Advertisement

14 ದಿನಗಳ ನ್ಯಾಯಾಂಗ ವಶಕ್ಕೆ ನಟ ದಿಲೀಪ್‌

02:10 AM Jul 12, 2017 | Team Udayavani |

ಕೊಚ್ಚಿ: ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಬಂಧಿತರಾಗಿರುವ ಮಲಯಾಳ ನಟ ದಿಲೀಪ್‌ ಅವರನ್ನು ಮಂಗಳವಾರ ಅಂಗಮಾಲಿಯ ಕೋರ್ಟೊಂದು 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಬಿಗು ಭದ್ರತೆಯಲ್ಲಿ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಮ್ಯಾಜಿಸ್ಟ್ರೇಟರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಬಳಿಕ ಅವರನ್ನು ಅಲುವಾ ಜೈಲಿಗೆ ಸ್ಥಳಾಂತರಿಸಲಾಗಿದೆ. ಇದೇ ವೇಳೆ ದಿಲೀಪ್‌ ಪರ ವಕೀಲರು, ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದ್ದು, ಬುಧವಾರ ವಿಚಾರಣೆ ನಡೆಯಬಹುದು ಎಂದಿದ್ದಾರೆ.

Advertisement

ಇನ್ನೊಂದೆಡೆ, ದಿಲೀಪ್‌ ಬಂಧನವಾದಂತೆಯೇ ಮಲಯಾಳ ಸಿನಿ ಕಲಾವಿದರ ಒಕ್ಕೂಟದಿಂದ (ಅಮ್ಮ) ಅವರನ್ನು ವಜಾ ಮಾಡಲಾಗಿದೆ. ನಟ ಮಮ್ಮೂಟ್ಟಿ ಅವರ ನಿವಾಸದಲ್ಲಿ ಒಕ್ಕೂಟದ ಸಭೆ ಸೇರಲಾಗಿದ್ದು, ಈ ವೇಳೆ ದಿಲೀಪ್‌ ಅವರನ್ನು ವಜಾ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಕೇರಳ ಸಿನಿರಂಗದ ಅತಿ ವಿವಾದಿತ ಪ್ರಕರಣ ಇದಾಗಿದ್ದು, ಈ ಹಿನ್ನೆಲೆಯಲ್ಲಿ ನಟರಾದ ಮೋಹನ್‌ಲಾಲ್‌, ಪೃಥ್ವಿರಾಜ್‌ ಮತ್ತಿತರರು ನಟಿ ಪರವಾಗಿ ನಿಂತಿದ್ದು, ನಟನ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು. ಇದೇ ವೇಳೆ, ದಿಲೀಪ್‌ ಬಂಧನ ಮಲಯಾಳ ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ. ದಿಲೀಪ್‌ ತಾರಾಗಣ ಹೊಂದಿದ್ದ ಸಿನೆಮಾ ನಿರ್ಮಾಣ, ನಿರ್ದೇಶನ ಮಾಡುತ್ತಿದ್ದ ಚಿತ್ರ ನಿರ್ಮಾಪಕರು, ನಿರ್ದೇಶಕರು ಕಂಗಾಲಾಗಿದ್ದಾರೆ. ಅವರ ಬಂಧನದಿಂದ 50-60 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ. ಇದೇ ವೇಳೆ ಬಹುಕೋಟಿ ವೆಚ್ಚದ, ದಿಲೀಪ್‌ ಅಭಿನಯದ ‘ರಾಮಲೀಲಾ’ ಚಿತ್ರ ಬಿಡುಗಡೆ ಮುಂದೂಡಲಾಗಿದೆ. ಇನ್ನು ಕೆಲವು ಚಿತ್ರಗಳು ಶೂಟಿಂಗ್‌ನ ಅರ್ಧ ಭಾಗದಲ್ಲಿದ್ದು, ಚಿತ್ರ ತಂಡಗಳು ಗೊಂದಲಕ್ಕೀಡಾಗಿವೆ.

ಯಾರು ತಪ್ಪೆಸಗಿದ್ದಾರೋ ಅವರ ವಿರುದ್ಧ ಪೊಲೀಸ್‌ ಕ್ರಮ ಶತಃಸ್ಸಿದ್ಧ. ಕಾನೂನಿನ ಕೈಯಿಂದ ಅವರು ಪಾರಾಗಲು ಸಾಧ್ಯವಿಲ್ಲ.
– ಪಿಣರಾಯಿ ವಿಜಯನ್‌, ಕೇರಳ ಸಿಎಂ 

Advertisement

Udayavani is now on Telegram. Click here to join our channel and stay updated with the latest news.

Next