Advertisement
ಪಟ್ಟಣದೊಳಗೆ ಇದುವರೆಗೂ ಸುಂದರವಾದ ಬಡಾವಣೆಗಳು ರಚನೆಯಾಗಿಲ್ಲ. ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದ ನೈರ್ಮಲ್ಯ ಹಾಳಾಗಿದೆ. ಕೊಳಾಯಿ ಸಂಪರ್ಕಗಳಿಗೆ ಪ್ರಭಾವಿಗಳು ನೇರವಾಗಿ ಮೋಟಾರ್ ಪಂಪ್ ಅಳವಡಿಸಿಕೊಂಡಿದ್ದರೂ ಕೇಳ್ಳೋರಿಲ್ಲ. ಸ್ವಚ್ಛತೆಯ ಬಗ್ಗೆಯಂತೂ ಮಾತನಾಡು ವಂತೆಯೇ ಇಲ್ಲ. ಸಾರ್ವಜನಿಕ ಆಸ್ಪತ್ರೆ ಹಲವು ಅವ್ಯವಸ್ಥೆಗಳ ಗೂಡಾಗಿದ್ದು, ಮಹಿಳಾ ಆಸ್ಪತ್ರೆ ಕಟ್ಟಡ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ರಸ್ತೆಗಳ ಸ್ಥಿತಿ ಉತ್ತಮಗೊಂಡಿಲ್ಲ. ಕಿರಿದಾಗಿರುವ ರಸ್ತೆಗಳು ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿವೆ. ಪಟ್ಟಣದೊಳಗೆ ಅವ್ಯವಸ್ಥೆಗಳು ತಾಂಡವವಾಡುತ್ತಿರುವ ನಡುವೆಯೇ ಮಳವಳ್ಳಿ ಪುರಸಭೆಗೆ ಚುನಾವಣೆ ಘೋಷಣೆಯಾಗಿದೆ.
Related Articles
Advertisement
ಕೊಳಾಯಿಗಳಿಗೆ ಮೋಟಾರ್ ಪಂಪ್ ಅಳವಡಿಕೆ: ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಸುವ ಕೊಳಾಯಿ ಸಂಪರ್ಕಗಳು ಉತ್ತಮವಾಗಿಲ್ಲ. ಪ್ರಭಾವಿಗಳು ಕೊಳಾಯಿ ಸಂಪರ್ಕಗಳಿಗೆ ನೇರವಾಗಿ ಮೋಟಾರ್ ಪಂಪ್ ಅಳವಡಿಸಿಕೊಂಡಿದ್ದಾರೆ. ಅದನ್ನು ಪ್ರಶ್ನಿಸುವ ತಾಕತ್ತನ್ನು ಯಾರೂ ಪ್ರದರ್ಶಿಸುತ್ತಿಲ್ಲ. ಕೊಳಾಯಿ ಸಂಪರ್ಕಗಳಿಗೆ ಟ್ಯಾಪ್‌ಗ್ಳನ್ನು ಸರಿಯಾಗಿ ಅಳವಡಿಸಿಲ್ಲದ ಕಾರಣ ನೀರು ಸರಬರಾಜು ವೇಳೆ ಎಗ್ಗಿಲ್ಲದೆ ಪೋಲಾಗುತ್ತಿದ್ದರೂ ಯಾರೂ ಗಮನಹ ರಿಸುತ್ತಿಲ್ಲ. ನೀರು ಪೂರೈಕೆಗೂ ನಿಗದಿತ ಸಮಯ ನಿಗದಿಪಡಿಸಿಲ್ಲ. ಇಷ್ಟಬಂದ ಸಮಯಕ್ಕೆ ನೀರು ಬಿಡುತ್ತಿರುವುದರಿಂದ ಪಟ್ಟಣದ ಜನರು ನೀರಿಗಾಗಿ ಕಾದು ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ವಚ್ಛತೆ ಸಂಪೂರ್ಣ ಹಾಳು: ಪಟ್ಟಣದ ಸ್ವಚ್ಛತೆಯಂತೂ ಸಂಪೂರ್ಣ ಹಾಳಾಗಿದೆ. ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರಮುಖ ರಸ್ತೆಗಳಲ್ಲಿ ಶುಚಿತ್ವ ಕಾಪಾಡುವುದನ್ನು ಬಿಟ್ಟರೆ ಪಟ್ಟಣದೊಳಗೆ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸೌಂದರ್ಯ ಹೆಚ್ಚಿಸುವ ಬದ್ಧತೆಯನ್ನು ಯಾರೊಬ್ಬರೂ ಪ್ರದರ್ಶಿಸುತ್ತಿಲ್ಲ. ಇದರಿಂದ ಎಲ್ಲೆಲ್ಲೂ ಕಸದ ರಾಶಿಯ ದಿವ್ಯದರ್ಶನವಾಗುತ್ತಿದೆ.
ನಿಯಮಾವಳಿಗಳಿಲ್ಲ: ಕಟ್ಟಡ ಹಾಗೂ ಗೃಹ ನಿರ್ಮಾಣಕ್ಕೆ ಪರವಾನಗಿ ನೀಡುವ ವೇಳೆ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗುತ್ತಿದೆ. ಪಾರ್ಕಿಂಗ್‌ಗೆ ಜಾಗವನ್ನೇ ಬಿಡದೆ ಕಟ್ಟಡಗಳು ಮೇಲೇಳುತ್ತಿರುವುದರಿಂದ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವಂತಹ ಪರಿಸ್ಥಿತಿ ಸೃಷ್ಠಿಯಾಗಿದೆ. ಪಟ್ಟಣದೊಳಗೆ ಅಳವಡಿಸಿರುವ ಬಹುತೇಕ ಹೈಮಾಸ್ಟ್ ದೀಪಗಳು ಹಾಳಾಗಿವೆ. ರಸ್ತೆ ವಿಭಜಕದ ಮಧ್ಯೆ ಅಳವಡಿಸಲಾಗಿರುವ ಬೀದಿ ದೀಪಗಳು ಕೆಟ್ಟು ಕತ್ತಲು ಆವರಿಸಿದ್ದರೂ ಹೊಸ ಬೀದಿ ದೀಪಗಳನ್ನು ಅಳವಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ.
ನಿವೇಶನ ಕೊಟ್ಟಿಲ್ಲ: ಪಟ್ಟಣದ ಶ್ರೀ ಬೀರೇಶ್ವರ ದೇವಸ್ಥಾನದ ಬಳಿ 33 ಎಕರೆ ಪ್ರದೇಶವನ್ನು ಮೀಸಲಿಟ್ಟು ಬಡವರಿಗೆ ನಿವೇಶನಗಳನ್ನಾಗಿ ಪರಿವರ್ತಿಸಿ ಹಂಚುವ ಕೆಲಸವೂ ನಡೆದಿಲ್ಲ. ಇದರಲ್ಲಿ ಹದಿನಾಲ್ಕೂವರೆ ಎಕರೆ ಪ್ರದೇಶಕ್ಕೆ ಹಕ್ಕುಪತ್ರ ವಿತರಿಸಲಾಗಿದ್ದರೂ ಅವುಗಳನ್ನು ನಿವೇಶನಗಳಾಗಿ ಪರಿವರ್ತಿಸಿಲ್ಲ. ಮೂಲ ಸೌಲಭ್ಯಗಳನ್ನೂ ಕಲ್ಪಿಸಿಲ್ಲ. ಇದೂ ಸಹ ನಿವೇಶನ ಆಕಾಂಕ್ಷಿತರ ಆಕ್ರೋಶಕ್ಕೆ ಕಾರಣವಾಗಿದೆ.