ಮಳವಳ್ಳಿ: ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ನ.9 ಹಾಗೂ 10ರಂದು ನಡೆಸಲು ನಿರ್ಧರಿಸಿದ್ದು, ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ಮಳವಳ್ಳಿ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಗನಚುಕ್ಕಿ ಜಲಪಾತ ಧುಮ್ಮಿಕ್ಕಿ ಭೋರ್ಗರೆಯುತ್ತಾ ರಾಜ್ಯದ ಹಾಗೂ ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ರಾಜ್ಯ ಹಾಗೂ ದೇಶಕ್ಕೆ ಪರಿಚಯ ಮಾಡಿಕೊಡುವ ಸಲುವಾಗಿ ಗಗನಚುಕ್ಕಿ ಜಲಪಾತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮೂಲ ಸೌಲಭ್ಯ: ಗಗನಚುಕ್ಕಿ ಜಲಪಾತೋತ್ಸವ ಕಾರ್ಯ ಕ್ರಮದ ರೂಪುರೇಷೆಗಳನ್ನು ಹಾಕಿಕೊಂಡು ಮೂಲ ಸೌಲಭ್ಯಗಳನ್ನು ನೀಡಲು ಬರುವ ಜನರಿಗೆ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ, ವಾಹನಗಳನ್ನು ನಿಲುಗಡೆ ಮಾಡಲು ವಿಶಾಲವಾದ ವಾಹನಾ ನಿಲುಗಡೆ ಸ್ಥಳಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ತಿಳಿಸಿದರು.
ವಿಶೇಷ ಬಸ್ ಸಂಚಾರ: ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮ ವೀಕ್ಷಿಸಲು ಹೆಚ್ಚು ಬರಬೇಕು ಇದಕ್ಕಾಗಿ ಹೆಚ್ಚು ಪ್ರಚಾರ ಮಾಡಿ ಇಲ್ಲಿನ ನೈಸರ್ಗಿಕವಾದ ಸ್ಥಳವನ್ನು ದೇಶಕ್ಕೆ ಪರಿಚಯಿಸಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು. ವೇದಿಕೆಯನ್ನು ಸಮರ್ಪಕವಾಗಿ ಹಾಗೂ ಗುಣಮಟ್ಟದಿಂದ ನಿರ್ಮಾಣ ಮಾಡುವಂತೆ ಹಾಗೂ ವೇದಿಕೆ ಪಕ್ಕದಲ್ಲಿ ಆಹಾರ ಮೇಳದ ಸ್ಟಾಲ್ ಗಳನ್ನು ತೆರೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಕೆಎಸ್‌ಆರ್‌ಟಿಸಿ ಬಸ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರಿಗೆ ಅನುಕೂಲಕ್ಕಾಗಿ ಬಿಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಜಲ ಸಾಹಸ ಕ್ರೀಡೆ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಮಿತಿಯನ್ನು ರಚಿಸಲಾಗುವುದು. ಜಲಪಾತಕ್ಕೆ ಹಾಗೂ ವೇದಿಕೆಗೆ ವಿದ್ಯುತ್ ಅಲಂಕಾರ ಮಾಡುವಂತೆ ಹಾಗೂ ವಿದ್ಯುತ್ ಅಡಚಣೆಯಾಗದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜನರಿಗೆ ಜಲ ಸಾಹಸ ಕ್ರೀಡೆಯನ್ನು ಆಯೋಜಿಸಲಾಗುತ್ತಿದ್ದು ಕಾರ್ಯಕ್ರಮದ ಯಶಸ್ವಿಯಾಗಲು ಸಹಕರಿಸುವಂತೆ ತಿಳಿಸಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಸೂರಜ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹರೀಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.