Advertisement

ಮಳವೂರು ಸೇತುವೆ ಮೇ ತಿಂಗಳಲ್ಲಿ ಪೂರ್ಣ

10:25 AM Apr 26, 2022 | Team Udayavani |

ಬಜಪೆ: ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಬಹು ಬೇಡಿಕೆ ಮಳವೂರು ಹೊಸ ಸೇತುವೆಯ ಕಾಮಗಾರಿಯು ಶೇ. 90ರಷ್ಟು ಪೂರ್ಣಗೊಂಡಿದ್ದು, ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

Advertisement

ಲೋಕೋಪಯೋಗಿ ಇಲಾಖೆಯ ಸುಮಾರು 50 ಕೋ.ರೂ. ಅನುದಾನದಲ್ಲಿ ಮಂಗಳೂರು ತಾಲೂಕಿನ ಮಂಗಳೂರು ಅತ್ರಾಡಿ ರಾಜ್ಯ ಹೆದ್ದಾರಿ 67 ಚತುಷ್ಪಥ ರಸ್ತೆ ನಿರ್ಮಾಣ ಹಾಗೂ ನೂತನ ಸೇತುವೆಯ ನಿರ್ಮಾಣ ಕಾರ್ಯಕ್ಕೆ 2021ರಲ್ಲಿ ಫೆ. 7ರಂದು ಶಂಕುಸ್ಥಾಪನೆ ನೆರೆವೇರಿತ್ತು. ಮಂಗಳೂರು ನಗರ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಈ ಹೊಸ ಸೇತುವೆ ಸುಮಾರು 10 ಮೀಟರ್‌ ರಸ್ತೆ ಮತ್ತು ಒಂದು ಬದಿ (ಪಶ್ವಿ‌ಮ ದಿಕ್ಕಿನಲ್ಲಿ) 1.5ಮೀ. ಪುಟ್‌ಪಾತ್‌ ಇದ್ದು ಒಟ್ಟು 12 ಮೀ. ಅಗಲ, 200 ಮೀ. ಉದ್ದವಾಗಿದೆ. 8 ಆಧಾರ ಸ್ತಂಭಗಳ ನಿರ್ಮಾಣ ಕಾಮಗಾರಿ ಮುಗಿದು ಸ್ಲ್ಯಾಬ್‌ನ ಮುಕ್ತಾಯ ಹಂತದ ಕಾಮಗಾರಿಗಳು ನಡೆಯುತ್ತಿವೆ. ಸೇತುವೆಗೆ ಸುಮಾರು 13 ಕೋ.ರೂ. ಅನುದಾನ ಮೀಸರಿಸಲಾಗಿದೆ.

ಇದಕ್ಕೆ ಸಂಪರ್ಕಿಸುವ ಚತುಷ್ಪಥ ರಸ್ತೆ ಸುಮಾರು 14 ಮೀ. ಅಗಲವಾಗಿದ್ದು ಇದರಲ್ಲಿ ಇಕ್ಕೆಲದಲ್ಲಿ 1.5ಮೀ. ಪುಟ್‌ಪಾತ್‌, ಮಧ್ಯೆ 1.5 ಮೀ. ಡಿವೈಡರ್‌ಗಳ ಕಾಮಗಾರಿಗಳು ಸೇರಿಕೊಂಡಿವೆ. ರಸ್ತೆ, ತಡೆಗೋಡೆ, ಕಾಲುವೆ, ರೈಲ್ವೇ ಅಂಡರ್‌ ಪಾಸ್‌, ಕಾಂಕ್ರೀಟ್‌ ಮೋರಿ, ವಿಮಾನ ನಿಲ್ದಾಣದ ವಿದ್ಯುತ್‌ ತಂತಿ ಹಾಗೂ ಕಂಬ ವರ್ಗಾವಣೆಗಳ ಕಾಮಗಾರಿ ನಡೆಯಬೇಕಿದೆ.

100 ಮಂದಿ ಕಾಂಕ್ರೀಟ್‌, ಸೆಂಟ್ರಿಂಗ್‌, ಬಾರ್‌ಬ್ಯಾಂಡಿಂಗ್‌ ಕಾರ್ಮಿಕರು, ಜೆಸಿಬಿ, ಇಟಾಚಿ, ಟಿಪ್ಪರ್‌ನ ಒಟ್ಟು 25 ಚಾಲಕರು ಬೆಳಗ್ಗಿನಿಂದ ರಾತ್ರಿ 11 ತನಕ ಸೇತುವೆ ಕಾಮಗಾರಿ ಗಳಲ್ಲಿ ನಿರತರಾಗಿದ್ದಾರೆ. ಮಳೆಗಾಲ ಆರಂಭದ ಮೊದಲೇ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ರಸ್ತೆಯ ತಡೆಗೋಡೆಗಳು, ಕೆಲವೆಡೆ ಮಣ್ಣು ತುಂಬಿಸುವ ಕಾರ್ಯ ಮಳೆಯ ಬರುವ ಮುಂಚೆ ಮಾಡಲಾಗುವುದು.

Advertisement

ಮಂಗಳೂರು ಬದಿಯ ಸೇತುವೆಯ ಸಂಪರ್ಕ ರಸ್ತೆಯ ಮಣ್ಣು ತುಂಬಿಸುವ ಕಾರ್ಯ ಈಗಾಗಲೇ ನಡೆದಿದೆ. ಮರವೂರು ಬದಿಯ ಸೇತುವೆಯ ಸಂಪರ್ಕ ರಸ್ತೆಯ ಮಣ್ಣು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ. ಕೆಂಜಾರಿನಲ್ಲಿ ರಸ್ತೆ ವಿಸ್ತರಣೆ ವೇಳೆ ಬಂಡೆಗಳು ಸಿಕ್ಕಿದ ಕಾರಣ ಕಾಮಗಾರಿ ಸ್ವಲ್ಪ ನಿಧಾನ ಗತಿಯಲ್ಲಿ ಸಾಗುತ್ತಿದೆ. ಹೊಸ ಸೇತುವೆ ಕಾಮಗಾರಿ ಪ್ರಗತಿಯಲ್ಲಿ ಮರವೂರು ಹೊಸ ಸೇತುವೆಯ ಕಾಮಗಾರಿಗಳು ವೇಗವಾಗಿ ಸಾಗುತ್ತಿದೆ.

ಹೊಸ ಸೇತುವೆ ಕಾಮಗಾರಿ ಪ್ರಗತಿಯಲ್ಲಿ

ಮರವೂರು ಹೊಸ ಸೇತುವೆಯ ಕಾಮಗಾರಿಗಳು ವೇಗವಾಗಿ ಸಾಗುತ್ತಿದೆ. ಮೇ ತಿಂಗಳಲ್ಲಿ ಸೇತುವೆ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ಅದರೆ ಅದಕ್ಕೆ ಸಂಪರ್ಕಿಸುವ ಚತುಷ್ಪಥ ರಸ್ತೆ ಮಾತ್ರ ಈ ಸಾಲಿನಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಕೆಲವೊಂದು ತಾಂತ್ರಿಕ ಕಾರಣ, ರೈಲ್ವೇ ಅಂಡರ್‌ ಪಾಸ್‌, ವಿದ್ಯುತ್‌ ತಂತಿ ಹಾಗೂ ಕಂಬಗಳ ವರ್ಗಾವಣೆ, ತಡೆಗೋಡೆಗಳ ನಿರ್ಮಾಣದಿಂದ ಮುಂದಿನ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. ಮಹಾನಗರ ಪಾಲಿಕೆಯ ಸ್ವಾಗತ ದ್ವಾರದಿಂದ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ತನಕ ರಸ್ತೆ ಚತುಷ್ಪಥ ಕಾಮಗಾರಿಗಳು ನಡೆಯಲಿದೆ. ಯಶವಂತ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಲೋಕೋಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next