ಭಾಗಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.