ಕನ್ನಡ ಚಿತ್ರರಂಗದ “ಕನಸಿನ ರಾಣಿ’ಯಾಗಿ ಸಿನಿಪ್ರಿಯರ ಮನಗೆದ್ದಿದ್ದ ನಟಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಈಗ ನಾಯಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಅಡಿಯಿಡುತ್ತಿದ್ದಾರೆ.
ಹೌದು, ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಪುತ್ರಿ ಅನನ್ಯಾ ಈಗ ರಾಧನಾ ರಾಮ್ ಎಂಬ ಹೆಸರಿನಲ್ಲಿ ಹೀರೋಯಿನ್ ಆಗಿ ಎಂಟ್ರಿಯಾಗಲು ರೆಡಿಯಾಗಿದ್ದು, ತಮ್ಮ ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ನಾಯಕಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 56ನೇ ಸಿನಿಮಾ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದೆ. ಸದ್ಯಕ್ಕೆ ಹೆಸರಿಡದ ಈ ಸಿನಿಮಾದಲ್ಲಿ ರಾಧನಾ ರಾಮ್ ನಾಯಕಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ದಿನದಂದೇ ರಾಧನಾ ರಾಮ್ ಅವರ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ಅಧಿಕೃತವಾಗಿ ನಾಯಕಿಯ ಹೆಸರನ್ನು ಘೋಷಿಸಿದೆ. ಇನ್ನು ಮೊದಲಿನಿಂದಲೂ ಅಭಿನಯದ ಕಡೆಗೆ ಆಸಕ್ತಿ ಬೆಳೆಸಿಕೊಂಡಿರುವ ರಾಧನಾ ರಾಮ್, ಕಳೆದ ನಾಲ್ಕೈದು ವರ್ಷಗಳಿಂದ ಹೀರೋಯಿನ್ ಆಗಲು ಬೇಕಾದ ತಯಾರಿಯನ್ನು ಮಾಡಿಕೊಂಡಿದ್ದಾರೆ. ಸುಮಾರು ಎರಡು ವರ್ಷಗಳಿಂದ ಮುಂಬೈನಲ್ಲಿ ಅಭಿನಯ ತರಬೇತಿಯನ್ನೂ ಪಡೆದುಕೊಂಡ ರಾಧನಾ ರಾಮ್, ಈಗ ಹೀರೋಯಿನ್ ಆಗಿ ಪೂರ್ಣ ಪ್ರಮಾಣದಲ್ಲಿ ತೆರೆಮೇಲೆ ಬರುತ್ತಿದ್ದಾರೆ.
ಇನ್ನು ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದಲ್ಲಿ ನಡೆದ ಈ ಹೊಸ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ನಟಿ ಮಾಲಾಶ್ರೀ ಹಾಗೂ ಅವರ ಪುತ್ರಿ ರಾಧನಾ ರಾಮ್ ಸೇರಿದಂತೆ ಅನೇಕರು ಹಾಜರಿದ್ದರು
ಕ್ರಾಂತಿ ಪೋಸ್ಟರ್ ರಿಲೀಸ್ : ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲೇ ದರ್ಶನ್ ಅಭಿನಯದ “ಕ್ರಾಂತಿ’ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. “ಸರ್ವರಿಗೂ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು. “ಕ್ರಾಂತಿ’ ಚಿತ್ರಕ್ಕೆ ನೀವು ತೋರಿರುವ ಪ್ರೀತಿ-ಅಭಿಮಾನಕ್ಕೆ ನಾವು ಆಭಾರಿಯಾಗಿದ್ದೇವೆ. ನಮ್ಮ ಚಿತ್ರದ ಹೊಸ ಪೋಸ್ಟರ್ ನಿಮಗಾಗಿ..’ ಎಂದು ಟ್ವೀಟ್ ಮಾಡಿರುವ ನಟ ದರ್ಶನ್, “ಕ್ರಾಂತಿ’ಯ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ.